India Rain: ಗುಜರಾತ್, ತೆಲಂಗಾಣದಲ್ಲಿ ಇಂದು ಭಾರಿ ಮಳೆ ನಿರೀಕ್ಷಿತ; ದೆಹಲಿಗೆ ತಂಪೆರೆಯಲಿದ್ದಾನೆ ವರುಣ

| Updated By: Rakesh Nayak Manchi

Updated on: Jul 12, 2022 | 7:44 AM

ಗುಜರಾತ್, ತೆಲಂಗಾಣದಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ದೆಹಲಿಯಲ್ಲೂ ವರಣು ತಂಪೆರೆಯಲಿದ್ದಾನೆ. ಗುಜರಾತ್‌ನ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

India Rain: ಗುಜರಾತ್, ತೆಲಂಗಾಣದಲ್ಲಿ ಇಂದು ಭಾರಿ ಮಳೆ ನಿರೀಕ್ಷಿತ; ದೆಹಲಿಗೆ ತಂಪೆರೆಯಲಿದ್ದಾನೆ ವರುಣ
ಗುಜರಾಜ್ ಮಳೆ ಅವಾಂತರ
Image Credit source: ANI
Follow us on

ದೆಹಲಿ: ತೆಲಂಗಾಣದ ಭಾರಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಎಲ್ಲ ಸಚಿವರು, ಅಧಿಕಾರಿಗಳು ಮತ್ತು ಶಾಸಕರು ತಮ್ಮ ನಿಯೋಜಿತ ಸ್ಥಳದಲ್ಲಿಯೇ ಇದ್ದು ಜನರಿಗೆ ನೆರವಾಗಬೇಕು ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್ ಸೂಚಿಸಿದ್ದಾರೆ. ನಲ್ಗೊಂಡ, ಸೂರ್ಯಪೇಟೆ, ಮೆಹಬೂಬಾಬಾದ್, ಜಾನ್‌ಗಾವ್, ಯಾದಗಿರಿ ಮತ್ತು ಭುವನಗಿರಿ ಜಿಲ್ಲೆಗಳಲ್ಲಿ ಮಂಗಳವಾರ ಮುಂಜಾನೆಯಿಂದ ಮಳೆ ಜೋರಾಗಿದೆ. ಸಿದ್ದಿಪೇಟೆ, ಸಂಗಾರೆಡ್ಡಿ ಮತ್ತು ಮೇದಕ್ ಜಿಲ್ಲೆಗಳಲ್ಲಿ ಜುಲೈ 12ರಂದು ಬೆಳಿಗ್ಗೆ 8.30ರಿಂದ ತೀವ್ರ ಮತ್ತು ಅತಿ ತೀವ್ರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Karnataka Rain: ಕೊಡಗಿನಲ್ಲಿ ಭಾರಿ ಮಳೆ, ಶಾಲೆಗಳಿಗೆ ಇಂದು ರಜೆ, ಸಿಎಂ ಬೊಮ್ಮಾಯಿ ಜಿಲ್ಲೆಗೆ ದೌಡು

ದೆಹಲಿಯ ವಿವಿಧೆಡೆ ಸೋಮವಾರ ಮಳೆ ಸುರಿಯಿತು. ಕಳೆದ ಒಂದು ವಾರದಿಂದ ಬಿಸಿಲು ಮತ್ತು ಉಷ್ಣಾಂಶ ಹೆಚ್ಚಳದಿಂದ ಬೇಸತ್ತಿದ್ದ ಜನರಿಗೆ ಮಳೆಯಿಂದ ತುಸು ನೆಮ್ಮದಿ ದೊರೆಯಿತು. ಆದರೆ ಸಂಜೆಯ ಹೊತ್ತಿಗೆ ಮತ್ತೆ ಉಷ್ಣಾಂಶ ಹೆಚ್ಚಾಗಿ 27.1 ಡಿಗ್ರಿ ಸೆಲ್ಸಿಯಸ್ ಮುಟ್ಟಿತು. ಪ್ರತಿ ವರ್ಷ ಈ ಅವಧಿಯಲ್ಲಿ ದೆಹಲಿಯಲ್ಲಿ ದಾಖಲಾಗುವ ಸರಾಸರಿ ಉಷ್ಣಾಂಶ ಇದು. ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಶುಭ್ರ ಆಗಸ ಇರಲಿದ್ದು, ಚದುರಿದಂತೆ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶವು 36 ಡಿಗ್ರಿ ಸೆಲ್ಸಿಯಸ್ ಮುಟ್ಟುವ ಸಾಧ್ಯತೆಯಿದೆ.

ಇದನ್ನೂ ಓದಿ: Viral Video: ಮಳೆಯೊಂದಿಗೆ ಭೂಮಿಗೆ ಬಿದ್ದ ಮೀನುಗಳು! ಅಪರೂಪದ ಹವಾಮಾನ ವಿದ್ಯಮಾನಕ್ಕೆ ಸಾಕ್ಷಿಯಾದ ತೆಲಂಗಾಣ

ಗುಜರಾತ್‌ನ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಂಗಳವಾರವೂ ಗುಜರಾತ್‌ನ ಡಾಂಗ್, ನವ್‌ಸಾರಿ, ವಲ್‌ಸದ್, ತಾಪಿ ಮತ್ತು ಸೂರತ್‌ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದು. ಇದೇ ಪರಿಸ್ಥಿತಿ ಮುಂದಿನ ಐದು ದಿನಗಳವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಗುಜರಾತ್‌ನ ಹಲವು ಗ್ರಾಮಗಳು ಹೊರಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿವೆ. ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಅನಾಹುತಗಳಿಂದ ಹಲವರು ಸಾವನ್ನಪ್ಪಿದ್ದಾರೆ. ಈವರೆಗೆ ಗುಜರಾತ್‌ನಲ್ಲಿ ಮಳೆಯಿಂದಾಗಿ 63 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಸಚಿವ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ಹಠಾತ್ ಪ್ರವಾಹದಿಂದಾಗಿ ಸಮಸ್ಯೆ ಉಂಟಾಗಿದೆ. ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ 4 ಇಂಚು (101 ಮಿಮೀ) ಮಳೆಯಾಗಿದ್ದು ಇದಕ್ಕೆ ಮುಖ್ಯಕಾರಣ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಗುಜರಾತ್‌ನ ಜನರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಕ್ರೈಸ್ತ ಸಂಸ್ಥೆ, ಪಾದ್ರಿಗಳ ಮೇಲಿನ ದಾಳಿ ಆರೋಪ: ಜುಲೈ 15ರಂದು ಸುಪ್ರೀಂನಲ್ಲಿ ಅರ್ಜಿ ವಿಚಾರಣೆ