ಕೇಂದ್ರದ ಯೋಜನಗಳಿಗೆ ತೆಲಂಗಾಣ ಸಿಎಂ ಕೆಸಿಆರ್ ಅಸಹಕಾರಕ್ಕೆ ಸಚಿವ ಕಿಶನ್ ರೆಡ್ಡಿ ಆಕ್ಷೇಪ; 11 ಪತ್ರಗಳ ಬಿಡುಗಡೆ
ಕೇಂದ್ರ ಸರ್ಕಾರವು ತೆಲಂಗಾಣದಲ್ಲಿ ಹಮ್ಮಿಕೊಂಡಿರುವ ಯೋಜನೆಗಳಿಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ ಮಂಗಳವಾರ ಆರೋಪಿಸಿದ್ದಾರೆ.
ಹೈದರಾಬಾದ್: ಕೇಂದ್ರ ಸರ್ಕಾರವು ತೆಲಂಗಾಣದಲ್ಲಿ (Telangana) ಹಮ್ಮಿಕೊಂಡಿರುವ ಯೋಜನೆಗಳಿಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (K Chandrasekhar Rao) ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಮಂಗಳವಾರ ಆರೋಪಿಸಿದ್ದಾರೆ. ಹೈದರಾಬಾದ್ನ ಬಿಜೆಪಿ (BJP) ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ 2021ರ ಜನವರಿಯಿಂದ ಈವರೆಗೆ ಬರೆದಿರುವ 11 ಪತ್ರಗಳನ್ನು ಪ್ರದರ್ಶಿಸಿದರು. ಚಂದ್ರಶೇಖರ ರಾವ್ ಅವರು ತೆಲಂಗಾಣದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು. ತೆಲಂಗಾಣದಲ್ಲಿ ಹಮ್ಮಿಕೊಳ್ಳಲಾಗಿರುವ ಅನೇಕ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ, ರಾಜ್ಯದ ಅನುದಾನ ಬಿಡುಗಡೆಗೆ ಮನವಿ ಮಾಡಿ ಅನೇಕ ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಇದಕ್ಕೆ ಯಾವುದೇ ಉತ್ತರ ದೊರೆತಿಲ್ಲ ಎಂದು ಕಿಶನ್ ರೆಡ್ಡಿ ಆಪಾದಿಸಿದ್ದಾರೆ.
ಕೇಂದ್ರ ಸರ್ಕಾರವು ಎಂಎಂಟಿಎಸ್ ಯೋಜನೆಯ ಎರಡನೇ ಹಂತಕ್ಕೆ ಸಂಬಂಧಿಸಿ ಒಪ್ಪಂದದ ಪ್ರಕಾರ ನಡೆದುಕೊಂಡಿದ್ದರೂ ತೆಲಂಗಾಣ ಸರ್ಕಾರವು ತನ್ನ ಅನುದಾನ ಬಿಡುಗಡೆ ಮಾಡಿಲ್ಲ. ಈ ವಿಚಾರವಾಗಿ 2021ರ ಡಿಸೆಂನಬರ್ 21ರಿಂದ 2022ರ ಜನವರಿ 16ರ ಅವಧಿಯಲ್ಲಿ ಮೂರು ಬಾರಿ ಪತ್ರ ಬರೆಯಲಾಗಿತ್ತು ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಎಂಎಂಟಿಎಸ್ ಯೋಜನೆಯ ಎರಡನೇ ಹಂತವನ್ನು ಯಡಾರಿ ವರೆಗೆ ವಿಸ್ತರಣೆ ಮಾಡುವ ಸಂಬಂಧ 2022ರ ಜನವರಿ 16ರಿಂದ 26ರ ಅವಧಿಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಅದಕ್ಕೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಎಂಜಿನಬಿಎಸ್ನಿಂದ ಫಲಕ್ನುಮಾ ವರೆಗೆ ಹೈದರಾಬಾದ್ ಮೆಟ್ರೋ ರೈಲು ಮಾರ್ಗದ ಕಾಮಗಾರಿಯ ಪ್ರಾರಂಭದ ಬಗ್ಗೆ 2021ರ ಡಿಸೆಂಬರ್ನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಅದಕ್ಕೂ ಉತ್ತರ ಬಂದಿಲ್ಲ ಎಂದು ಕೇಂದ್ರ ಸಚಿವರು ದೂರಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ರೈಲ್ವೆ ಸಂಬಂಧಿತ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಒಪ್ಪಂದದ ಪ್ರಕಾರ ನೀಡಬೇಕಿರುವ ಅನುದಾನದ ಬಗ್ಗೆಯೂ ಪತ್ರ ಮುಖೇನ ವಿನಂತಿಸಲಾಗಿತ್ತು. ಇದಕ್ಕೂ ರಾಜ್ಯ ಸರ್ಕಾರದ ಕಡೆಯಿಂದ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳಿಗೆ 50 ಬಾರಿ ಭೇಟಿ ನೀಡಿದ್ದಾರೆ: ಸಚಿವ ಕಿಶನ್ ರೆಡ್ಡಿ
ತೆಲಂಗಾಣದ ವಾರಂಗಲ್ ಜಿಲ್ಲೆಯ ಧರ್ಮಸಾಗರ ಮಂಡಲದ ಯೆಲಕುರ್ತಿ ಗ್ರಾಮದಲ್ಲಿ ಸೈನಿಕ ಶಾಲೆ ಆರಂಭಿಸುವ ಬಗ್ಗೆ 2017ರಲ್ಲಿ ರಕ್ಷಣಾ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು. 2022ರ ಫೆಬ್ರವರಿ 11ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದರೂ ಏನೂ ಪ್ರಗತಿಯಾಗಿಲ್ಲ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
ತೆಲಂಗಾಣದ ಕಾಜಿಪೇಟ್‌ನಲ್ಲಿ ರೈಲು ಗಾಲಿ ತಯಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಾಗಿ 521 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಯೋಜನೆ ಹಮ್ಮಿಕೊಂಡಿದ್ದು, ಅದಕ್ಕೆ ಭೂಮಿ ಒದಗಿಸಲು ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿಲ್ಲ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ.
ತೆಲಂಗಾಣದಲ್ಲಿ ತಂತ್ರಜ್ಞಾನ ಕೇಂದ್ರಗಳು ಮತ್ತು ಎಕ್ಸ್ಟೆನ್ಶನ್ ಸೆಂಟರ್ಗಳನ್ನು ಸ್ಥಾಪಿಸುವ ಯೋಜನೆಗೂ ರಾಜ್ಯ ಸರ್ಕಾರದಿಂದ ಸಹಕಾರ ದೊರೆಯುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಗುಂಡಂನಲ್ಲಿ ಇಎಸ್ಐ ಆಸ್ಪತ್ರೆಗಳನ್ನು ನಿರ್ಮಿಸುವ ವಿಚಾರವಾಗಿಯೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಅದಕ್ಕೂ ಸ್ಪಂದನೆ ಇಲ್ಲ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
ಚೆರ್ಲಪಲ್ಲಿ ಮತ್ತು ನಾಗುಲಪಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಡಲು ಮಧ್ಯ ಪ್ರವೇಶಿಸುವಂತೆ 2022ರ ಜೂನ್ 15ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಆದಾಗ್ಯೂ ಈ ವಿಚಾರದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿ ಸೈನ್ಸ್ ಸಿಟಿ ಸ್ಥಾಪನೆ ವಿಚಾರವಾಗಿ 2021ರ ಡಿಸೆಂಬರ್ 15ರಿಂದ ಮೊದಲ್ಗೊಂಡು ಮೂರು ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಆದಾಗ್ಯೂ ಏನೂ ಪ್ರಗತಿಯಾಗಿಲ್ಲ ಎಂದು ರೆಡ್ಡಿ ದೂರಿದ್ದಾರೆ.
ಅನಂತಗಿರಿಯಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಹಣಕಾಸು ನೆರವು ಕೋರಿ ಕೇಂದ್ರ ಆಯುಷ್ ಇಲಾಖೆಗೆ ರಾಜ್ಯ ಸರ್ಕಾರದಿಂದ ಪ್ರಸ್ತಾವ ಬಂದಿತ್ತು. 2016-17ರಲ್ಲಿ ಕೇಂದ್ರ ಸರ್ಕಾರ 6 ಕೋಟಿ ಅನುದಾನ ಘೋಷಿಸಿತ್ತು. ಆದಾಗ್ಯೂ ತೆಲಂಗಾಣ ಸರ್ಕಾರ ಅನುದಾನವನ್ನು ಬಳಸಿಯೇ ಇಲ್ಲ ಎಂದು ಕಿಶನ್ ರೆಡ್ಡಿ ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ