ನಿವಾರ್ ಚಂಡಮಾರುತದ ನಂತರ ಜನರು ಸಮುದ್ರತೀರಕ್ಕೆ ಓಡಿದ ಘಟನೆ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೂ ಲೆಕ್ಕಿಸದೆ ಜನರು ಉಪ್ಪಡಾ ಬೀಚ್ನಲ್ಲಿ ಚಿನ್ನ ಆಯ್ದುಕೊಳ್ಳಲು ತಾಮುಂದು-ನಾಮುಂದು ಎನ್ನುತ್ತಿದ್ದರು ಎಂದು ವರದಿಯಾಗಿದೆ.
ಬೀಚ್ನಲ್ಲಿ ಪತ್ತೆಯಾದ ಹಳದಿ ಬಣ್ಣದ (ಚಿನ್ನವನ್ನು ಹೋಲುವ) ಸಣ್ಣ ಮಣಿಯ ಫೋಟೋವನ್ನು ಸ್ಥಳೀಯರೊಬ್ಬರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿನ್ನಕ್ಕಾಗಿ 100ಕ್ಕೂ ಹೆಚ್ಚು ಮಂದಿ ಉಪ್ಪಡಾ ಬೀಚ್ಗೆ ಆಗಮಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು ಎಂದು ತಿಳಿಸಿದ್ದಾರೆ.
ಹೇಗೆ ಸಿಕ್ತು ಈ ಚಿನ್ನ?
ಈ ಭಾಗದಲ್ಲಿದ್ದ ಹಲವು ಪುರಾತನ, ಪ್ರಮುಖ ದೇವಸ್ಥಾನಗಳು ಕಾಲಕ್ರಮೇಣ ಸಮುದ್ರದಲ್ಲಿ ಮುಳುಗಿಹೋಗಿ, ಧ್ವಂಸಗೊಂಡಿವೆ. ಇದೀಗ ನಿವಾರ್ ಚಂಡಮಾರುತದಿಂದ ದೊಡ್ಡದೊಡ್ಡ ಅಲೆಗಳು ಸಾಗರದೊಳಗಿಂದ ಏಳುತ್ತಿವೆ. ಹೀಗಾಗಿ ಸಮುದ್ರದ ಅಡಿಯಲ್ಲಿರಬಹುದಾದ ದೇಗುಲಗಳ ವಿಗ್ರಹದಲ್ಲಿರುವ ಆಭರಣಗಳು ಅಲೆಗಳೊಂದಿಗೆ ತೀರಕ್ಕೆ ಬರುತ್ತಿವೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಮೀನುಗಾರರು ಫುಲ್ ಖುಷ್
ಪೂರ್ವ ಗೋದಾವರಿಯ ಯು ಕೋಠಾಪಲ್ಲಿ ಮಂಡಲ್ ವ್ಯಾಪ್ತಿಯ ಹಳ್ಳಿಯಲ್ಲಿರುವ ಮೀನುಗಾರರಂತೂ ಬೀಚ್ನಲ್ಲಿ ಬಿದ್ದ ಚಿನ್ನ ಆಯ್ದುಕೊಳ್ಳಲು ತರಾತುರಿಯಿಂದ ಓಡಿದ್ದಾರೆ. ಮುಂಜಾನೆ ಆರುಗಂಟೆಯಿಂದ, ಸಂಜೆಯವರೆಗೂ ಈ ಕಾಯಕ ಮುಂದುವರಿದಿತ್ತು. ಬಲವಾಗಿ ಗಾಳಿಬೀಸುತ್ತಿದ್ದರೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಬೀಚ್ನಲ್ಲಿ ಗುಂಪುಗೂಡಿದ್ದರು. ಅನೇಕರಿಗೆ ಹಳದಿ ಬಣ್ಣದ ಮಣಿಗಳು ಸಿಕ್ಕಿವೆ. ಆದರೆ ಅದು ಚಿನ್ನವೇ ಹೌದೋ..ಅಲ್ಲವೋ ಎಂಬುದಿನ್ನೂ ದೃಢವಾಗಿಲ್ಲ.
ಪ್ರತಿ ಚಂಡಮಾರುತವೂ ಚಿನ್ನ ಅಥವಾ ಇನ್ಯಾವುದಾದರೂ ಬೆಲೆಬಾಳುವ ವಸ್ತುಗಳನ್ನು ತೀರಕ್ಕೆ ತರುತ್ತದೆ ಎಂದು ನಂಬುವ ಮೀನುಗಾರರು, ಈ ಬಾರಿ ಚಂಡಮಾರುತದ ಬಳಿಕವೂ ಬೀಚ್ನಲ್ಲಿ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ ಚಳಿ, ತಮಿಳುನಾಡಿನಲ್ಲಿ 3 ಸಾವು, ಆಂಧ್ರದಲ್ಲಿ ಭಾರಿ ಮಳೆ
The Gold Rush !! Sea ‘spewing’ yellow metal news makes people rush to Uppada beach of East Godavari. hundreds throng to the beach to test their luck.#AndhraPradesh pic.twitter.com/xIkSzULbFk
— Aashish (@Ashi_IndiaToday) November 28, 2020
Published On - 3:50 pm, Mon, 30 November 20