
ಕಾನ್ಪುರ, ಸೆಪ್ಟೆಂಬರ್ 09: ಕೋಪ, ಬೇಸರ, ಹತಾಶೆ ಹೀಗೆ ಯಾವುದೋ ಸ್ಥಿತಿಯಲ್ಲಿ ಕೆಲವರು ಜೀವನದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡುಬಿಡುತ್ತಾರೆ. ಆದರೆ ಆ ದೈವ ಇಚ್ಛೆಯನ್ನು ಬಲ್ಲವರಾರು. ಮಹಿಳೆಯೊಬ್ಬರು ಗಂಡನ ಜತೆ ಜಗಳವಾಡಿ ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಗಂಗಾ ನದಿಗೆ ಹಾರಿದ್ದಾರೆ. ಅಲ್ಲಿ ಮೊಸಳೆ ಕಂಡು ಮರವೇರಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಬಾರಿ ಮೊಸಳೆ ಭಕ್ಷನಾಗದೆ ಒಂದು ಜೀವ ಉಳಿಸಿದ ರಕ್ಷಕನಾಯಿತು.
ಸುರೇಶ್ ಅವರ ಪತ್ನಿ ಮಾಲತಿ ಎಂಬುವವರು ಪತಿಯೊಂದಿಗೆ ಜಗಳವಾಡಿ ಕೋಪದಿಂದ ಗಂಗಾ ನದಿಗೆ ಹಾರಿದ್ದಾರೆ.ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದಾಗ ಮೊಸಳೆ ಎದುರಾಗಿ ತನ್ನ ಜೀವವನ್ನು ಉಳಿಸಿಕೊಳ್ಳಲು ಹತ್ತಿರದ ಮರವನ್ನು ಹತ್ತಿ ಇಡೀ ರಾತ್ರಿ ಅಲ್ಲಿಯೇ ಕಳೆದಿದ್ದಾರೆ. ಅಹಿರ್ವಾನ್ ನಿವಾಸಿ ಸುರೇಶ್ ತನ್ನ ಪತ್ನಿ ಮಾಲತಿ ಜೊತೆ ನಿತ್ಯ ಒಂದಲ್ಲ ಒಂದು ವಿಷಯಕ್ಕೆ ಆಗಾಗ ಜಗಳವಾಡುತ್ತಿದ್ದ. ಸೆಪ್ಟೆಂಬರ್ 6 ರ ಶನಿವಾರ ರಾತ್ರಿ ಕೂಡ ದಂಪತಿ ಮಧ್ಯೆ ದೊಡ್ಡ ಜಗಳವಾಗಿತ್ತು.
ಸುರೇಶ್ ತನ್ನ ಪತ್ನಿಗೆ ಚಹಾ ಮಾಡಲು ಹೇಳಿದ್ದರು, ಆದರೆ ಆಕೆ ನಿರಾಕರಿಸಿದ್ದರು, ಏಕೆಂದರೆ ಆಕೆಗೆ ತುಂಬಾ ಸುಸ್ತಾಗಿದ್ದ ಕಾರಣ ಆಕೆ ನೀವೇ ಮಾಡಿ ಎಂದು ಹೇಳಿದ್ದರು. ಚಹಾದೊಂದಿಗೆ ಪ್ರಾರಂಭವಾದ ವಾಗ್ವಾದ ಕ್ರಮೇಣ ದೊಡ್ಡ ಜಗಳಕ್ಕೆ ತಿರುಗಿತು. ಮಾಲತಿ ಕೋಪದಿಂದ ಮನೆಯಿಂದ ಹೊರಟುಹೋಗಿದ್ದರು.
ಮತ್ತಷ್ಟು ಓದಿ: Video: ದೈತ್ಯ ಮೊಸಳೆಯ ಬಾಲ ಹಿಡಿದು ವ್ಯಕ್ತಿಯ ಹುಚ್ಚಾಟ; ಸಾವಿನೊಂದಿಗೆ ಸರಸ ಅಂದ್ರೆ ಇದೇ ಇರ್ಬೇಕು ನೋಡಿ
ಜಾಜ್ಮೌನಲ್ಲಿರುವ ಗಂಗಾ ಸೇತುವೆಯನ್ನು ತಲುಪಿದ್ದಾರೆ. ಕೋಪದ ಭರದಲ್ಲಿ, ಸೇತುವೆಯಿಂದ ಗಂಗಾ ನದಿಗೆ ಹಾರಿದ್ದಾರೆ, ನದಿಗೆ ಹಾರಿದ ತಕ್ಷಣ, ತಾನು ಮಾಡುತ್ತಿರುವುದು ತಪ್ಪು ಎನಿಸಿ, ಈಜಿ ದಡವನ್ನು ತಲುಬೇಕೆಂದುಕೊಂಡರು. ನದಿಯ ದಡವನ್ನು ತಲುಪಿದ ತಕ್ಷಣ ಒಂದು ಮೊಸಳೆ ಅವರ ಕಣ್ಣಿಗೆ ಬಿದ್ದಿತ್ತು. ಮೊಸಳೆಯ ಹತ್ತಿರ ಹೋಗುವುದು ಅಪಾಯಕಾರಿ ಕೆಲಸವಾಗಿತ್ತು. ಆದರೆ, ಹರಿಯುವ ನೀರಿನಲ್ಲಿ ಉಳಿಯುವುದು ಹೆಚ್ಚು ಅಪಾಯಕಾರಿಯಾಗಿತ್ತು.
ಹತ್ತಿರದ ಮರವನ್ನು ಹತ್ತಿ ರಾತ್ರಿಯ ಉಳಿದ ಸಮಯವನ್ನು ಮರದ ಮೇಲೆ ಕಳೆದರು. ಬೆಳಗ್ಗೆ, ಹಳ್ಳಿಯ ಜನರು ಗಂಗಾ ನದಿಯ ದಡದ ಮೂಲಕ ಹಾದುಹೋಗುವಾಗ, ಮಾಲತಿ ಮರದ ಮೇಲೆ ಕುಳಿತು ಸಹಾಯಕ್ಕಾಗಿ ಕರೆದಿದ್ದಾರೆ. ಮಾಲತಿ ಅಳುತ್ತಾ ನಡೆದ ಕಥೆಯನ್ನು ವಿವರಿಸಿದ್ದಾರೆ. ಜಾಜ್ಮೌ ಪೊಲೀಸ್ ಠಾಣೆಯ ಉಸ್ತುವಾರಿ ವಿನಯ್ ಯಾದವ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿದರು. ಮಹಿಳೆಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಠಾಣೆಗೆ ಕರೆತರಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ