
ಪಣಜಿ, ಮೇ 15: ಗೋವಾ ಕಾಂಗ್ರೆಸ್ (Congress) ನಾಯಕ ಕೇತನ್ ಭಾಟಿಕರ್ (38) (Ketan Bhatikar) ಹಾವಿನ ಕಡಿತದಿಂದ ಮೃತಪಟ್ಟಿದ್ದಾರೆ. ಗೋವಾ-ಕರ್ನಾಟಕ ಗಡಿ ಭಾಗದಲ್ಲಿ ಕರ್ಮಲ್ ಘಾಟ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಕೇತನ್ ಭಾಟಿಕರ್ ದಾಂಡೇಲಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಪಕ್ಷದ ಉದಯೋನ್ಮುಖ ನಾಯಕನ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ರಾತ್ರಿ ಕೇತನ್ ಭಾಟಿಕರ್ ಅವರು ಕರ್ನಾಟಕದ ದಾಂಡೇಲಿ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಗೋವಾ-ಕರ್ನಾಟಕ ಗಡಿಯಲ್ಲಿರುವ ಕರ್ಮಲ್ ಘಾಟ್ ಬಳಿ ಯಾವುದೋ ಕಾರಣಕ್ಕಾಗಿ ವಾಹನದಿಂದ ಕೆಳಗಿಳಿದಾಗ ಹಾವೊಂದು ಕಡಿದಿದೆ. ತಕ್ಷಣ ಅವರನ್ನು ಗೋವಾದ ಧಾರವಾಡೋರಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಕೇತನ್ ಭಾಟಿಕರ್ ಅವರು ಗೋವಾ ಕಾಂಗ್ರೆಸ್‌ನ ಭರವಸೆಯ ನಾಯಕರಾಗಿದ್ದರು. ಫೋಂಡಾ ಉಪಚುನಾವಣೆಗೆ ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಹೈಕೋರ್ಟ್ ತೀರ್ಪಿನಿಂದಾಗಿ ಉಪಚುನಾವಣೆ ರದ್ದಾಗಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಸದ್ಯ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ಇದನ್ನೂ ಓದಿ: ದೆಹಲಿ-ಗೋವಾ ಆಕಾಶ ಏರ್ ವಿಮಾನದ ವಾಶ್ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ
ಕೇತನ್ ಭಾಟಿಕರ್ ನಿಧನಕ್ಕೆ ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕೇತನ್ ಅವರ ಸಾರ್ವಜನಿಕ ಸೇವೆ ಮತ್ತು ಬದ್ಧತೆಯನ್ನು ನೆನೆಯುತ್ತಾ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಾಂಗ್ರೆಸ್ ಪಕ್ಷ ಪ್ರಾರ್ಥಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Fri, 15 May 26