ರೈಲ್ವೇ ನಿಲ್ದಾಣಗಳಲ್ಲಿ ಇನ್ನು ಮುಂದೆ ಕುಡಿಕೆಯಲ್ಲಿ ಮಾತ್ರ ಚಹಾ ಸಿಗುತ್ತೆ: ರೈಲ್ವೇ ಸಚಿವ ಪಿಯೂಷ್ ಗೋಯಲ್
ಪ್ಲಾಸ್ಟಿಕ್ ಮುಕ್ತ ಭಾರತದ ಭಾಗವಾಗಿ ರೈಲ್ವೆ ನಿಲ್ದಾಣಗಳಲ್ಲಿ ಕುಲ್ಹಾದ್ ಅಂದರೆ, ಮಣ್ಣಿನ ಕುಡಿಕೆಗಳಿಂದ ಮಾತ್ರ ಚಹಾ ಸಿಗುತ್ತದೆ ಎಂದು ಪಿಯೂಷ್ ಗೋಯಲ್ ತಿಳಿಸಿದರು.
ದೆಹಲಿ: ಪ್ಲಾಸ್ಟಿಕ್ ಮುಕ್ತ ಭಾರತದ ಭಾಗವಾಗಿ ರೈಲ್ವೆ ನಿಲ್ದಾಣಗಳಲ್ಲಿ ಕುಲ್ಹಾದ್ ಅಂದರೆ, ಮಣ್ಣಿನ ಕುಡಿಕೆಗಳಿಂದ ಮಾತ್ರ ಇನ್ನು ಮುಂದೆ ಚಹಾ ಸಿಗುತ್ತದೆ ಎಂದು ಭಾನುವಾರ ರಾಜಸ್ಥಾನ ಅಲ್ವಾರ್ನ ಧಿಗವಾಡ ಬಂಡಿಕುಯಿ ರೈಲ್ವೇ ಬ್ಲಾಕ್ನಲ್ಲಿ ವಿದ್ಯುದ್ದೀಕೃತ ರೈಲ್ವೆ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ರೈಲ್ವೇ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
ದೇಶ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಗುರಿಯತ್ತ ಸಾಗುತ್ತಿದೆ. ಈಗಾಗಲೇ 400 ರೈಲ್ವೇ ನಿಲ್ದಾಣದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಇದೊಂದು ಚಿಕ್ಕ ಕೊಡುಗೆಯಾಗಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದರು.
ಇದರಿಂದ, ಮಣ್ಣಿನ ಕುಡಿಕೆ ತಯಾರಿಸುವ ಕುಂಬಾರರಿಗೆ ಉದ್ಯೋಗ ಸಿಗುತ್ತದೆ. ನೈಸರ್ಗಿಕವಾಗಿ ಯೋಚಿಸಿದರೆ ಒಳ್ಳೆಯ ವ್ಯವಸ್ಥೆ. ಪರಿಸರಕ್ಕೆ ಮಣ್ಣಿನ ಕುಡಿಕೆಯಿಂದ ಯಾವುದೇ ಹಾನಿ ಇಲ್ಲ. ಆದ್ದರಿಂದ ಕುಲ್ಹಾದ್ನಲ್ಲಿ ಚಹಾ ಮಾರಾಟ ಮಾಡುವುದು ನಮ್ಮ ಉದ್ದೇಶ ಎಂದು ಗೋಯಲ್ ತಿಳಿಸಿದರು.
2014ರಲ್ಲಿ ಪ್ರಧಾನಿ ಮೋದಿ ಆಡಳಿತ ಪ್ರಾರಂಭವಾದಾಗ ದೇಶದಲ್ಲಿ ಪ್ಲಾಸ್ಟಿಕ್ ನಿಷೇಧದ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜೊತೆಗೆ, ಖಾದಿ ಗ್ರಾಮೋದ್ಯೋಗ ವ್ಯವಸ್ಥೆಯೂ (KVIC) ಸಹಕರಿಸುತ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ರೈಲ್ವೇ ಕೂಡ ಈ ಯೋಜನೆಯತ್ತ ಒತ್ತು ಕೊಟ್ಟು ಮುನ್ನಡೆದರೆ ದೇಶವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ನೆರವಾದಂತೆ ಎಂದು ಗೋಯಲ್ ಅಭಿಪ್ರಾಯಪಟ್ಟರು.
Published On - 1:17 pm, Mon, 30 November 20