ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಎಂ.ಆರ್.ಫಾರ್ಮಾ ಪ್ರೈವೇಟ್ ಲಿಮಿಟೆಡ್ ಔಷಧೀಯ ಉತ್ಪನ್ನಗಳ ತಯಾರಿಕಾ ಕಂಪನಿಯ ಘಟಕದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ಎಎನ್ಐ ವರದಿ ಮಾಡಿದೆ. ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ, ಬೆಂಕಿ ನಂದಿಸಿದ್ದಾರೆ.
ಔಷಧಗಳಲ್ಲಿ ಬಳಸುವ ವಿಶೇಷ ರಾಸಾಯನಿಕ ತಯಾರಿಕಾ ಕಂಪನಿ ಇದಾಗಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಈ ಸಮಯದಲ್ಲಿ ಎಂಟು ಜನ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನೆಲ್ಲರನ್ನೂ ರಕ್ಷಿಸಲಾಗಿದೆ. ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ ಎಂದು ಮಾಹಿತಿ ಸಿಕ್ಕಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ 45 ನಿಮಿಷಗಳ ಕಾರ್ಯಾಚರಣೆ ನಂತರ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು? ಇದರಿಂದ ಉಂಟಾದ ನಷ್ಟ ಎಷ್ಟು ಎಂಬಿತ್ಯಾದಿ ಮಾಹಿತಿಗಳು ಇನ್ನೂ ಸಿಕ್ಕಿಲ್ಲ.
ಇಂದು ಬೆಳಗ್ಗೆಯಷ್ಟೇ ಥಾಣೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಉಂಟಾಗಿ ನಾಲ್ವರು ರೋಗಿಗಳು ಮೃತಪಟ್ಟ ಘಟನೆ ವರದಿಯಾಗಿದೆ. ಆಸ್ಪತ್ರೆಯ ಐಸಿಯು ರೂಂನಲ್ಲಿ ಬೆಂಕಿ ಹೊತ್ತುಕೊಂಡು, ಮೊದಲ ಮಹಡಿ ಪೂರ್ತಿಯಾಗಿ ಧ್ವಂಸಗೊಂಡಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 4 ರೋಗಿಗಳು ಸಾವು, ಉಳಿದವರ ಸ್ಥಳಾಂತರ
Published On - 1:46 pm, Wed, 28 April 21