ಕೇರಳದ ಮೊದಲ ಮಂಗಳಮುಖಿ ರೇಡಿಯೋ ಜಾಕಿ (RJ) ಮತ್ತು ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೊದಲ ತೃತೀಯಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದ ಅನನ್ಯ ಕುಮಾರಿ ಅಲೆಕ್ಸ್ ಕೊಚ್ಚಿಯ ಫ್ಲ್ಯಾಟ್ವೊಂದರಲ್ಲಿ ಮೃತಪಟ್ಟಿದ್ದಾರೆ. ಅಪಾರ್ಟ್ಮೆಂಟ್ನ ಬೆಡ್ರೂಮ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅನನ್ಯಾ ಶವ ಪತ್ತೆಯಾಗಿದೆ ಎಂದು ಕಲಂಸ್ಸೆರಿ ಪೊಲೀಸರು ತಿಳಿಸಿದ್ದಾರೆ. 2020ರಲ್ಲಿ ಲಿಂಗಪರಿವರ್ತನೆ ಸರ್ಜರಿಗೆ ಒಳಗಾಗಿದ್ದ 28ವರ್ಷದ ಅನನ್ಯಾ, ತಾವು ತುಂಬ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು.
ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ನಂತರ ದೀರ್ಘಕಾಲದವರೆಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಕೆಲಸ ಮಾಡಲೂ ಕಷ್ಟವಾಗುತ್ತಿದೆ. ಸರ್ಜರಿ ಮಾಡುವಾಗ ಆದ ತಪ್ಪುಗಳಿಂದ ನಾನು ತುಂಬ ಬಳಲುತ್ತಿದ್ದೇನೆ ಎಂದು ಅನನ್ಯಾ ಬೇಸರಿಸಿಕೊಂಡಿದ್ದರು. ಇದೀಗ ಅವರು ದೈಹಿಕ ಸಂಕಟ ತಾಳಲಾರೆದೆನೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿರುವ ಪೊಲೀಸರು, ಸದ್ಯ ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಇನ್ನು ಅನನ್ಯಾ ಸಾವಿನ ಸಂಬಂಧ ಅವರ ಸ್ನೇಹಿತರು ಮುಖ್ಯಮಂತ್ರಿಗೆ ದೂರು ನೀಡಿದ್ದು, ಸರಿಯಾದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಅನನ್ಯಾ ಕುಮಾರಿ ಕೊಲ್ಲಂ ಪೆರುಮಾನ್ ನಿವಾಸಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಪ್ಪುರಂ ಜಿಲ್ಲೆಯ ವೆಂಗಾರಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ನಂತರ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯ ಪಕ್ಷದ (Democratic Social Justice Party (DSJP) ನಾಯಕರಿಂದ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಮಾನಸಿಕವಾಗಿ ತುಂಬ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇನ್ನು ಇವರು ಕೇರಳ ರಾಜ್ಯದ ಮೊದಲ ಆರ್ಜೆ ಕೂಡ ಹೌದು. ಮೇಕಪ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದ ಅನನ್ಯ ಕುಮಾರಿ, ರಾಜ್ಯದ ಖಾಸಗಿ ಸುದ್ದಿ ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದರು.
Kerala’s first transgender RJ Anannyah Kumari Alex Found Dead