ಬೈಕಲ್ಲಿ ಸೈಡ್ ಮಿರರ್ ಇಲ್ಲ ಅಂದ್ರೆ, ಕಾರಿನ ಹಿಂಬದಿಯಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸಿಲ್ಲ ಅಂದ್ರೆ ಬೀಳುತ್ತೆ ದಂಡ
ನೂತನ ನಿಯಮದ ಅನುಸಾರ ಬೈಕ್ನಲ್ಲಿ ಸೈಡ್ ಮಿರರ್ ಇರದಿದ್ದರೆ ₹500 ಮತ್ತು ಕಾರಿನಲ್ಲಿ ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ ₹1000 ದಂಡ ವಿಧಿಸಬಹುದಾಗಿದೆ.
ದೆಹಲಿ: ಸಂಚಾರಿ ನಿಯಮ ಪಾಲನೆ ಮಾಡದವರಿಗೆ ಸರ್ಕಾರ ಈಗಾಗಲೇ ದೊಡ್ಡ ಮಟ್ಟದ ದಂಡ ವಿಧಿಸುತ್ತಿದೆ. ಬೈಕ್ನಲ್ಲಿ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕು, ಕಾರಿನಲ್ಲಿ ಮುಂದೆ ಕೂರುವವರು ಕಡ್ಡಾಯವಾಗಿ ಸೀಟ್ಬೆಲ್ಟ್ ಧರಿಸಬೇಕು ಹೀಗೆ ಹಲವು ನಿಯಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಬಿಗಿಗೊಳಿಸಲಾಗಿದೆ. ಜನರು ನಿಯಮ ಪಾಲಿಸಬೇಕು ಎನ್ನುವ ಕಾಳಜಿಗಿಂತ ದಂಡ ತೆರಬೇಕು ಎನ್ನುವ ಭಯದಲ್ಲೇ ಒಲ್ಲದ ಮನಸ್ಸಿನಿಂದಾದರೂ ಅವುಗಳಿಗೆ ಒಗ್ಗಿಕೊಂಡಿದ್ದಾರೆ.
ಇದೀಗ ವಾಹನ ಸವಾರರಿಗೆ ಸಂಬಂಧಿಸಿದಂತೆ ಮತ್ತೊಂದು ನಿಯಮ ಜಾರಿಯಾಗಿದೆ. ಈ ನೂತನ ನಿಯಮದ ಅನುಸಾರ ಬೈಕ್ನಲ್ಲಿ ಸೈಡ್ ಮಿರರ್ ಇರದಿದ್ದರೆ ₹500 ಮತ್ತು ಕಾರಿನಲ್ಲಿ ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ ₹1000 ದಂಡ ವಿಧಿಸಬಹುದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದಲೇ ನಿಯಮ ಜಾರಿಯಾಗಿದ್ದು, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಹೇಳಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ದೆಹಲಿ ಸಂಚಾರ ಪೊಲೀಸರು, ಬಹುತೇಕ ಬೈಕ್ಗಳಲ್ಲಿ ಸೈಡ್ ಮಿರರ್ ಇರುವುದೇ ಇಲ್ಲ. ಕೆಲವರು ಶೋಕಿಗಾಗಿ ತೆಗೆದಿಡುತ್ತಾರೆ. ಇದರಿಂದ ಅಪಘಾತ ಆಗುವ ಸಂಭವ ಹೆಚ್ಚಿದೆ. ಅಂತೆಯೇ, ಕಾರಿನಲ್ಲಿ ಹಿಂಬದಿ ಕುಳಿತು ಸಂಚರಿಸುವವರು ಸೀಟ್ ಬೆಲ್ಟ್ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇದು ದೊಡ್ಡ ಮಟ್ಟದ ಅಪಘಾತಗಳಲ್ಲಿ ಪ್ರಾಣಕ್ಕೆ ಸಂಚಕಾರ ತಂದೊಡುತ್ತಿದೆ. ಆದ್ದರಿಂದ, ಈ ಕುರಿತು ವಾಹನ ಸವಾರರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಈ ನಿಯಮಗಳು ಹೊಸದಾಗಿ ರೂಪುಗೊಂಡಿರುವುದೇನಲ್ಲ. ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆ 1989 ಎರಡರಲ್ಲೂ ಈ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅವುಗಳ ಪಾಲನೆಯಾಗುತ್ತಿಲ್ಲವಷ್ಟೇ. ಇನ್ನುಮುಂದೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಮತ್ತು ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆಯಿಂದಲೇ ದೆಹಲಿಯಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದ್ದು, ಆರಂಭಿಕ ಹಂತದಲ್ಲಿ ಸೈಡ್ ಮಿರರ್ ಅಳವಡಿಸಿದ ಬೈಕ್ ಸವಾರರಿಗೆ ₹500 ಮತ್ತು ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಕುಳಿತುಕೊಳ್ಳುವ ಹಿಂಬದಿ ಸವಾರರಿಗೆ ₹1000 ದಂಡ ವಿಧಿಸುವುದಾಗಿ ಪ್ರಕಟಣ ಹೊರಡಿಸಿದ್ದಾರೆ.
ಯುವತಿಯರಿಂದ ಜೇಬಿಗೆ ದುಡ್ಡು ಹಾಕಿಸಿಕೊಂಡ ಕಾನ್ಸ್ಟೆಬಲ್.. ಲಂಚದ ವಿಡಿಯೋ ವೈರಲ್ ಆಯ್ತು, ಸಿಬ್ಬಂದಿ ಸಸ್ಪೆಂಡ್ ಆಯ್ತೂ!