ಹೈದರಾಬಾದ್: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಮುಖ್ಯಮಂತ್ರಿ ಕಲ್ವಕುಂಟ್ಲ ಚಂದ್ರಶೇಖರ್ ರಾವ್ (K Chandrasekhar Rao) ಹಾಗೂ ಅವರ ಪುತ್ರಿ ಕೆ ಕವಿತಾ (K Kavitha) ವಿರುದ್ಧ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ವಾಗ್ದಾಳಿ ನಡೆಸಿದ್ದಾರೆ. ನಿಯತ್ತಿನಿಂದ ಇದ್ದರೆ ಭಯ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ED) ವಿಚಾರಣೆಗಾಗಿ ಕವಿತಾ ಅವರು ದೆಹಲಿಗೆ ತೆರಳಿದ್ದರ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲಾಗಿತ್ತು. ಈ ವಿಚಾರವಾಗಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿರುವ ಕಿಶನ್ ರೆಡ್ಡಿ, ಕಲ್ವಕುಂಟ್ಲ ಕುಟುಂಬದ ಪ್ರತಿನಿಧಿಗಳು ತಾವು ಬಲಿಪಶುಗಳೆಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಅವರ ನಡವಳಿಕೆಯು ಎಲ್ಲರಿಗೂ ‘ಉಲ್ಟಾ ಚೋರ್ ಕೊತ್ವಾಲ್ ಕೋ ದಾಂತೆ’ ಎಂಬ ಮಾತನ್ನು ನೆನಪಿಸುತ್ತದೆ ಎಂದು ಟೀಕಿಸಿದ್ದಾರೆ.
ಮದ್ಯ ಮಾರಾಟ ಮಾಡಿ ಅಕ್ರಮ ಸಂಪಾದನೆ ಮಾಡಲು ತೆಲಂಗಾಣ ಸಮಾಜದವರು ಕಲ್ವಕುಂಟ್ಲ ಕುಟುಂಬಕ್ಕೆ ಹೇಳಿದ್ದರೇ? ದೆಹಲಿಗೆ ಹೋಗಿ ಅಲ್ಲಿ ಅಕ್ರಮ ಮದ್ಯ ದಂಧೆ ಮಾಡಿ ಅಂತ ಹೇಳಿದ್ದರೇ? ಕಲ್ವಕುಂಟ್ಲ ಕುಟುಂಬದ ಆದಾಯ ಸಾಕಾಗುತ್ತಿಲ್ಲ, ಹೊರ ರಾಜ್ಯಗಳಲ್ಲಿ ವ್ಯಾಪಾರ ಮಾಡಬೇಕು ಎಂದು ತೆಲಂಗಾಣದವರು ಹೇಳಿದ್ದರೇ? ವ್ಯಾಪಾರದ ಲಾಭದಲ್ಲಿ ತೆಲಂಗಾಣ ಜನರಿಗೆ, ಮಹಿಳೆಯರಿಗೆ ಪಾಲು ಕೊಟ್ಟಿದ್ದೀರಾ? ಪ್ರಕರಣ ದಾಖಲಿಸಿದ ನಂತರ ತೆಲಂಗಾಣ ಜನರ ಹೆಸರಿನಲ್ಲಿ ಏಕೆ ಮಾತನಾಡಬೇಕು? ನೀವು ವ್ಯವಹಾರದಲ್ಲಿ ತಪ್ಪುಗಳನ್ನು ಮಾಡಿ ಅದರಿಂದ ಏಕೆ ನುಣುಚಿಕೊಳ್ಳುತ್ತಿದ್ದೀರಿ? ಲಕ್ಷಾಂತರ ರೂಪಾಯಿ ಮೌಲ್ಯದ ಸೆಲ್ ಫೋನ್ಗಳು ಯಾಕೆ ನಾಶವಾಗಿವೆ ಎಂದು ಕಿಶನ್ ರೆಡ್ಡಿ ಪ್ರಶ್ನೆಗಳ ಮಳೆಯನ್ನೇ ಗರೆದಿದ್ದಾರೆ.
ಇದನ್ನೂ ಓದಿ: ಕೇಂದ್ರದ ಯೋಜನಗಳಿಗೆ ತೆಲಂಗಾಣ ಸಿಎಂ ಕೆಸಿಆರ್ ಅಸಹಕಾರಕ್ಕೆ ಸಚಿವ ಕಿಶನ್ ರೆಡ್ಡಿ ಆಕ್ಷೇಪ; 11 ಪತ್ರಗಳ ಬಿಡುಗಡೆ
ಸುಳ್ಳು ಹೇಳುವುದರಲ್ಲಿ ಬಿಆರ್ಎಸ್ ನಾಯಕರಿಗಿಂತ ಮಿಗಿಲಾದವರು ಯಾರೂ ಇಲ್ಲ. ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಲ್ವಕುಂಟ್ಲ ಕುಟುಂಬಕ್ಕೆ ಇದೆಯೇ? ಕೆಸಿಆರ್ ಅವರ ಮೊದಲ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ಇರಲಿಲ್ಲ. ಅಂಥವರು ಈಗ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಮಹಿಳಾ ಪ್ರಾತಿನಿಧ್ಯಕ್ಕಾಗಿ ಧ್ವನಿಯೆತ್ತಿರುವುದಕ್ಕೆ ತಮ್ಮ ಮಗಳಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ ಎಂದು ಆರೋಪಿಸುತ್ತಾರೆ. ಅವರಿಗೆ ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಆರ್ಎಸ್ ಅನ್ನು ಗೆಲ್ಲಿಸುವುದಿಲ್ಲ ಎಂಬ ನಿರ್ಧಾರಕ್ಕೆ ತೆಲಂಗಾಣದ ಜನತೆ ಬಂದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಸಿಆರ್ ಗೆಲ್ಲುವುದಿಲ್ಲ. ತೆಲಂಗಾಣ ಜನತೆ ಈ ‘ನಿಜಾಮ್ ರಾಜ್’ ಮತ್ತು ಸರ್ವಾಧಿಕಾರವನ್ನು ಕೊನೆಗಾಣಿಸಬೇಕು ಎಂದು ನಿರ್ಧರಿಸಿದ್ದಾರೆ. ಕುಟುಂಬ ಆಡಳಿತದ ಸರ್ಕಾರ ನಮಗೆ ಬೇಡ ಎಂದು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. ಕೆಸಿಆರ್ ಕುಟುಂಬ ನಮ್ಮ ವಿರುದ್ಧ ದಿನವೂ ಸುಳ್ಳು ಪ್ರಚಾರ ಮಾಡುತ್ತಿದೆ ಎಂದೂ ಸಚಿವರು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 pm, Thu, 9 March 23