
ನವದೆಹಲಿ, ಅಕ್ಟೋಬರ್ 09: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದ ಹಿನ್ನೆಲೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕ ಅಂಗೋಮ್ಚಾ ಬಿಮೋಲ್ ಅಕೊಯಿಜಮ್ರನ್ನು ವಜಾಗೊಳಿಸಲಾಗಿದೆ. ಪ್ರಾಧ್ಯಾಪಕನ ವಿರುದ್ಧ ಸುಮಾರು 10 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಲೈಂಗಿಕ ಅರ್ಥ ಬರುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಲೈಂಗಿಕ ಅನುಕೂಲಗಳಿಗೆ ಪ್ರತಿಯಾಗಿ ಹೆಚ್ಚಿನ ಅಂಕಗಳನ್ನು ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, ತರಗತಿಗಳಲ್ಲಿಯೂ ಅನುಚಿತವಾಗಿ ವರ್ತಿಸಿದ್ದಾರೆ. ಜೆಎನ್‌ಯು ಆವರಣದಲ್ಲಿರುವ ಅವರ ನಿವಾಸದಲ್ಲಿ ನಡೆದ ಸಂವಹನಗಳ ಸಂದರ್ಭದಲ್ಲೂ ಅನುಚಿತ ವರ್ತನೆ ತೋರಿದ್ದಾರೆ ಎಂದು ಕೆಲವು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಆ ಬೆನ್ನಲ್ಲೆ ಅಂಗೋಮ್ಚಾ ಬಿಮೋಲ್ ಅಕೊಯಿಜಮ್ ವಿರುದ್ಧ ಜೆಎನ್‌ಯು ಕಠಿಣ ಕ್ರಮ ಕೈಗೊಂಡಿದೆ.
JNU terminates professor accused of sexual harassment
Prof. Angomcha Bimol Akoijam was accused of sexual harassment by 11 female students at Jawaharlal Nehru University (JNU). https://t.co/DyQ9q8VCUe
— ANI (@ANI) October 9, 2026
ಪ್ರಾಧ್ಯಾಪಕ ಅಂಗೋಮ್ಚಾ ಬಿಮೋಲ್ ಅಕೊಯಿಜಮ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಆಂತರಿಕ ಸಮಿತಿಯು (IC) ವಿಚಾರಣೆ ನಡೆಸಿದೆ. ವಿಚಾರಣೆಯ ವರದಿಯಲ್ಲಿನ ಅಂಶಗಳ ಆಧಾರದ ಮೇಲೆ, ಪ್ರಾಧ್ಯಾಪಕರಿಗೆ ಕಠಿಣ ಶಿಸ್ತುಕ್ರಮದ ಶಿಕ್ಷೆ ವಿಧಿಸುವಂತೆ ಆಂತರಿಕ ಸಮಿತಿ ಶಿಫಾರಸು ಮಾಡಿದೆ. ಹೀಗಾಗಿ ಅಂಗೋಮ್ಚಾ ಬಿಮೋಲ್ ಅಕೊಯಿಜಮ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಶ್ವವಿದ್ಯಾಲಯದ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜೆಎನ್‌ಯು ಉಪಕುಲಪತಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ತಮ್ಮ ಮನೆ ಸ್ವಚ್ಛಗೊಳಿಸಲು ಮಹಿಳಾ ಕೈದಿಗಳನ್ನು ಕರೆದೊಯ್ದಿದ್ದ ಜೈಲರ್ ಅರೆಸ್ಟ್: 2 ತಿಂಗಳ ಬಳಿಕ ಕೋಟಾದಲ್ಲಿ ಸೆರೆ
ವರದಿಗಳ ಪ್ರಕಾರ 2026ರ ಮೇ ತಿಂಗಳಲ್ಲಿಯೇ ಪ್ರಾಧ್ಯಾಪಕರ ವಿರುದ್ಧ ದೂರುಗಳು ಸಲ್ಲಿಕೆಯಾಗಿದ್ದು, ನಂತರ ಆಂತರಿಕ ದೂರು ಸಮಿತಿ ವಿಚಾರಣೆ ಆರಂಭಿಸಿತ್ತು. ಆ ಬಳಿಕ ಜೆಎನ್‌ಯುನಲ್ಲಿ ಸುಮಾರು 45 ದಿನಗಳ ಸೆಮಿಸ್ಟರ್ ವಿರಾಮವಿತ್ತು. ಜುಲೈನಲ್ಲಿ ತರಗತಿಗಳು ಪುನರಾರಂಭವಾದ ನಂತರ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿತ್ತು. ಆಂತರಿಕ ದೂರು ಸಮಿತಿಯ ನಿಯಮಗಳು ನಿಗದಿತ ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿವೆ. ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಅನ್ವಯವಾಗುವ ನಿಯಮಗಳ ಪ್ರಕಾರ, ದೂರು ಸ್ವೀಕರಿಸಿದ 90 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು. ವಿಚಾರಣೆ ಮುಗಿದ 10 ದಿನಗಳೊಳಗೆ ವರದಿಯನ್ನು ಸಲ್ಲಿಸಬೇಕು. ಹೀಗಿದ್ದರೂ ಹಲವು ತಿಂಗಳುಗಳು ಕಳೆದಿರುವ ಹಿನ್ನೆಲೆಯಲ್ಲಿ ತನಿಖೆಯ ಪ್ರಗತಿಯ ಕುರಿತು ವಿದ್ಯಾರ್ಥಿ ಸಂಘಟನೆಗಳು ಪ್ರಶ್ನೆಗಳನ್ನು ಎತ್ತಿದ್ದವು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸೆಪ್ಟೆಂಬರ್‌ನಲ್ಲಿ ಜೆಎನ್‌ಯುನಲ್ಲಿ ಪ್ರತಿಭಟನೆ ನಡೆಸಿ, ನಿಷ್ಪಕ್ಷಪಾತ ಹಾಗೂ ಕಾಲಮಿತಿಯೊಳಗಿನ ತನಿಖೆಗೆ ಆಗ್ರಹಿಸಿತ್ತು.
ಡಾ. ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರು ಭಾರತದ ಮಣಿಪುರದ ಒಬ್ಬ ಪ್ರಮುಖ ಶಿಕ್ಷಣ ತಜ್ಞ, ಚಲನಚಿತ್ರ ನಿರ್ಮಾಪಕ ಮತ್ತು ರಾಜಕಾರಣಿಯಾಗಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಇನ್ನರ್ ಮಣಿಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:50 pm, Fri, 9 October 26