ಬೆಂಗಳೂರಿನಿಂದ ಹೊರಟಿದ್ದ ಗೋ ಏರ್​ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ; ಪ್ರಯಾಣಿಕರು ಸುರಕ್ಷಿತ

| Updated By: Lakshmi Hegde

Updated on: Nov 27, 2021 | 3:08 PM

ಗೋ ಏರ್​ ಫ್ಲೈಟ್​​ನ ವಕ್ತಾರ ಕೂಡ ಘಟನೆಯನ್ನು ವಿವರಿಸಿದ್ದು, ಬೆಂಗಳೂರಿನಿಂದ ಪಾಟ್ನಾಕ್ಕೆ ಹೋಗುತ್ತಿದ್ದ ವಿಮಾನ ತುರ್ತಾಗಿ ನಾಗ್ಪುರದ ಕಡೆ ತಿರುಗವಂತಾಗಲು ಕಾರಣ ಕಾಕ್​ಪಿಟ್​​ನಲ್ಲಿ ಕಾಣಿಸಿಕೊಂಡ ಎಂಜಿನ್​ ದೋಷ ಎಂದಿದ್ದಾರೆ.

ಬೆಂಗಳೂರಿನಿಂದ ಹೊರಟಿದ್ದ ಗೋ ಏರ್​ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ; ಪ್ರಯಾಣಿಕರು ಸುರಕ್ಷಿತ
ಪ್ರಾತಿನಿಧಿಕ ಚಿತ್ರ
Follow us on

ಪಾಟ್ನಾ ಮೂಲದ ಗೋ ಏರ್​ ವಿಮಾನ ತಾಂತ್ರಿಕ ದೋಷದಿಂದ ನಾಗ್ಪುರ ಏರ್​ಪೋರ್ಟ್​ನಲ್ಲಿ ತುರ್ತು ಭೂಸ್ಪರ್ಶವಾಗಿದೆ. 139 ಪ್ರಯಾಣಿಕರನ್ನು ಹೊತ್ತ ಈ ವಿಮಾನ ಬೆಂಗಳೂರಿನಿಂದ ಹೊರಟಿತ್ತು. ಇದರ ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶವಾಗಿದೆ ಎಂದು ಏರ್​ಲೈನ್ಸ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿದ ನಾಗ್ಪುರ ಏರ್​ಪೋರ್ಟ್ ನಿರ್ದೇಶಕ ಅಬಿಡ್​ ರುಹಿ, G8 873 ಎಂಬ ಗೋ ಏರ್​​ ವಿಮಾನ ಇಂದು ಬೆಳಗ್ಗೆ 11.15ರ ಹೊತ್ತಿಗೆ ತುರ್ತಾಗಿ ಲ್ಯಾಂಡ್​ ಆಗಿದ್ದಾಗಿ ಹೇಳಿದ್ದಾರೆ. 

ವಿಮಾನದ ಎಂಜಿನ್​​ನಲ್ಲಿ ಏನೋ ದೋಷವುಂಟಾಗುತ್ತಿರುವ ಬಗ್ಗೆ ಗೋ ಏರ್​ ವಿಮಾನದ ಪೈಲಟ್​ ನಾಗ್ಪುರ ಏರ್​ ಟ್ರಾಫಿಕ್​ ಕಂಟ್ರೋಲರ್​ಗೆ ಮಾಹಿತಿ ನೀಡಿದರು ಮತ್ತು ನಾಗ್ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗಲು ಅನುಮತಿ ಕೇಳಿದರು. ನಾವು ಅದಕ್ಕೆ ಅನುಮತಿ ಕೊಡುವ ಜತೆಗೆ ಮುಂದೆ ಆಗಬಹುದಾದ ಅನಾಹುತ ನಿಯಂತ್ರಿಸಲು ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೆವು. ಇದನ್ನು ತುರ್ತು ಸಂದರ್ಭವೆಂದು ಪರಿಗಣಿಸಿ ರನ್​ವೇಯನ್ನು ಸಿದ್ಧಮಾಡಲಾಯಿತು. ವೈದ್ಯರು, ಆಂಬುಲೆನ್ಸ್​​ಗಳು, ಅಗ್ನಿಶಾಮಕದಳದ ಸಿಬ್ಬಂದಿಯನ್ನೂ ಸಜ್ಜುಗೊಳಿಸಲಾಯಿತು. ಆದರೆ ಅದೃಷ್ಟವಶಾತ್​ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಯಾರಿಗೂ ಯಾವುದೇ ತೊಂದರೆಯಾಗಲಿಲ್ಲ ಎಂದು ರುಹಿ ಹೇಳಿದ್ದಾರೆ.

ಹಾಗೇ, ಗೋ ಏರ್​ ಫ್ಲೈಟ್​​ನ ವಕ್ತಾರ ಕೂಡ ಘಟನೆಯನ್ನು ವಿವರಿಸಿದ್ದು, ಬೆಂಗಳೂರಿನಿಂದ ಪಾಟ್ನಾಕ್ಕೆ ಹೋಗುತ್ತಿದ್ದ ವಿಮಾನ ತುರ್ತಾಗಿ ನಾಗ್ಪುರದ ಕಡೆ ತಿರುಗವಂತಾಗಲು ಕಾರಣ ಕಾಕ್​ಪಿಟ್​​ನಲ್ಲಿ ಕಾಣಿಸಿಕೊಂಡ ಎಂಜಿನ್​ ದೋಷ. ಪೈಲಟ್​​ನ ಮುಂಜಾಗರೂಕತೆಯಿಂದ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ. ನಂತರ ಅದರಲ್ಲಿದ್ದ ಪ್ರಯಾಣಿಕರಿಗೆ ಬೇರೆ ವಿಮಾನ ವ್ಯವಸ್ಥೆ ಮಾಡಲಾಯಿತು ಎಂದು ಹೇಳಿದ್ದಾರೆ. ಹಾಗೇ, ಪ್ರಯಾಣಿಕರಿಗೆ ಆದ ಈ ಅನನಕೂಲಕ್ಕೆ ವಿಷಾದಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Indonesia Open: ಮತ್ತೆ ಸೆಮಿಫೈನಲ್​ನಲ್ಲಿ ಎಡವಿದ ಪಿವಿ ಸಿಂಧು; ಇಂಡೋನೇಷ್ಯಾ ಓಪನ್‌ ಪ್ರಶಸ್ತಿ ಕನಸು ಭಗ್ನ

Published On - 3:07 pm, Sat, 27 November 21