ವ್ಯಕ್ತಿಯೊಬ್ಬ ವಿಮೆ ಹಣ ಪಡೆಯಲು ಭಿಕ್ಷುಕನನ್ನು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭಿಕ್ಷುಕನನ್ನು ವ್ಯಕ್ತಿಯೊಬ್ಬ ಟ್ರಕ್ನಿಂದ ಗುದ್ದಿಸಿ ಹತ್ಯೆ ಮಾಡಿದ್ದಾನೆ. ತಾನೇ ಸತ್ತಿದ್ದೇನೆಂದು ಬಿಂಬಿಸಲು ಶವದ ಪಕ್ಕದಲ್ಲಿ ತನ್ನ ಗುರುತಿನ ಚೀಟಿಯನ್ನು ಇಟ್ಟಿದ್ದ.
ಬನ್ಸ್ವಾರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ನರೇಂದ್ರ ಸಿಂಗ್ ರಾವತ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ತುಂಬಾ ಸಾಲ ಮಾಡಿದ್ದು, ಆರ್ಥಿಕ ಸಂಕಷ್ಟದಿಂದ ಪಾರಾಗಲು ಯೋಜನೆ ರೂಪಿಸಿದ್ದರು.
ಡಿಸೆಂಬರ್ 1 ರಂದು, ಪೊಲೀಸರಿಗೆ ಜರ್ಬಡಿ ಗ್ರಾಮದ ಬಳಿ ವಿಕೃತ ಶವ ಪತ್ತೆಯಾಗಿತ್ತು. ಹತ್ತಿರದಲ್ಲಿ ಪತ್ತೆಯಾದ ಬ್ಯಾಗ್‌ನಲ್ಲಿ ನರೇಂದ್ರ ಸಿಂಗ್‌ಗೆ ಸೇರಿದ ಗುರುತಿನ ದಾಖಲೆಗಳಿತ್ತು.
ದಾಖಲೆಗಳ ಆಧಾರದ ಮೇಲೆ, ಪೊಲೀಸರು ರಾವತ್ ಅವರ ಕುಟುಂಬವನ್ನು ಪತ್ತೆಹಚ್ಚಿ ಸಂಪರ್ಕಿಸಿದರು, ಆದರೆ ಕುಟುಂಬದವರು ಇದು ತಮ್ಮ ಮನೆಯವರ ದೇಹವಲ್ಲ ಎಂದು ಹೇಳಿದರು. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಪೊಲೀಸರು ಅಂತಿಮವಾಗಿ ನರೇಂದ್ರ ಸಿಂಗ್, ಭೈರುಲಾಲ್ ಎಂಬ ವ್ಯಕ್ತಿ ಮತ್ತು ಇಬ್ರಾಹಿಂ ಎಂಬ ಟ್ರಕ್ ಡ್ರೈವರ್ ಇಬ್ಬರೂ ಸೇರಿ ಮಾಡಿರುವ ಪಿತೂರಿಯನ್ನು ಬಯಲಿಗೆಳೆದಿದ್ದಾರೆ.
ಮತ್ತಷ್ಟು ಓದಿ: ಟಾಯ್ಲೆಟ್ನಲ್ಲಿ ಫ್ಲಶ್ ಮಾಡಿಲ್ಲವೆಂದು ಶುರುವಾದ ಮನೆ ಬಾಡಿಗೆದಾರರ ಜಗಳ ಕೊಲೆಯಲ್ಲಿ ಅಂತ್ಯ!
ವಿಚಾರಣೆ ವೇಳೆ, ಭೈರುಲಾಲ್ ಮೃತ ವ್ಯಕ್ತಿ ನರೇಂದ್ರ ಸಿಂಗ್ ಅಲ್ಲ, ತೂಫಾನ್ ಸಿಂಗ್ ಎಂಬ ನಿರಾಶ್ರಿತ ವ್ಯಕ್ತಿ ಮತ್ತು ಭಿಕ್ಷುಕ ಎಂದು ಒಪ್ಪಿಕೊಂಡರು. ನ.30ರಂದು ಮೂವರೂ ಆರೋಪಿಗಳು ತೂಫಾನ್ ಸಿಂಗ್‌ಗೆ ಗುಜರಾತ್‌ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ, ಪ್ರಜ್ಞೆ ತಪ್ಪುವವರೆಗೂ ಮದ್ಯ ಕುಡಿಸಿ, ನಂತರ ಆತನನ್ನು ಹೆದ್ದಾರಿಯಲ್ಲಿ ನಿಲ್ಲಿಸಿದ್ದರು.
ಇಬ್ರಾಹಿಂ ತೂಫಾನ್‌ನ ದೇಹದ ಮೇಲೆ ಟ್ರಕ್ ಹತ್ತಿಸಿದ್ದ ತಕ್ಷಣವೇ ಆತ ಸಾವನ್ನಪ್ಪಿದ್ದ. ಆಗ ನರೇಂದ್ರ ಸಿಂಗ್ ಶವದ ಬಳಿ ತನ್ನದೇ ಗುರುತಿನ ದಾಖಲೆಗಳನ್ನು ಇಟ್ಟು ತಲೆಮರೆಸಿಕೊಂಡಿದ್ದ.
ಭೈರುಲಾಲ್ ಮತ್ತು ಇಬ್ರಾಹಿಂ ಅವರನ್ನು ಕೊಲೆ ಮತ್ತು ಪಿತೂರಿಯ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ, ಆದರೆ ನರೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದಾನೆ. ನರೇಂದ್ರ ಸಿಂಗ್ ಅವರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದ್ದು, ಪೊಲೀಸರು ಪ್ರಕರಣದ ಇತರ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ