ಡೆಹ್ರಾಡೂನ್: ಚಾರ್ಧಾಮ್ ಯಾತ್ರೆ (Char Dham Yatra) ದಿನಾಂಕವನ್ನು ಉತ್ತರಾಖಂಡ ಸರ್ಕಾರ ಘೋಷಿಸಿದ ಬೆನ್ನಲ್ಲೇ ಬದರಿನಾಥದ (Badrinath) ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭೂಕುಸಿತದ ಆತಂಕ ಎದುರಾಗಿದೆ. ಇದೀಗ ಜೋಶಿಮಠ (Joshimath) ಸಮೀಪ ಬದರಿನಾಥದ ಹೆದ್ದಾರಿಯಲ್ಲಿ 10 ಕಡೆ ದೊಡ್ಡ ಮಟ್ಟದ ಬಿರುಕು ಕಾಣಿಸಿಕೊಂಡಿದೆ. ಜೋಶಿಮಠ ಮತ್ತು ಮರ್ವಾರಿ ಮಾರ್ಗ ಮಧ್ಯೆ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹೆದ್ದಾರಿಯು ದೇಗುಲ ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. 10 ಕಡೆ ಹೊಸ ಬಿರುಕುಗಳು ಕಾಣಿಸಿಕೊಂಡಿವೆ. ಈ ಮೊದಲು ಕಾಣಿಸಿದ್ದ ಬಿರುಕುಗಳು ದೊಡ್ಡದಾಗುತ್ತಿವೆ ಎಂದು ‘ಜೋಶಿಮಠ ಉಳಿಸಿ ಸಂಘರ್ಷ ಸಮಿತಿ’ಯ ಕಾರ್ಯಕರ್ತ ಸಂಜಯ್ ಉನಿಯಾಲ್ ತಿಳಿಸಿದ್ದಾರೆ. ಈ ಹಿಂದೆ ಕಾಣಿಸಿಕೊಂಡಿದ್ದ ಬಿರುಕುಗಳನ್ನು ಮುಚ್ಚುವ ಕೆಲಸವನ್ನು ಆಡಳಿತ ಮಾಡಿತ್ತು. ಆದರೆ, ಅವುಗಳು ಮತ್ತೆ ಬಿರುಕುಬಿಟ್ಟಿದ್ದು, ದೊಡ್ಡದಾಗುತ್ತಿವೆ ಎಂದು ಉನಿಯಾಲ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಜೋಶಿಮಠದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಬಿರುಕಿಗೂ ಇದಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ಹಿರಿಯ ಭೂವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಬಿರುಕಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Kedarnath Temple: ಶಿವನ ದರ್ಶನಕ್ಕೆ ಶುಭ ಮುಹೂರ್ತ ಫೀಕ್ಸ್, ಕೇದಾರನಾಥ ದೇವಾಲಯದ ಬಾಗಿಲು ಏಪ್ರಿಲ್ 25ಕ್ಕೆ ಓಪನ್
ಜೋಶಿಮಠ ಪಟ್ಟಣದ ಹಲವೆಡೆಗಳಲ್ಲಿ ಇತ್ತೀಚೆಗೆ ಭೂಕುಸಿತ ಕಂಡುಬಂದಿದ್ದು ಸುಮಾರು 500 ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿತ್ತು.
ಕೇದಾರನಾಥ ಧಾಮದ ಬಾಗಿಲು ಏಪ್ರಿಲ್ 25ಕ್ಕೆ ತೆರೆಯಲಾಗುತ್ತದೆ ಎಂದು ಉತ್ತರಾಖಂಡ ಸರ್ಕಾರ ಶನಿವಾರ ಘೋಷಿಸಿತ್ತು. ಈ ವರ್ಷ ಮೇಘ ಲಗ್ನದಲ್ಲಿ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಿದೆ. ಏಪ್ರಿಲ್ 25ರಂದು ಬೆಳಗ್ಗೆ 6.20ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಿದೆ ಎಂದು ಉತ್ತರಾಖಂಡ ಸರ್ಕಾರ ಶನಿವಾರ ತಿಳಿಸಿತ್ತು. ಕೇದಾರನಾಥ ದೇಗುಲದ ಬಾಗಿಲು ತೆರೆಯುವುದರೊಂದಿಗೆ ಚಾರ್ಧಾಮ್ ಯಾತ್ರೆ ಆರಂಭವಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ