Bird Flu: ದೇಶದಲ್ಲಿ ಹಕ್ಕಿ ಜ್ವರಕ್ಕೆ ಮೊದಲ ಸಾವು; ದೆಹಲಿಯಲ್ಲಿ 12 ವರ್ಷದ ಬಾಲಕನ ಪ್ರಾಣ ತೆಗೆದ ಎಚ್​5ಎನ್​1

| Updated By: Lakshmi Hegde

Updated on: Jul 21, 2021 | 9:59 AM

AIIMS: ಹಕ್ಕಿ ಜ್ವರ ಸಾಂಕ್ರಾಮಿಕ ಆಗಿರುವ ಕಾರಣಕ್ಕೆ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್​​ನ ಎಲ್ಲ ಸಿಬ್ಬಂದಿಯೂ ಐಸೋಲೇಟ್​ಗೆ ಒಳಗಾಗಿದ್ದಾರೆ. ಈ ಬಗ್ಗೆ ಎಎನ್​ಐ ಜತೆ ಮಾತನಾಡಿದ ಏಮ್ಸ್​ ವೈದ್ಯರೊಬ್ಬರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು ಎಂದು ತಿಳಿಸಿದ್ದಾರೆ.

Bird Flu: ದೇಶದಲ್ಲಿ ಹಕ್ಕಿ ಜ್ವರಕ್ಕೆ ಮೊದಲ ಸಾವು; ದೆಹಲಿಯಲ್ಲಿ 12 ವರ್ಷದ ಬಾಲಕನ ಪ್ರಾಣ ತೆಗೆದ ಎಚ್​5ಎನ್​1
ಸಾಂಕೇತಿಕ ಚಿತ್ರ
Follow us on

ದೆಹಲಿಯ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್​ (AIIMS)ನಲ್ಲಿ ಹಕ್ಕಿಜ್ವರ (Bird Flu)ದಿಂದ 12ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹಕ್ಕಿ ಜ್ವರದಿಂದ ಸತ್ತ ಮೊದಲ ಪ್ರಕರಣ ಇದಾಗಿದ್ದು, ಆತಂಕ ಮೂಡಿಸಿದೆ. ಏಮ್ಸ್​ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ.

ಇನ್ನು ಹಕ್ಕಿ ಜ್ವರ ಸಾಂಕ್ರಾಮಿಕ ಆಗಿರುವ ಕಾರಣಕ್ಕೆ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ ಏಮ್ಸ್​​ನ ಎಲ್ಲ ಸಿಬ್ಬಂದಿಯೂ ಐಸೋಲೇಟ್​ಗೆ ಒಳಗಾಗಿದ್ದಾರೆ. ಈ ಬಗ್ಗೆ ಎಎನ್​ಐ ಜತೆ ಮಾತನಾಡಿದ ಏಮ್ಸ್​ ವೈದ್ಯರೊಬ್ಬರು, ಈ ಬಾಲಕನಿಗೆ ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು. ಆತನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದೂ ತಿಳಿಸಿದ್ದಾರೆ. ಬಾಲಕನ ಸಂಪರ್ಕಕ್ಕೆ ಬಂದ ವೈದ್ಯರು, ದಾದಿಯರು ಸೇರಿ ಎಲ್ಲರೂ ತಮ್ಮನ್ನು ತಾವು ಐಸೋಲೇಟ್​ಗೆ ಒಳಪಡಿಸಿಕೊಂಡಿದ್ದಾರೆ. ಇನ್ನೇನಾದರೂ ಅವರಲ್ಲಿ ಹಕ್ಕಿಜ್ವರದ ಯಾವುದಾದರೂ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಅವರಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವರ್ಷದ ಪ್ರಾರಂಭದಲ್ಲಿ ದೇಶಾದ್ಯಂತ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ದೆಹಲಿ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್​, ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಹಕ್ಕಿ ಜ್ವರದಿಂದ ಅನೇಕ ಪಕ್ಷಿಗಳು ಸಾವನ್ನಪ್ಪಿದ್ದವು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಇದು ಮನುಷ್ಯನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ.

ಏನಿದು ಹಕ್ಕಿಜ್ವರ?
ಹಕ್ಕಿ ಜ್ವರಕ್ಕೆ ಏವಿಯನ್​ ಇನ್​ಫ್ಲ್ಯೂಯೆಂಜಾ, H5N1 ಎಂದೂ ಕರೆಯುತ್ತಾರೆ. ಈ ವೈರಸ್​ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮನುಷ್ಯರಿಗೂ ತಗುಲುತ್ತದೆ. ಹಾಗೇ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇನ್ನು ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಆದರೆ ಹಾಗೊಮ್ಮೆ ಕಾಣಿಸಿಕೊಂಡರೆ ಸಾವಿನ ಸಾಧ್ಯತೆ ಶೇ. 60ರಷ್ಟು ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

ಇದನ್ನೂ ಓದಿ: ಯೂಟ್ಯೂಬ್‌ ಪ್ರೇರಣೆ! ಅಂಗಡಿಗಳ ಶೆಟರ್​ ಮುರಿದು ಕಳ್ಳತನ ಮಾಡುತ್ತಿದ್ದ ಯುವಕ ಮಾದನಾಯಕನಹಳ್ಳಿ ಪೊಲೀಸರಿಂದ ಅರೆಸ್ಟ್

Published On - 9:59 am, Wed, 21 July 21