ದೆಹಲಿ: ಜನರಲ್ ಬಿಪಿನ್ ರಾವತ್. ಕಳೆದ ಮೂರು ವರ್ಷಗಳಿಂದ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗಬೇಕಿದ್ದ ಖಡಕ್ ಆಫೀಸರ್. ಆದರೆ ನಿವೃತ್ತಿಗೂ ಒಂದು ದಿನ ಮುಂಚಿತವಾಗಿ ಬಿಪಿನ್ ರಾವತ್ಗೆ ಅದೃಷ್ಟ ಖುಲಾಯಿಸಿದೆ. ಹೊಸ ಜವಾಬ್ದಾರಿ ಸಿಕ್ಕಿದೆ. ಮತ್ತೊಮ್ಮೆ ದೇಶ ಸೇವೆ ಮಾಡೋ ಅವಕಾಶ ದಕ್ಕಿದೆ.
ದೇಶದ ಮೊದಲ CDS ಆಗಿ ರಾವತ್ ನೇಮಕ:
ದೇಶದ ಮೂರು ಸಶಸ್ತ್ರ ಪಡೆಗಳಾದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಗೆ ಒಬ್ಬರೇ ಮುಖ್ಯಸ್ಥರನ್ನು ನೇಮಿಸುವ ಬಹುದಿನಗಳ ಯೋಜನೆ ಕೊನೆಗೂ ಪೂರ್ಣಗೊಂಡಿದೆ. ನಿರೀಕ್ಷೆಯಂತೆ ಭೂಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರನ್ನ ದೇಶದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಅಥವಾ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ರನ್ನಾಗಿ ನೇಮಕ ಮಾಡಲಾಗಿದೆ.
ಸಿಡಿಎಸ್ ಆಗಿರೋ ಬಿಪಿನ್ ರಾವತ್, ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ಜೊತೆ ನೇರ ಸಂಪರ್ಕ ಹೊಂದಲಿದ್ದಾರೆ. ಜೊತೆಗೆ ಮೂರೂ ಪಡೆಗಳ ಮುಖ್ಯಸ್ಥರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ಗೆ ರಿಪೋರ್ಟ್ ಮಾಡಲಿದ್ದಾರೆ.
ಅಂದ್ಹಾಗೆ ಒಬ್ಬರೇ ಪರಮೋಚ್ಚ ಮಿಲಿಟರಿ ಅಧಿಕಾರಿ ಇರಬೇಕೆಂಬ ಕೂಗು ದಶಕಗಳಿಂದಲೂ ಇದೆ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಸೇನೆಯ ಹಲವು ಲೋಪದೋಷಗಳು ಕಣ್ಣಿಗೆ ಕಟ್ಟುವಂತಿದ್ದವು. ಅದನ್ನ ಪರಿಶೀಲಿಸಲು ರಚನೆಯಾಗಿದ್ದ ಸಮಿತಿಯು ಮೂರೂ ಪಡೆಗಳ ಮಧ್ಯೆ ಸಮನ್ವಯತೆ ಸಾಧಿಸುವ ಒಬ್ಬ ಮಿಲಿಟರಿ ಸಲಹೆಗಾರನ ಅಗತ್ಯ ಇದೆ ಅಂತ ಶಿಫಾರಸು ಮಾಡಿತ್ತು. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಕೂಡ ಸಿಡಿಎಸ್ ಹುದ್ದೆ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ್ದರು.
ಸಿಡಿಎಸ್ ಜವಾಬ್ದಾರಿ ಏನು?
ದೇಶದ ರಕ್ಷಣೆಗೆ ಸಂಬಂಧಿಸಿದಂತೆ ಸೇನೆಯ ಮೂರೂ ಪಡೆಗಳ ಪರವಾಗಿ ಸರ್ಕಾರಕ್ಕೆ ಸಲಹೆ ನೀಡುವ ಮುಖ್ಯ ಪಾತ್ರವನ್ನ ಸಿಡಿಎಸ್ ನಿರ್ವಹಿಸಲಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಗ್ರ ವ್ಯವಹಾರ ಮತ್ತು ಮೂರೂ ಪಡೆಗಳ ನಡುವೆ ಸಮನ್ವಯತೆ ಸಾಧಿಸುವುದು ಸಿಡಿಎಸ್ ಜವಾಬ್ದಾರಿಯಾಗಿರಲಿದೆ.
ಸಿಡಿಎಸ್ ಹುದ್ದೆಯು ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರ ಶ್ರೇಣಿಯಲ್ಲೇ ಇರುತ್ತದೆ. ಆದರೆ ‘ಸಮಾನರ ನಡುವೆ ಮೊದಲಿಗ’ ಆಗಿರುತ್ತದೆ ಸಿಡಿಎಸ್ ಹುದ್ದೆ. ಅಲ್ಲದೆ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸೇನಾ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಬೇಕಾಗುತ್ತೆ. ಸಲಕರಣೆಗಳು ಹಾಗೂ ಶಸ್ತ್ರಾಸ್ತ್ರಗಳ ಖರೀದಿ, ಸಿಬ್ಬಂದಿ ತರಬೇತಿ ಮತ್ತು ಸಿಬ್ಬಂದಿ ನಿಯೋಜನೆ ವಿಚಾರದಲ್ಲಿ ಮೂರೂ ಪಡೆಗಳ ನಡುವೆ ಸಮನ್ವಯ ತರುವ ಹೊಣೆ ಸಿಡಿಎಸ್ ಮೇಲೆ ಇರಲಿದೆ.
ಒಟ್ನಲ್ಲಿ, ಹೊಸದಾಗಿ ರಚನೆಯಾಗಿರುವ ಚೀಫ್ ಆಫ್ ಡಿಫೆನ್ಸ್ ಹುದ್ದೆಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನ ನೇಮಕ ಮಾಡಲಾಗಿದ್ದು, ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರಾವನೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.