AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಕುಲದಲ್ಲಿ ವೇದ ಪಾಠ, ಈಗ ಇಸ್ರೋದಲ್ಲಿ ವಿಜ್ಞಾನಿ, ಗೋವಿಂದ್ ಕೃಷ್ಣನ್ ಸಾಧನೆಯ ಕಥೆ

ಗೋವಿಂದ್ ಕೃಷ್ಣನ್ ಅವರ ಸಾಧನೆಯ ಕಥೆ ಗುರುಕುಲ ಶಿಕ್ಷಣದಿಂದ ಇಸ್ರೋ ವಿಜ್ಞಾನಿ ಹುದ್ದೆಯವರೆಗೆ ಸಾಗುತ್ತದೆ. ವೈದಿಕ ಅಧ್ಯಯನದ ಶಿಸ್ತು ಮತ್ತು ಏಕಾಗ್ರತೆ, ಜೆಇಇ ಪರೀಕ್ಷೆಯಲ್ಲಿ ಯಶಸ್ಸು ಹಾಗೂ ಐಐಎಸ್‌ಟಿ ಪದವಿ ಅವರನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿಸಿತು. ಇದು ಸಂಪ್ರದಾಯ ಮತ್ತು ಆಧುನಿಕ ವಿಜ್ಞಾನದ ಅದ್ಭುತ ಸಂಗಮವನ್ನು ತೋರಿಸುತ್ತದೆ, ಪರಿಶ್ರಮವಿದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಎಂದು ಸಾಬೀತುಪಡಿಸುತ್ತದೆ.

ಗುರುಕುಲದಲ್ಲಿ ವೇದ ಪಾಠ, ಈಗ ಇಸ್ರೋದಲ್ಲಿ ವಿಜ್ಞಾನಿ, ಗೋವಿಂದ್ ಕೃಷ್ಣನ್ ಸಾಧನೆಯ ಕಥೆ
ಗೋವಿಂದ್
ನಯನಾ ರಾಜೀವ್
|

Updated on: Nov 19, 2026 | 10:37 AM

Share

ಕಣ್ಣೂರು, ನವೆಂಬರ್ 19: ಸಾಮಾನ್ಯವಾಗಿ ಗುರುಕುಲ ಶಿಕ್ಷಣ ಎಂದರೆ ವೇದ, ಮಂತ್ರ ಮತ್ತು ಧಾರ್ಮಿಕ ಅಧ್ಯಯನಕ್ಕೆ ಸೀಮಿತ ಎಂಬ ಭಾವನೆ ಇದೆ. ಆದರೆ ಕೇರಳದ ಗೋವಿಂದ್ ಕೃಷ್ಣನ್ ಎಂ ಅವರ ಸಾಧನೆ ಈ ಕಲ್ಪನೆಯನ್ನು ಬದಲಿಸುವಂತಿದೆ. ಬಾಲ್ಯದಲ್ಲಿ ಗುರುಕುಲದಲ್ಲಿ ವೈದಿಕ ಶಿಕ್ಷಣ ಪಡೆದ ಅವರು, ನಂತರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಗೋವಿಂದ್ ಕೃಷ್ಣನ್ ಅವರ ಈ ಸಾಧನೆಯ ಹಿಂದೆ ಶಿಸ್ತು, ಪರಿಶ್ರಮ ಮತ್ತು ಕಲಿಯುವ ಆಸಕ್ತಿ ಇದೆ. ಗುರುಕುಲದ ಶಿಕ್ಷಣದಿಂದ ಆರಂಭವಾದ ಅವರ ಪಯಣ ಈಗ ದೇಶದ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಲ್ಲಿ ಒಂದಾದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದವರೆಗೆ ತಲುಪಿದೆ.

ನೌಕಾಪಡೆಯ ಅಧಿಕಾರಿ ತಂದೆಯ ನಿರ್ಧಾರ

ಗೋವಿಂದ್ ಅವರ ತಂದೆ ಹರೀಶ್ ಕುಮಾರ್ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದರು. 2009ರಲ್ಲಿ ಸ್ವಯಂ ನಿವೃತ್ತಿ ಪಡೆದು ಊರಿಗೆ ಮರಳಿದ ಅವರು, ಮಗನಿಗೆ ಸಾಂಪ್ರದಾಯಿಕ ಗುರುಕುಲ ಶಿಕ್ಷಣ ಕೊಡಿಸಲು ನಿರ್ಧರಿಸಿದರು. ನಾಲ್ಕನೇ ತರಗತಿಯ ನಂತರ ಗೋವಿಂದ್ ಉಪನಯನ ನಡೆದಿತ್ತು, ಬಳಿಕ ತ್ರಿಶೂರ್‌ನ ಬ್ರಹ್ಮಸ್ವಂ ಮಾಧವ ಗುರುಕುಲಕ್ಕೆ ಸೇರಿದರು. ಅಲ್ಲಿ ಅವರ ಶಿಕ್ಷಣದ ದಿನಚರಿ ಸಾಮಾನ್ಯ ಶಾಲೆಗಳಿಗಿಂತ ಭಿನ್ನವಾಗಿತ್ತು. ಪ್ರತಿದಿನ ಬೆಳಗ್ಗೆ 5 ಗಂಟೆಗೆ ದಿನ ಆರಂಭವಾಗುತ್ತಿತ್ತು. ವೇದ ಮಂತ್ರಗಳ ಪಠಣ, ಯಜ್ಞ ಮತ್ತು ಮೌಖಿಕ ಅಧ್ಯಯನ ಅವರ ಕಲಿಕೆಯ ಭಾಗವಾಗಿದ್ದವು.

ಅಲ್ಲಿ ಪುಸ್ತಕಗಳು ಮತ್ತು ಟಿಪ್ಪಣಿಗಳಿಗಿಂತ ಗುರುಗಳು ಹೇಳುವುದನ್ನು ಆಲಿಸಿ ನೆನಪಿಟ್ಟುಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಕೇವಲ ಐದು ವಿದ್ಯಾರ್ಥಿಗಳಿದ್ದ ಆ ಗುರುಕುಲದಲ್ಲಿ ಗೋವಿಂದ್ ಯಜುರ್ವೇದವನ್ನು ಅಧ್ಯಯನ ಮಾಡಿದರು.

ಗುರುಕುಲದಿಂದ ಸಾಮಾನ್ಯ ಶಾಲೆಗೆ

ಎಂಟನೇ ತರಗತಿಯ ನಂತರ ಗೋವಿಂದ್ ಮತ್ತೆ ಸಾಮಾನ್ಯ ಶಾಲೆಗೆ ಮರಳಿದರು. ನಡಕ್ಕಾವುವಿನ ವಿವೇಕೋದಯ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದಿದ ಅವರು, ಹತ್ತನೇ ತರಗತಿಯಲ್ಲಿ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಇದನ್ನೂ ಓದಿ: ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಅದ್ಭುತ ಸಾಧನೆ: ರಾಷ್ಟ್ರಕ್ಕೆ ಕೀರ್ತಿ

ನಂತರ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಯುವ ಜೆಇಇ ಪರೀಕ್ಷೆಗೆ ಸಿದ್ಧತೆ ಆರಂಭಿಸಿದರು. ಗುರುಕುಲದಲ್ಲಿ ಕಲಿತ ಶಿಸ್ತು ಮತ್ತು ಏಕಾಗ್ರತೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿತು.

2021ರಲ್ಲಿ ಜೆಇಇ ಅಡ್ವಾನ್ಸ್ಡ್‌ನಲ್ಲಿ ಯಶಸ್ಸು

2021ರಲ್ಲಿ ಗೋವಿಂದ್ ಜೆಇಇ ಮೇನ್ಸ್ ಮತ್ತು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಬಳಿಕ ತಿರುವನಂತಪುರಂನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಎಸ್​ಟಿ)ಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್‌ಗೆ ಪ್ರವೇಶ ಪಡೆದರು.

ಐಐಎಸ್‌ಟಿಯಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ, ಇಸ್ರೋದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಇಸ್ರೋ ಕೇಂದ್ರಿತ ನೇಮಕಾತಿ ಮಂಡಳಿಯ (ಐಸಿಆರ್​ಬಿ) ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿ ಹುದ್ದೆಗೆ ಆಯ್ಕೆಯಾದರು.

ಇಸ್ರೋದಲ್ಲಿ ಹೊಸ ಜವಾಬ್ದಾರಿ

ಗೋವಿಂದ್ ಅವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಲಿದ್ದಾರೆ. ಈ ಕೇಂದ್ರವು ಇಸ್ರೋದ ಪ್ರಮುಖ ಉಡಾವಣಾ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಗೋವಿಂದ್, ಗುರುಕುಲದ ಶಿಕ್ಷಣ ತಮಗೆ ಶಿಸ್ತು ಮತ್ತು ಮಾನಸಿಕ ದೃಢತೆಯನ್ನು ನೀಡಿದರೆ, ಆಧುನಿಕ ವಿಜ್ಞಾನ ತಮ್ಮ ಗುರಿಯನ್ನು ತಲುಪಲು ದಾರಿ ತೋರಿಸಿತು ಎಂದು ಹೇಳಿದ್ದಾರೆ. ಈ ಎರಡರ ಸಂಯೋಜನೆಯೇ ತಮ್ಮ ಯಶಸ್ಸಿಗೆ ಪ್ರಮುಖ ಕಾರಣ ಎಂಬುದು ಅವರ ಅಭಿಪ್ರಾಯ.

ಗುರುಕುಲದ ಶಿಕ್ಷಣ ನಾಲ್ಕು ವರ್ಷ: ಗೋವಿಂದ್ ಅವರಿಗೆ ಐದು ವರ್ಷಗಳ ವೈದಿಕ ಶಿಕ್ಷಣದ ಕೋರ್ಸ್ ಇದ್ದರೂ, ಅದನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಿದ್ದರು. ಅವರ ಬ್ಯಾಚ್‌ನಲ್ಲಿ ಒಟ್ಟು ಐದು ವಿದ್ಯಾರ್ಥಿಗಳಿದ್ದರು. ಎಲ್ಲರೂ ಯಜುರ್ವೇದವನ್ನು ಕಲಿತಿದ್ದರು.

ಸಂಪ್ರದಾಯ ಮತ್ತು ವಿಜ್ಞಾನಕ್ಕೆ ಸೇತುವೆಯಾದ ಸಾಧನೆ

ಗೋವಿಂದ್ ಅವರ ಕಥೆ ಕೇವಲ ಒಬ್ಬ ವಿದ್ಯಾರ್ಥಿಯ ಯಶಸ್ಸಿನ ಕಥೆಯಲ್ಲ. ಸಾಂಪ್ರದಾಯಿಕ ಶಿಕ್ಷಣ ಪಡೆದವರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆ. ಗುರುಕುಲದ ಶಿಕ್ಷಣ ಮತ್ತು ಆಧುನಿಕ ಶಿಕ್ಷಣ ಪರಸ್ಪರ ವಿರುದ್ಧವಾದವುಗಳಲ್ಲ; ಸರಿಯಾದ ಅವಕಾಶ, ಪರಿಶ್ರಮ ಮತ್ತು ಗುರಿ ಇದ್ದರೆ ಎರಡರ ಜ್ಞಾನವೂ ವ್ಯಕ್ತಿಯ ಬೆಳವಣಿಗೆಗೆ ನೆರವಾಗಬಹುದು ಎಂಬ ಸಂದೇಶವನ್ನು ಅವರ ಪಯಣ ನೀಡುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More