‘ನಮಕ್ ಹರಾಮ್’ಗಳ ಮತಗಳು ಬೇಕಿಲ್ಲ: ಬಿಹಾರದಲ್ಲಿ ಗಿರಿರಾಜ್ ಸಿಂಗ್ ಗುಡುಗು; ಮುಸ್ಲಿಮರನ್ನು ಕುಟುಕಿದ ಮಾಡಿದ ಕೇಂದ್ರ ಸಚಿವ

Giriraj Singh says he doesn't need votes of namak haraams: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮುಸ್ಲಿಮರನ್ನು ನಮಕ್ ಹರಾಮ್​ಗಳೆಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ಕೇಂದ್ರ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದರೂ ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ ಎಂದು ಗಿರಿರಾಜ್ ಟೀಕಿಸಿದ್ದಾರೆ. ಲಾಭ ಪಡೆದು ಮತ ಹಾಕದವರು ನಮಕ್ ಹರಾಮ್​ಗಳು ಎಂದು ಮುಸ್ಲಿಮರ ವಿರುದ್ಧ ನೇರವಾಗಿಯೇ ಅವರು ವಾಗ್ದಾಳಿ ಮಾಡಿದ್ದಾರೆ.

‘ನಮಕ್ ಹರಾಮ್’ಗಳ ಮತಗಳು ಬೇಕಿಲ್ಲ: ಬಿಹಾರದಲ್ಲಿ ಗಿರಿರಾಜ್ ಸಿಂಗ್ ಗುಡುಗು; ಮುಸ್ಲಿಮರನ್ನು ಕುಟುಕಿದ ಮಾಡಿದ ಕೇಂದ್ರ ಸಚಿವ
ಗಿರಿರಾಜ್ ಸಿಂಗ್

Updated on: Oct 19, 2025 | 9:27 PM

ಪಾಟ್ನಾ, ಅಕ್ಟೋಬರ್ 19: ಹರಿತವಾದ ವಾಗ್ದಾಳಿಗಳಿಗೆ ಹೆಸರಾಗಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Giriraj Singh) ಬಿಹಾರ ಚುನಾವಣಾ ಪ್ರಚಾರದ (Bihar elections) ವೇಳೆ ವಿವಾದಾತ್ಮಕ ಎನಿಸುವ ಹೇಳಿಕೆ ನೀಡಿದ್ದಾರೆ. ಬಿಹಾರದ ಅರವಾಲ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಮಾಡಿದ ಗಿರಿರಾಜ್ ಸಿಂಗ್, ಈ ವೇಳೆ ತನಗೆ ನಮಕ್ ಹರಾಮ್​ಗಳ (ನಂಬಿಕೆ ದ್ರೋಹಿಗಳು) ಮತ ಬೇಕಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ಸೌಲಭ್ಯ ಪಡೆದರೂ ಬಿಜೆಪಿಗೆ ಮತ ಹಾಕದ ಮುಸ್ಲಿಮರನ್ನು ಗಿರಿರಾಜ್ ಸಿಂಗ್ ನಮಕ್ ಹರಾಮ್​ಗಳೆಂದು ಸಂಬೋಧಿಸಿದ್ದರು.

‘ನಿಮಗೆ ಆಯುಷ್ಮಾನ್ ಭಾರತ್ ಕಾರ್ಡ್ ಇದೆಯಾ ಎಂದು ಮೌಲ್ವಿಯೊಬ್ಬರನ್ನು (ಮುಸ್ಲಿಂ ಪೂಜಾರಿ) ಒಮ್ಮೆ ಕೇಳಿದೆ. ಅದಕ್ಕೆ ಅವರು ಹೌದೆಂದರು. ಈ ಕಾರ್ಡ್​ಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ನೋಡಿ ಕೊಡಲಾಯಿತೆ ಎಂದು ಕೇಳಿದೆ. ಇಲ್ಲ ಎಂದರು. ನೀವು ನನಗೆ ಮತ ಹಾಕಿದ್ದೀರಾ ಎಂದು ಕೇಳಿದೆ. ಹೌದು ಎಂದರು. ಖುದಾ (ದೇವರು) ಮೇಲೆ ಆಣೆ ಮಾಡಿ ಹೇಳಲು ತಿಳಿಸಿದೆ. ಅದಕ್ಕೆ ಅವರು ಇಲ್ಲ ಎಂದರು’ ಎಂದು ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಗಿರಿರಾಜ್ ಸಿಂಗ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಗೆ ಬೆಳಕಿನ ಮೆರಗು ಕೊಟ್ಟ ದೀಪಾರತಿ; 2 ಗಿನ್ನೆಸ್ ದಾಖಲೆಗಳ ನಿರ್ಮಾಣ

‘ಕೇಂದ್ರದ ಎಲ್ಲಾ ಯೋಜನೆಗಳ ಲಾಭವನ್ನು ಮುಸ್ಲಿಮರು ಪಡೆಯುತ್ತಾರೆ. ಆದರೆ, ವೋಟ್ ಮಾತ್ರ ಹಾಕುವುದಿಲ್ಲ. ಇಂಥ ಜನರನ್ನು ನಮಕ್ ಹರಾಮ್ ಎಂದು ಕರೆಯಲಾಗುತ್ತದೆ. ನಾನು ಆ ಮೌಲ್ವಿ ಸಾಹೇಬರಿಗೆ ಹೇಳಿದೆ, ನಮಗೆ ನಮಕ್ ಹರಾಮ್​ಗಳ ಮತ ಬೇಕಿಲ್ಲ’ ಎಂದು ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.

‘ಬಿಹಾರದಲ್ಲಿ ಸಮಗ್ರ ಅಭಿವೃದ್ಧಿಗಾಗಿ ಎನ್​ಡಿಎ ವ್ಯಾಪಕ ಮೂಲಸೌಕರ್ಯ ಯೋಜನೆಗಳನ್ನು ಹಮ್ಮಿಕೊಂಡರೂ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ. ಈ ಅಭಿವೃದ್ಧಿ ಕಾರ್ಯಗಳನ್ನು ಎನ್​ಡಿಎ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮಾತ್ರ ಅಲ್ಲ, ಸರ್ವಜನರಿಗೂ ಲಾಭವಾಗುವಂತೆ ಮಾಡಲಾಗುತ್ತದೆ. ಎನ್​ಡಿಎ ಸರ್ಕಾರ ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ಕೆಲಸ ಮಾಡುತ್ತದೆ. ಆದರೆ ಮುಸ್ಲಿಮರು ಮಾತ್ರ ಬಿಜೆಪಿಗೆ ಮತ ಹಾಕುವುದಿಲ್ಲ’ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹೋಗಿ ವಾಪಸಾದ ಅರ್ಜಿತ್ ಚೌಬೆ

ಬಿಹಾರ ರಾಜ್ಯದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ನವೆಂಬರ್ 6 ಮತ್ತು 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. 243 ಸದಸ್ಯಬಲದ ಬಿಹಾರ ವಿಧಾನಸಭೆಯ ಅಧಿಕಾರ ಗದ್ದುಗೆ ಹಿಡಿಯಲು 122 ಸ್ಥಾನಗಳ ಅಗತ್ಯ ಇದೆ. ಸದ್ಯ ಅಲ್ಲಿ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಇದೆ. ಆರ್​ಜೆಡಿ, ಕಾಂಗ್ರೆಸ್ ಮೊದಲಾದ ಪಕ್ಷಗಳು ಒಟ್ಟುಗೂಡಿ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ