ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಆರೋಪ ಪ್ರಕರಣ; ಪಶ್ಚಿಮ ಬಂಗಾಳದ ಕಾಲಿಯಗಂಜ್​​ನಲ್ಲಿ ಹಿಂಸಾಚಾರ

|

Updated on: Apr 22, 2023 | 5:47 PM

ಪ್ರಮುಖ ಸಾಕ್ಷ್ಯಗಳು ಕಳೆದುಹೋಗದಂತೆ ಮರಣೋತ್ತರ ಪರೀಕ್ಷೆಯನ್ನು ಮಾಡುವುದಕ್ಕಾಗಿ ಸಂತ್ರಸ್ತೆಯ ದೇಹವನ್ನು ಅವರಿಂದ ವಶಪಡಿಸಿಕೊಳ್ಳಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಬಳಸಬೇಕಾಯಿತು. ಈ ವಿಷಯವನ್ನು ಸರಿಯಾಗಿ ತನಿಖೆ ಮಾಡಲು ನಾವು ವೈದ್ಯಕೀಯ ಮಂಡಳಿಯನ್ನು ಸಹ ರಚಿಸಿದ್ದೇವೆ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಆರೋಪ ಪ್ರಕರಣ; ಪಶ್ಚಿಮ ಬಂಗಾಳದ ಕಾಲಿಯಗಂಜ್​​ನಲ್ಲಿ ಹಿಂಸಾಚಾರ
ಕಾಲಿಯಗಂಜ್​​ನಲ್ಲಿ ಹಿಂಸಾಚಾರ
Follow us on

ಕೋಲ್ಕತ್ತಾ: ಶುಕ್ರವಾರ ಬೆಳಗ್ಗೆ ಹದಿಹರೆಯದವರ ಬಾಲಕಿಯ ಶವ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳದ (West Bengal) ಕಾಲಿಯಗಂಜ್‌ನಲ್ಲಿ (Kaliyaganj) ಹೊಸ ಹಿಂಸಾಚಾರ (violence) ವರದಿಯಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಬಲಪ್ರಯೋಗಿಸಿದ್ದು, ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ಪ್ರಸ್ತುತ ಪ್ರದೇಶಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ. ರಾಜ್ಯ ಬಿಜೆಪಿ ಮುಖ್ಯಸ್ಥ ಮತ್ತು ಬಲೂರ್‌ಘಾಟ್ ಸಂಸದ ಸುಕಾಂತ ಮಜುಂದಾರ್ ಇಂದು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ, ಈ ಘಟನೆಯನ್ನು ಖಂಡಿಸಿದ ಬಿಜೆಪಿಯು ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಪೊಲೀಸರು ಮೊದಲು ಅವಕಾಶ ನೀಡಲಿಲ್ಲ . ಪೊಲೀಸರು ಸಾಕ್ಷ್ಯಗಳನ್ನು ನಾಶ ಮಾಡುತ್ತಿದ್ದಾರೆ. ಸಂತ್ರಸ್ತೆಯ ಮೃತದೇಹವನ್ನು ಪೊಲೀಸರು ಎಳೆದುಕೊಂಡು ಹೋಗಿದ್ದರು. ಈ ವರ್ತನೆ ಘನತೆಯದ್ದಲ್ಲ ಎಂದು ಬಿಜೆಪಿ ಆರೋಪಿಸಿದೆ.

ಕಾನೂನು ಉಲ್ಲಂಘಿಸಿದ ಪರಿಸ್ಥಿತಿಯಲ್ಲಿ ನಾವು ಶವವನ್ನು ಪತ್ತೆ ಹಚ್ಚಿದ್ದೇವೆ. ತನಿಖೆಗಾಗಿ ಸಾಕ್ಷ್ಯಗಳನ್ನು ಕಾಪಾಡಬೇಕಿತ್ತು. ಹಾಗಾಗಿಯೇ ವಿಳಂಬ ಮಾಡದೆ ಮರಣೋತ್ತರ ಪರೀಕ್ಷೆ ಮಾಡಬೇಕಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

ಶುಕ್ರವಾರ ಬೆಳಗ್ಗೆ ಉತ್ತರ ದಿನಾಜ್‌ಪುರ ಜಿಲ್ಲೆಯ ಕಾಲಿಯಗಂಜ್ ಪಟ್ಟಣದ ಕೊಳದ ದಡದಲ್ಲಿ ಹದಿಹರೆಯದ ಬಾಲಕಿಯ ಶವ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದ ಬಾಲಕಿಯ ಶವವನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಆಕೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಶುಕ್ರವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆಯಲು ಪ್ರಯತ್ನಿಸಿದಾಗ ಜನರು ಕಲ್ಲು ತೂರಾಟ ನಡೆಸಿದ್ದಾರೆ,. ಪರಿಸ್ಥಿತಿಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ ಪ್ರಯೋಗಿಸಿದ್ದಾರೆ.


ಪ್ರಮುಖ ಸಾಕ್ಷ್ಯಗಳು ಕಳೆದುಹೋಗದಂತೆ ಮರಣೋತ್ತರ ಪರೀಕ್ಷೆಯನ್ನು ಮಾಡುವುದಕ್ಕಾಗಿ ಸಂತ್ರಸ್ತೆಯ ದೇಹವನ್ನು ಅವರಿಂದ ವಶಪಡಿಸಿಕೊಳ್ಳಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಬಳಸಬೇಕಾಯಿತು. ಈ ವಿಷಯವನ್ನು ಸರಿಯಾಗಿ ತನಿಖೆ ಮಾಡಲು ನಾವು ವೈದ್ಯಕೀಯ ಮಂಡಳಿಯನ್ನು ಸಹ ರಚಿಸಿದ್ದೇವೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ದಿನಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಸನಾ ಅಖ್ತರ್ ತಿಳಿಸಿದ್ದಾರೆ.

ಯಾವುದೇ ಪುರಾವೆಗಳಿಗೆ ಹಾನಿಯಾಗುವ ಮೊದಲು ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಅವರು ರಾಜಕಾರಣಿಗಳ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಸ್ಥಳೀಯ ತೃಣಮೂಲ ರಾಜಕಾರಣಿಗಳಿಗೆ ಈ ಪ್ರದೇಶದಲ್ಲಿ ಅವಕಾಶ ನೀಡಲಾಗಿದ್ದು, ಅವರನ್ನು ಭೇಟಿ ಮಾಡದಂತೆ ತಡೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸದ್ಯ ಪ್ರದೇಶ ಶಾಂತವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಕೂಡ ಈ ವಿಷಯದ ಬಗ್ಗೆ ತನಿಖೆ ನಡೆಸಲು ಸತ್ಯಶೋಧನಾ ತಂಡವನ್ನು ಕಳುಹಿಸುವುದಾಗಿ ಹೇಳಿದೆ.

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಮಗೆ ಹಲವು ಮೂಲಗಳಿಂದ ಸಾಕಷ್ಟು ಮಾಹಿತಿ ಸಿಕ್ಕಿದೆ. ನಾವು ಅದರ ತನಿಖೆ ನಡೆಸಲಿದ್ದೇವೆ. ನಾನು ನನ್ನ ತಂಡದೊಂದಿಗೆ ಉತ್ತರ ದಿನಾಜ್‌ಪುರಕ್ಕೆ ಹೋಗುತ್ತೇನೆ. ನಮ್ಮ ತಂಡ ನಾಳೆ ಅಲ್ಲಿಗೆ ತಲುಪಲಿದೆ. ನಾಳೆ ಸಂಜೆ ಅಲ್ಲಿಗೆ ತೆರಳಿ ಈ ಘಟನೆಯ ತನಿಖೆ ನಡೆಸುತ್ತೇವೆ. ತನಿಖೆಯಲ್ಲಿ ನಮಗೆ ಸಹಕರಿಸಲು ನಾವು ರಾಜ್ಯಪಾಲರ ಮನೆ ಮೂಲಕ ಸರ್ಕಾರವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಬಾಲಕಿಯ ಕೊಲೆ ಪ್ರಕರಣವಾಗಿದೆ. ಆಕೆಗೆ ನ್ಯಾಯ ಸಿಗಬೇಕು ಎಂದು ಎನ್‌ಸಿಪಿಸಿಆರ್ ಮುಖ್ಯಸ್ಥ ಪ್ರಿಯಾಂಕ್ ಕನೂಂಗೊ ಅವರ ಕಚೇರಿಯಿಂದ ಹೊರಡಿಸಲಾದ ಹೇಳಿಕೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Narendra Modi: ದಣಿವರಿಯದ ಪ್ರಧಾನಿ ಮೋದಿ, 36 ಗಂಟೆಗಳಲ್ಲಿ, 7 ಕಾರ್ಯಕ್ರಮ, 8 ನಗರ, 5,300 ಕಿ.ಮೀ. ಪ್ರಯಾಣ

ಘಟನೆಯ ಬಗ್ಗೆ ದತಿಳಿಸಿದ್ದರೂ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಉತ್ತರ ದಿನಜ್‌ಪುರ ಜಿಲ್ಲಾಧಿಕಾರಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಎನ್‌ಸಿಪಿಸಿಆರ್ ಆರೋಪಿಸಿದೆ. ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆಗಳನ್ನು ತಡೆಯಲು ತಪ್ಪಿತಸ್ಥರನ್ನು ಶಿಕ್ಷಿಸುವುದೊಂದೇ ದಾರಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Sat, 22 April 23