AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಯಾಣದ ಹಿಸಾರ್​ನಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ

ಹಿಸಾರ್‌ನ ಓಂ ಪ್ರಕಾಶ್ ಜಿಂದಾಲ್ ಮಾಡರ್ನ್ ಶಾಲೆಯ ಆವರಣದಲ್ಲಿ ಭಾನುವಾರ ಸ್ಥಾಪಿಸಲಾಗಿರುವ 500 ಹಾಸಿಗೆಗಳ ತಾತ್ಕಾಲಿಕ ಕೊವಿಡ್ ಆರೈಕೆ ಆಸ್ಪತ್ರೆಯನ್ನು ಉದ್ಘಾಟಿಸಲು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಭೇಟಿಯನ್ನು ವಿರೋಧಿಸಿ ಸುಮಾರು 3,000 ಜನರು ಪ್ರತಿಭಟನೆ ನಿರತರಾಗಿದ್ದರು

ಹರ್ಯಾಣದ ಹಿಸಾರ್​ನಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ
ಹಿಸಾರ್ ನಲ್ಲಿ ಸಂಘರ್ಷ
ರಶ್ಮಿ ಕಲ್ಲಕಟ್ಟ
|

Updated on: May 17, 2021 | 12:52 PM

Share

ಹಿಸಾರ್: ಹಿಸಾರ್‌ನಲ್ಲಿ ಭಾನುವಾರ ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು. ಹಿಸಾರ್‌ನ ಓಂ ಪ್ರಕಾಶ್ ಜಿಂದಾಲ್ ಮಾಡರ್ನ್ ಶಾಲೆಯ ಆವರಣದಲ್ಲಿ ಭಾನುವಾರ ಸ್ಥಾಪಿಸಲಾಗಿರುವ 500 ಹಾಸಿಗೆಗಳ ತಾತ್ಕಾಲಿಕ ಕೊವಿಡ್ ಆರೈಕೆ ಆಸ್ಪತ್ರೆಯನ್ನು ಉದ್ಘಾಟಿಸಲು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಭೇಟಿಯನ್ನು ವಿರೋಧಿಸಿ ಸುಮಾರು 3,000 ಜನರು ಪ್ರತಿಭಟನೆ ನಿರತರಾಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಮುಂದುವರಿದ ಘರ್ಷಣೆಯಲ್ಲಿ ಡಿಎಸ್‌ಪಿ ಅಭಿಮನ್ಯು ಲೋಹನ್ ಮತ್ತು ಐವರು ಮಹಿಳಾ ಪೊಲೀಸರು ಸೇರಿದಂತೆ ಸುಮಾರು 50 ರೈತರು ಮತ್ತು 20 ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು 65 ರೈತರನ್ನು ವಶಕ್ಕೆ ಪಡೆದಿದ್ದಾರೆ.

ಬಿಜೆಪಿ-ಜೆಜೆಪಿ ಸರ್ಕಾರ ಮತ್ತು ಸಚಿವರು ಜಿಲ್ಲೆಯಾದ್ಯಂತ ರೈತರ ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಂಬಾಲಾ ಭೇಟಿಯ ಸಂದರ್ಭದಲ್ಲಿ ಖಟ್ಟರ್‌ಗೆ ಕಪ್ಪು ಧ್ವಜಗಳನ್ನು ಪ್ರದರ್ಶಿಸಲಾಗಿತ್ತು . ಹಿಸಾರ್ ಆಡಳಿತವು ಸಿಎಂ ಭೇಟಿಯ ವಿವರಗಳನ್ನು ರಹಸ್ಯವಾಗಿರಿಸಿಕೊಂಡಿತ್ತು ಆದರೆ ರೈತರು ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡರು.

ಲಾಂದ್ರಿ ಟೋಲ್ ಪ್ಲಾಜಾದಲ್ಲಿ 72 ಗ್ರಾಮಗಳ ಪಂಚಾಯಿತಿಗಳು, ಚೌಧರಿವಾಸ್ ಟೋಲ್ ಪ್ಲಾಜಾದಲ್ಲಿ 42 ಗ್ರಾಮಗಳು ಮತ್ತು ಬಡೋಪಟ್ಟಿ ಟೋಲ್ ಪ್ಲಾಜಾದ ಗ್ರಾಮಸ್ಥರು ಶನಿವಾರ ಮುಖ್ಯಮಂತ್ರಿಯನ್ನು ಹಿಸಾರ್‌ಗೆ ಪ್ರವೇಶಿಸಲು ಅನುಮತಿಸದಿರಲು ತೀರ್ಮಾನಿಸಿದ್ದರು. ಅವರು ಪ್ರತಿಭಟನೆಯನ್ನು ನಡೆಸಿ ಕಪ್ಪು ಧ್ವಜಗಳನ್ನು ಸಿಎಂಗೆ ತೋರಿಸಲು ನಿರ್ಧರಿಸಿದರು.

ಹಿಸಾರ್ ಪೊಲೀಸರು ಭಾನುವಾರ ಬೆಳಿಗ್ಗೆ ನಗರದ ಅನೇಕ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಹಿಸಾರ್‌ನ ಕೈಗಾರಿಕಾ ಪ್ರದೇಶದತ್ತ ಸಾಗುತ್ತಿದ್ದ ರೈತರನ್ನು ಮೊದಲು ಜಿಂದಾಲ್ ಚೌಕ್‌ನಲ್ಲಿ, ನಂತರ ಸೆಕ್ಟರ್ 9-11ರ ಬಳಿ ಮತ್ತು ಕೈಗಾರಿಕಾ ಪ್ರದೇಶದ ಬಳಿ ತಡೆದಿದ್ದರು. ಆದರೆ, ರೈತರು ಬ್ಯಾರಿಕೇಡ್‌ಗಳನ್ನು ಮುರಿದು ಮುಖ್ಯಮಂತ್ರಿಯವರ ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಿದ್ದರು.

ಅಶ್ರುವಾಯು ಪ್ರಯೋಗ ನಡೆಸುವ ಮೂಲಕ ಪೊಲೀಸರು ಮಹಿಳೆಯರು ಸೇರಿದಂತೆ ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು, ಪೊಲೀಸರು ಅಶ್ರುವಾಯು ಪ್ರಯೋಗ , ಲಾಠಿ ಪ್ರಹಾರ ಮಾಡುವ ಮೂಲಕ ಅವರನ್ನು ಚದುರಿಸಲು ಪ್ರಯತ್ನಿಸಿದರು. ಇದಕ್ಕೆ ಪ್ರತೀಕಾರವಾಗಿ, ರೈತರು ಪೊಲೀಸರ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು.

ಹಿರಿಯ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಗುರ್ನಮ್ ಸಿಂಗ್ ಚಾರುನಿ ಅವರು ಭಾನುವಾರ ಹಿಸಾರ್ ತಲುಪಿ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

ಬಿಜೆಪಿ ರೈತರ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಬೇಕು. ಈ ರೀತಿಯ ಕ್ರಮವನ್ನು ಸಹಿಸಲಾಗುವುದಿಲ್ಲ ಮತ್ತು ಬಿಜೆಪಿ ಸರ್ಕಾರವನ್ನು ಮೆಚ್ಚಿಸಲು ಆ ರೀತಿ ಮಾಡಬಾರದು. ರೈತರು ಹಿಂದೆ ಸರಿಯುವುದಿಲ್ಲ. ಬಿಜೆಪಿ ವಿರುದ್ಧ ಪ್ರತಿಭಟಿಸಲು ಹೊಸ ಚೈತನ್ಯದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದಿದ್ದಾರೆ ಟಿಕಾಯತ್.

ರೈತರನ್ನು ಕೆರಳಿಸಲು ಮತ್ತು ಮಾನಹಾನಿ ಮಾಡಲು ಹರ್ಯಾಣ ಸರ್ಕಾರ ಸಂಘರ್ಷದ ವಿಧಾನವನ್ನು ಅನುಸರಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಕಾರ್ಯತಂತ್ರವನ್ನು ಸಿದ್ಧಪಡಿಸಲು ಭಾನುವಾರ ರಾತ್ರಿ ಮಾತುಕತೆ ನಡೆಸಲಾಗುವುದು ಎಂದು ಅದು ಹೇಳಿದೆ. ಹಿಸಾರ್‌ನಲ್ಲಿ ನೂರಾರು ರೈತರು ಗಾಯಗೊಂಡಿದ್ದಾರೆ ಮತ್ತು ನಂತರ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡ ಚಾರುನಿ ಸಿಎಂ ಈ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಿಲ್ಲ? ಎಂದು ಕೇಳಿದರು.

ಇಲ್ಲಿಯವರೆಗೆ 450 ರೈತರು ಹುತಾತ್ಮರಾಗಿದ್ದಾರೆಂದು ಸರ್ಕಾರಕ್ಕೆ ತಿಳಿದಿದೆ ಮತ್ತು ರೈತರು ಕೋಪಗೊಂಡಿದ್ದಾರೆ. ಸರ್ಕಾರ ಇನ್ನೂ ಉದ್ದೇಶಪೂರ್ವಕವಾಗಿ ಕೊವಿಡ್ -19 ಮತ್ತು ಗಲಭೆಗಳನ್ನು ಹರಡುತ್ತಿದೆ. ರೈತರು ಸಾವಿನವರೆಗೂ ಹೋರಾಡುತ್ತಾರೆ.ಮುಂಬರುವ ದಿನಗಳಲ್ಲಿ ಯಾವುದೇ ಬಿಜೆಪಿ-ಜೆಜೆಪಿ ರಾಜಕಾರಣಿಗಳು ಯಾವುದೇ ಸ್ಥಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಚಾರುನಿ ಹೇಳಿದರು.

ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ಮಾಡಿದರು: ಹರ್ಯಾಣ ಪೊಲೀಸ್ ಮುಖ್ಯಸ್ಥ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ನಂತರ ಪೊಲೀಸರು ರೈತರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಹರ್ಯಾಣ ಡಿಜಿಪಿ ಮನೋಜ್ ಯಾದವ ಹೇಳಿದ್ದಾರೆ. ಇದು ರಾಜಕೀಯ ಘಟನೆಯಲ್ಲ ಮತ್ತು 500 ಹಾಸಿಗೆಗಳ ಆಸ್ಪತ್ರೆಯನ್ನು ಪ್ರಾರಂಭಿಸಲು ಸಿಎಂ ಮಾನವೀಯ ನೆಲೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಏಕೆಂದರೆ ಹಿಸಾರ್ ಕೊವಿಡ್ -19 ರ ಕೇಂದ್ರವಾಗಿ ಆಗಿ ಹೊರಹೊಮ್ಮಿದೆ ಎಂದು ಯಾದವ್ ಹೇಳಿದರು.

ಆಸ್ಪತ್ರೆಯ ಆವರಣಕ್ಕೆ ನುಗ್ಗುತ್ತಿದ್ದ ರೈತರನ್ನು ನಾವು ಅವರನ್ನು ನಿಲ್ಲಿಸಿದಾಗ, ಅವರು ಕಲ್ಲುಗಳನ್ನು ಹೊಡೆಯಲು ಪ್ರಾರಂಭಿಸಿದರು. ಇದರಿಂದಾಗಿ ನಮ್ಮ ಪೊಲೀಸರಿಗೆ ಗಾಯಗಳಾಗಿವೆ. ಆದ್ದರಿಂದ, ಜನಸಮೂಹವನ್ನು ಚದುರಿಸಲು ಕೇವಲ ಲಾಠಿ ಪ್ರಹಾರ ಮಾಡಬೇಕಾಯಿತು ಮತ್ತು ಅಶ್ರುವಾಯು ಪ್ರಯೋಗ ಮಾಡಬೇಕಾಗಿ ಬಂತು ಎಂದು ಹರ್ಯಾಣ ಪೊಲೀಸ್ ಮುಖ್ಯಸ್ಥರು ಹೇಳಿದರು.

ಇದನ್ನೂ ಓದಿ: ರಾಬಿ ಮಾರಾಟ ಋತುವಿನಲ್ಲಿ ಹರ್ಯಾಣ ಮತ್ತು ಪಂಜಾಬ್​ನಲ್ಲಿ ಗೋಧಿ ಸಂಗ್ರಹಣೆ ಹೆಚ್ಚಳ