ವಿಮಾನ ಪ್ರಯಾಣ ದರವನ್ನು ನಿಯಂತ್ರಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

| Updated By: ರಶ್ಮಿ ಕಲ್ಲಕಟ್ಟ

Updated on: Dec 28, 2022 | 7:21 PM

2013-14ರಲ್ಲಿ 74 ವಿಮಾನ ನಿಲ್ದಾಣಗಳಿದ್ದು, ಈ ಸಂಖ್ಯೆ 146ಕ್ಕೆ ಏರಿದೆ ಎಂದ ಅವರು, ಮುಂದಿನ 4-5 ವರ್ಷಗಳಲ್ಲಿ ಈ ಸಂಖ್ಯೆ 200 ದಾಟುವ ನಿರೀಕ್ಷೆ ಇದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ವಿಮಾನ ಪ್ರಯಾಣ ದರವನ್ನು ನಿಯಂತ್ರಿಸುವ ಉದ್ದೇಶ  ಸರ್ಕಾರಕ್ಕೆ ಇಲ್ಲ: ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ
Follow us on

ದೆಹಲಿ: ವಿಮಾನ ಪ್ರಯಾಣ ದರವನ್ನು ನಿಯಂತ್ರಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಹೇಳಿದ್ದಾರೆ. ಎನ್​​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಂಧಿಯಾ ಮಾರುಕಟ್ಟೆಯು ತನ್ನಷ್ಟಕ್ಕೆ ತಾನೇ ಬೆಳೆಯಬೇಕು ಎಂದಿದ್ದಾರೆ. ಭಾರತದಲ್ಲಿನ ಏರ್‌ಲೈನ್‌ಗಳ (Airlines) ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಗ್ರಾಹಕರು ಅಗ್ಗದ ದರಗಳಿಂದ ಪ್ರಯೋಜನ ಪಡೆಯುತ್ತಾರೆಯೇ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಭಾರತದಲ್ಲಿ ವಾಯುಯಾನವು ಬೆಳೆಯುತ್ತಿದೆ ಎಂದು ಅವರು ಹೇಳಿದ್ದಾರೆ. ವಿಮಾನಯಾನ ಸಂಸ್ಥೆಗಳು ಮತ್ತು ಗ್ರಾಹಕರು ಇಬ್ಬರೂ “ವಾಲ್ಯೂಮ್ ಗೇಮ್” ನಲ್ಲಿ ಲಾಭ ಪಡೆಯುತ್ತಾರೆ ಎಂದಿದ್ದಾರೆ ಸಿಂಧಿಯಾ. 20 ವರ್ಷಗಳ ನಂತರ, ಇರುವ ಕಂಪನಿಗಳನ್ನು ಮುಚ್ಚುವುದಕ್ಕೆ ಹೆಸರುವಾಸಿಯಾದ ವಲಯದಲ್ಲಿ ಹೊಸ ಪ್ರವೇಶವನ್ನು (ಆಕಾಶ್ ಏರ್) ಹೊಂದಿದ್ದೇವೆ” ಎಂದು ಅವರು ಒತ್ತಿ ಹೇಳಿದರು. ಡಿಸೆಂಬರ್ 24ರಂದು ದೈನಂದಿನ ವಿಮಾನ ಪ್ರಯಾಣಿಕರ ಸಂಖ್ಯೆ 4.3 ಮಿಲಿಯನ್ ದಾಟಿತ್ತು. ವಿಮಾನಯಾನ ವಲಯವು ಹೊಸ ರೀತಿಯಲ್ಲಿ ಬೆಳವಣಿಗೆ ಕಂಡುಕೊಂಡಿದ್ದು, ಈ ಬೆಳವಣಿಗೆ ಶಾಶ್ವತವಾಗಲಿದೆ ಎಂದು ಅವರು ಹೇಳಿದ್ದಾರೆ.

2019 ಕ್ಕೆ ಹೋಲಿಸಿದರೆ ಈ ವರ್ಷ 15 ಪ್ರತಿಶತದಷ್ಟು ಬೆಳವಣಿಗೆಯ ಹಿಂದೆ ಅವರು ಎರಡು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಕೋವಿಡ್ ನಂತರ ಜನರು ಪ್ರಯಾಣಿಸಲು ಬಯಸಿದ್ದು ಮೊದಲ ಅಂಶವಾದರೆ ಫ್ಲೀಟ್ ಗಾತ್ರವನ್ನು ಹೆಚ್ಚಿಸುವ ವಿಮಾನಯಾನ ಸಂಸ್ಥೆಗಳು ಮತ್ತು ಹೆಚ್ಚುತ್ತಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಎರಡನೇ ಅಂಶವಾಗಿದೆ.

2013-14ರಲ್ಲಿ 74 ವಿಮಾನ ನಿಲ್ದಾಣಗಳಿದ್ದು, ಈ ಸಂಖ್ಯೆ 146ಕ್ಕೆ ಏರಿದೆ ಎಂದ ಅವರು, ಮುಂದಿನ 4-5 ವರ್ಷಗಳಲ್ಲಿ ಈ ಸಂಖ್ಯೆ 200 ದಾಟುವ ನಿರೀಕ್ಷೆ ಇದೆ ಎಂದರು. ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ ಅವರು ದೆಹಲಿ ಇತ್ತೀಚೆಗೆ ದೊಡ್ಡ ಕಾಯುವ ಸಮಯ ಮತ್ತು ದೀರ್ಘ ಸರತಿ ಸಾಲುಗಳನ್ನು ಕಂಡಿದೆ ಎಂದಿದ್ದಾರೆ. ಬೆಳವಣಿಗೆಯು ಹೆಚ್ಚಿನ ಬೇಡಿಕೆಗಳನ್ನು ತರುತ್ತದೆ. ಆರು ಮೆಟ್ರೋ ನಗರಗಳಲ್ಲಿ ಹಳೆಯ ಮತ್ತು ಹೊಸ ವಿಮಾನ ನಿಲ್ದಾಣಗಳ ಸಾಮರ್ಥ್ಯವು 192 ಮಿಲಿಯನ್‌ನಿಂದ ಆಗಿದ್ದು ಮುಂದಿನ 4-5 ವರ್ಷಗಳಲ್ಲಿ ವರ್ಷಕ್ಕೆ 420 ಮಿಲಿಯನ್ ತಲುಪಲಿದೆ ಎಂದಿದ್ದಾರೆ.

ಹೆಚ್ಚಿನ ವಿಮಾನಗಳನ್ನು ನಿಗದಿಪಡಿಸುವುದು ಮತ್ತು ಇನ್ನೊಂದು ಭದ್ರತಾ ತಪಾಸಣೆಗಳನ್ನು ನಿರ್ವಹಿಸುವ ಸಾಮರ್ಥ್ಯದ ಹೆಚ್ಚಳ ಮಾಡುವುದು ವಿಮಾನ ನಿಲ್ದಾಣಗಳ ದಟ್ಟಣೆಯನ್ನು ಕಡಿಮೆ ಮಾಡಲು ಇರುವ ಕಾರ್ಯತಂತ್ರವಾಗಿದೆ.

ದೆಹಲಿಯಲ್ಲಿ ಭದ್ರತಾ ಚೆಕ್ ಕ್ಯೂಗಳ ಸಂಖ್ಯೆಯು ಒಂದು ತಿಂಗಳೊಳಗೆ 13 ರಿಂದ 21 ಕ್ಕೆ ಏರಿದೆ, “ನಾವು ಮುಂಬೈ ಮತ್ತು ಬೆಂಗಳೂರಿನಲ್ಲಿ ಅದನ್ನು ಮಾಡುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಮುಂದಿನ 40 ದಿನ ನಿರ್ಣಾಯಕ, ಜನವರಿ ಮಧ್ಯಭಾಗದಲ್ಲಿ ಕೋವಿಡ್​​​​ ಪ್ರಕರಣ ಏರಿಕೆಯಾಗುವ ಸಾಧ್ಯತೆ: ತಜ್ಞರು

ಏರ್‌ಲೈನ್ಸ್‌ಗಳ ವ್ಯವಹಾರದ ಬಗ್ಗೆ ಮಾತನಾಡಿದ ಅವರು ಏರ್ ಇಂಡಿಯಾ ಮತ್ತು ಇಂಡಿಗೋ ಹೊರತುಪಡಿಸಿ ಎಲ್ಲಾ ಹಣದ ಕೊರತೆ ಅನುಭವಿಸುತ್ತಿವೆ. ಇದು ವಿಮಾನಯಾನ ಸಂಸ್ಥೆಗಳಿಗೆ ಕಷ್ಟಕರ ಸಮಯವಾಗಿದೆ. ಮತ್ತು ಅವರು ಇನ್ನೂ ಅದರಿಂದ ಹೊರ ಬಂದಿಲ್ಲ ಎಂದಿದ್ದಾರೆ. ಏರ್ ಟರ್ಬೈನ್ ಇಂಧನ (ಎಟಿಎಫ್) ಮೇಲೆ ರಾಜ್ಯಗಳು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ಮಾಡಿದ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು. ಇಂಧನವು ವಿಮಾನಯಾನ ಸಂಸ್ಥೆಗಳನ್ನು ನಡೆಸುವ ವೆಚ್ಚದ ಅರ್ಧದಷ್ಟಾಗಿದೆ ಎಂದಿದ್ದಾರೆ.

ಎಟಿಎಫ್ ಅನ್ನು ಜಿಎಸ್‌ಟಿ ಆಡಳಿತದ ಅಡಿಯಲ್ಲಿ ತರುವ ಕುರಿತು ಹೇಳಿದ ಅವರು ಇದು ಸಮಾಲೋಚನಾ ಪ್ರಕ್ರಿಯೆಯಾಗಿದೆ.  ಇದು ಸಮಯ ತೆಗೆದುಕೊಳ್ಳುತ್ತದೆ, ಆದರೆ ರಾಜ್ಯಗಳು ವ್ಯಾಟ್ ಅನ್ನು ಕಡಿತಗೊಳಿಸುವುದರೊಂದಿಗೆ ಈಗಾಗಲೇ ಸಾಕಷ್ಟು ಸಾಧಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ