ದೆಹಲಿ ಸೆಪ್ಟೆಂಬರ್ 08: ಶನಿವಾರ ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ(G20 Summit) ಔತಣಕೂಟಕ್ಕೆ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ (Manmohan Singh) ಮತ್ತು ಎಚ್ ಡಿ ದೇವೇಗೌಡರನ್ನು(HD Deve Gowda) ಆಹ್ವಾನಿಸಲಾಗಿದೆ. ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ನಡೆಯಲಿರುವ 18 ನೇ G20 ನಾಯಕರ ಶೃಂಗಸಭೆಯು ಭಾರತವು ಇದುವರೆಗೆ ಆಯೋಜಿಸಿದ ಅತ್ಯಂತ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿ ಒಂದಾಗಿದೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡಿನ ಎಂಕೆ ಸ್ಟಾಲಿನ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಜಾರ್ಖಂಡ್‌ನ ಹೇಮಂತ್ ಸೊರೆನ್, ಪಂಜಾಬ್‌ನ ಭಗವಂತ್ ಮಾನ್ ಮತ್ತು ದೆಹಲಿಯ ಅರವಿಂದ ಕೇಜ್ರಿವಾಲ್ ಸೇರಿದಂತೆ ಇಂಡಿಯಾ ಬಣದ ಇತರ ಮುಖ್ಯಮಂತ್ರಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಜಿ20 ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಿ20 ಔತಣಕೂಟಕ್ಕೆ ಆಹ್ವಾನಿಸಿಲ್ಲ ಎಂದು ಅವರ ಕಚೇರಿ ಖಚಿತಪಡಿಸಿದೆ.
ರಾಷ್ಟ್ರಪತಿ ಮುರ್ಮು ಅವರ ಕಚೇರಿ ವಿದೇಶಿ ನಾಯಕರಿಗೆ ನೀಡಿರುವ ಜಿ20 ಔತಣಕೂಟದ ಆಹ್ವಾನಗಳಲ್ಲಿ “ಇಂಡಿಯಾ” ಬದಲಿಗೆ “ಭಾರತ್” ಅನ್ನು ಬಳಸಿದ್ದು ದೊಡ್ಡ ವಿವಾದವನ್ನು ಹುಟ್ಟುಹಾಕಿತು. ಮೊದಲ ಬಾರಿಗೆ, ಪ್ರೆಸಿಡೆಂಟ್ಆಫ್ ಇಂಡಿಯಾ ಬದಲಿಗೆ “ಪ್ರೆಸಿಡೆಂಟ್ ಆಫ್ ಭಾರತ್” ಎಂಬ ಉಲ್ಲೇಖಿಸಿರುವ ಅಧಿಕೃತ ಆಹ್ವಾನಗಳನ್ನು ನೀಡಲಾಗಿದೆ.
ಆಡಳಿತಾರೂಢ ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಇಂಡಿಯಾ ಎಂಬುದನ್ನು ಭಾರತ್ ಎಂದು ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
ಇದನ್ನೂ ಓದಿ: G20ಗಾಗಿ ದೆಹಲಿಯ ಬೀದಿಗಳಲ್ಲಿ ಚಿತ್ರ ಬಿಡಿಸಿ ಚಂದಗಾಣಿಸಿದ ಕಲಾವಿದ ಯೋಗೇಶ್ ಸೈನಿ ಪರಿಚಯ ಇಲ್ಲಿದೆ
ಇತರ ವಿಶ್ವ ನಾಯಕರಲ್ಲಿ, ಯುಎಸ್ ಅಧ್ಯಕ್ಷ ಜೋ ಬೈಡನ್, ಯುಕೆ ಪ್ರಧಾನಿ ರಿಷಿ ಸುನಕ್, ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಬ್ಬರೂ ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Fri, 8 September 23