ವಾಟ್ಸಾಪ್‌, ಟೆಲಿಗ್ರಾಮ್, ಸಿಗ್ನಲ್‌ ಆ್ಯಪ್​ಗಿಂತ ಸುಧಾರಿತವಾದ ಆ್ಯಪ್​ ಬಳಸ್ತಿದ್ದಾರೆ ಉಗ್ರರು; IP ವಿಳಾಸವೂ ಇರುವುದಿಲ್ಲ! NIA ತನಿಖೆಯಿಂದ ಬಹಿರಂಗ

|

Updated on: Jan 16, 2021 | 11:35 AM

ಭಾರತ ಮತ್ತು ವಿದೇಶಗಳಲ್ಲಿನ ಭಯೋತ್ಪಾದಕರು ವಾಟ್ಸಾಪ್‌, ಟೆಲಿಗ್ರಾಮ್ ಮತ್ತು ಸಿಗ್ನಲ್‌ ಆ್ಯಪ್​ಗಳಿಗೂ ಹೆಚ್ಚು ಸುಧಾರಿತ ಹಾಗೂ ಸುರಕ್ಷಿತ ಸಂದೇಶ ರವಾನೆಯ ಆ್ಯಪ್​ನ್ನು ಬಳಸುತ್ತಿದ್ದಾರೆ

ವಾಟ್ಸಾಪ್‌, ಟೆಲಿಗ್ರಾಮ್, ಸಿಗ್ನಲ್‌ ಆ್ಯಪ್​ಗಿಂತ ಸುಧಾರಿತವಾದ ಆ್ಯಪ್​ ಬಳಸ್ತಿದ್ದಾರೆ ಉಗ್ರರು; IP ವಿಳಾಸವೂ ಇರುವುದಿಲ್ಲ! NIA ತನಿಖೆಯಿಂದ ಬಹಿರಂಗ
ಥ್ರೀಮಾ ಆ್ಯಪ್
Follow us on

ಗೌಪ್ಯತೆ ವಿಚಾರದಲ್ಲಿ ವಾಟ್ಸಾಪ್‌ ಸಂಸ್ಥೆ ತಂದಿರುವ ಕೆಲವು ಬದಲಾಣೆಗಳಿಗೆ ಹೆದರಿರುವ ಹಲವಾರು ಜನರು ವಾಟ್ಸಾಪ್‌ ತೊರೆದು ಟೆಲಿಗ್ರಾಮ್ ಮತ್ತು ಸಿಗ್ನಲ್‌ ಆ್ಯಪ್​ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈಗ NIA ತನಿಖಾ ಸಂಸ್ಥೆ ಬಹಿರಂಗಪಡಿಸಿರುವ ಮಾಹಿತಿಯಲ್ಲಿ ಆಘಾತಕ್ಕಾರಿ ಸಂಗತಿಯೊಂದು ಹೊರಬಿದ್ದಿದೆ. ಅದೆನೆಂದರೆ ಭಾರತ ಮತ್ತು ವಿದೇಶಗಳಲ್ಲಿನ ಭಯೋತ್ಪಾದಕರು ವಾಟ್ಸಾಪ್‌, ಟೆಲಿಗ್ರಾಮ್ ಮತ್ತು ಸಿಗ್ನಲ್‌ ಆ್ಯಪ್​ಗಳಿಗೂ ಹೆಚ್ಚು ಸುಧಾರಿತ ಹಾಗೂ ಸುರಕ್ಷಿತ ಸಂದೇಶ ರವಾನೆಯ ಆ್ಯಪ್​ನ್ನು ಬಳಸುತ್ತಿದ್ದಾರೆ ಎಂಬುದು.

ಭಯೋತ್ಪಾದಕರು ಬಳಸುತ್ತಿರುವ ಥ್ರೀಮಾ ಆ್ಯಪ್​ನಲ್ಲಿರುವ ವಿಶೇಷತೆ ಏನು?
ಭಯೋತ್ಪಾದಕರು ಬಳಸುತ್ತಿರುವ ಥ್ರೀಮಾ ಆ್ಯಪ್​ನಲ್ಲಿ ವಾಟ್ಸಾಪ್‌, ಟೆಲಿಗ್ರಾಮ್ ಮತ್ತು ಸಿಗ್ನಲ್‌ ಆ್ಯಪ್​ಗಳಿಗೂ ಹೆಚ್ಚು ಸುಧಾರಿತ ಹಾಗೂ ಸುರಕ್ಷಿತ ಸಂದೇಶ ರವಾನೆಯ ಅಂಶಗಳಿವೆ ಎಂದು NIA ಹೇಳಿದೆ.

ಬಳಕೆದಾರರ ಮಾಹಿತಿ ಸೋರಿಕೆಗೆ ಅವಕಾಶ ಇರುವುದಿಲ್ಲ ಈ ಆ್ಯಪ್​ನಲ್ಲಿ!
ಭಯೋತ್ಪಾದಕರು ಬಳಸುತ್ತಿರುವ ಈ ಥ್ರೀಮಾ ಆ್ಯಪ್​ನಲ್ಲಿ ಟೆಕ್ಸ್ಟ್ ಮೆಸೇಜ್, ವಾಯ್ಸ್​ ಮೆಸೇಜ್​ ಹಾಗೂ ವಾಯ್ಸ್​ ಕಾಲ್​, ವಿಡಿಯೋ ಕಾಲ್​ಗಳನ್ನು ಮಾಡಬಹುದಾಗಿದೆ. ವಿಶೇಷವೆಂದರೆ ಈ ಆ್ಯಪನ್ನು ಬಳಸುವವರ ಮಾಹಿತಿ ಸೋರಿಕೆಗೆ ಅವಕಾಶ ಇರುವುದಿಲ್ಲ. ಜೊತೆಗೆ ಈ ಆ್ಯಪ್​ ಬಳಕೆದಾರರನ್ನು ಪತ್ತೆಹಚ್ಚುವುದು ಕಷ್ಟಕರ ಹೀಗಾಗಿ ಈ ಆ್ಯಪನ್ನು ಭಯೋತ್ಪಾದಕರು ಬಳಸುತ್ತಿದ್ದಾರೆ.

IP ವಿಳಾಸವೂ ಇರುವುದಿಲ್ಲ!
ಮೊಬೈಲ್ ಅಪ್ಲಿಕೇಶನ್‌ನ ಹೊರತಾಗಿ, ಥ್ರೀಮಾ ಆ್ಯಪ್​ನಲ್ಲಿ ಬ್ರೌಸರ್ ಆಧಾರಿತ ಸುರಕ್ಷಿತ ಡೆಸ್ಕ್‌ಟಾಪ್ ಚಾಟ್ ಆಯ್ಕೆಯೂ ಇದೆ. ಅಲ್ಲದೆ ಥ್ರೀಮಾ ಆ್ಯಪ್, ಐಪಿ ವಿಳಾಸ ಅಥವಾ ಬಳಕೆದಾರರ ಮೆಟಾಡೇಟಾವನ್ನು ಸಹ ಕೇಳುವುದಿಲ್ಲ.

ಇಸ್ಲಾಮಿಕ್ ದೇಶಗಳಾದ ಇರಾಕ್ ಮತ್ತು ಸಿರಿಯಾ ಖೋರಾಸಾನ್ ಪ್ರಾಂತ್ಯದ ಐಸಿಸ್-ಕೆಪಿ ಭಯೋತ್ಪಾದನಾ ಪ್ರಕರಣದ ತನಿಖೆಯಲ್ಲಿ NIA ಬಂಧಿಸಿರುವ ಆರೋಪಿಗಳಾದ ಜಹಾನ್ಜೈಬ್ ಸಾಮಿ ವಾನಿ, ಅವನ ಪತ್ನಿ ಹಿನಾ ಬಶೀರ್ ಬೀಘ್ ಮತ್ತು ಬೆಂಗಳೂರು ಮೂಲದ ವೈದ್ಯ ಅಬ್ದುರ್ ರಹಮಾನ್ ಅಕಾ ಕೂಡ ಥ್ರೀಮಾ ಆ್ಯಪ್ ಬಳಸುತ್ತಿದ್ದರು ಎಂಬುದು ಕಂಡುಬಂದಿದೆ.

ಭಯೋತ್ಪಾದನಾ ಪ್ರಕರಣದಲ್ಲಿ ಜಹಾನ್ಜೈಬ್ ಸಾಮಿ ವಾನಿ, ಅವನ ಪತ್ನಿ ಹಿನಾ ಬಶೀರ್ ಬೀಘ್​ಳನ್ನು ಮಾರ್ಚ್ 2020ರಲ್ಲಿ ಬಂಧಿಸಿದರೆ, ಆಗಸ್ಟ್ ತಿಂಗಳಲ್ಲಿ ಬೆಂಗಳೂರು ಮೂಲದ ವೈದ್ಯ ಅಬ್ದುರ್ ರಹಮಾನ್​ನನ್ನು ಬಂಧಿಸಲಾಗಿದೆ.

ಇತ್ತೀಚಿನವರೆಗೂ ರಹಮಾನ್ ಐಎಸ್ಐಎಸ್ ಭಯೋತ್ಪಾದಕರೊಂದಿಗೆ ವಿದೇಶದಲ್ಲಿ ಮತ್ತು ಭಾರತದಲ್ಲಿ ನಿಯಮಿತವಾಗಿ ಥ್ರೀಮಾ ಆ್ಯಪ್​ ಬಳಸಿ ಸಂವಹನ ನಡೆಸುತ್ತಿದ್ದ ಎಂದು ಜನವರಿ 12 ರಂದು ಎನ್ಐಎ ವಕ್ತಾರರು ಹೇಳಿಕೆ ನೀಡಿದ್ದರು.

Published On - 11:23 am, Sat, 16 January 21