
ದೆಹಲಿ, ಡಿಸೆಂಬರ್ 26: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಕ್ಕೆ ನಿಖರ ತಿಳಿದುಬಂದಿಲ್ಲ. ಆದರೆ ಮೂಲಗಳ ಪ್ರಕಾರ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತ್ತಿದೆ.
2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವರು, ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. 33 ವರ್ಷಗಳ ನಂತರ ಮೇಲ್ಮನೆಯಲ್ಲಿ ತಮ್ಮ ರಾಜಕೀಯ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದ್ದರು. ಪಿವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಜೂನ್ 1991 ರಲ್ಲಿ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ತಿಂಗಳ ನಂತರ, 1991 ರಲ್ಲಿ ಭಾರತದ ಏಕೈಕ ಸಿಖ್ ಪ್ರಧಾನಿ ರಾಜ್ಯಸಭೆಗೆ ಪ್ರವೇಶಿಸಿದ್ದರು.
ಅವರು ಮೇಲ್ಮನೆಯಲ್ಲಿ ಐದು ಬಾರಿ ಅಸ್ಸಾಂ ಅನ್ನು ಪ್ರತಿನಿಧಿಸಿದರು. 2019 ರಲ್ಲಿ ರಾಜಸ್ಥಾನಕ್ಕೆ ಸ್ಥಳಾಂತರಗೊಂಡರು. ಬಿಜೆಪಿ ಸರ್ಕಾರದ ನೋಟು ಅಮಾನ್ಯೀಕರಣದ ವಿರುದ್ಧ ಧ್ವನಿ ಎತ್ತಿದ್ದ ಮನಮೋಹನ್ ಸಿಂಗ್ ಅವರು ಅದು ಸಂಘಟಿತ ಲೂಟಿ ಮತ್ತು ಕಾನೂನುಬದ್ಧ ಲೂಟಿ ಎಂದು ಸಂಸತ್ತಿನಲ್ಲಿ ಗುಡುಗಿದ್ದರು. ಇದು ಅವರ ಕೊನೆಯ ಸಂಸತ್ತಾಗಿತ್ತು.
1932 ಸೆಪ್ಟೆಂಬರ್ 26ರಂದು ಪಂಜಾಬ್ನಲ್ಲಿ ಮನಮೋಹನ್ ಸಿಂಗ್ ಅವರು ಜನಿಸುತ್ತಾರೆ. ಪಂಜಾಬ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಕ್ರಮವಾಗಿ 1952 ಮತ್ತು 1954 ರಲ್ಲಿ ಪಡೆಯುತ್ತಾರೆ.
ಡಾ. ಮನಮೋಹನ್ ಸಿಂಗ್ ಅವರು 1957ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ತಮ್ಮ ಎಕನಾಮಿಕ್ ಟ್ರಿಪೋಸ್ನ್ನು ಪೂರ್ಣಗೊಳಿಸಿದರು. ಬಳಿಕ 1962 ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪಿಹೆಚ್ಡಿ ಪಡೆದುಕೊಂಡರು. ಬಳಿಕ ರಾಜಕೀಯ ಪ್ರವೇಶ ಮಾಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:24 pm, Thu, 26 December 24