ಹರಿದ್ವಾರ ದ್ವೇಷ ಭಾಷಣ ಪ್ರಕರಣ; ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ನಿಂದ ನೋಟಿಸ್ ಜಾರಿ

| Updated By: ಸುಷ್ಮಾ ಚಕ್ರೆ

Updated on: Jan 12, 2022 | 1:20 PM

ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್​ನಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ನಾವೆಲ್ಲ ಹೋರಾಡಬೇಕು ಎಂದು ಭಾಷಣ ಮಾಡಿ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಹರಿದ್ವಾರ ದ್ವೇಷ ಭಾಷಣ ಪ್ರಕರಣ; ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ನಿಂದ ನೋಟಿಸ್ ಜಾರಿ
ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್
Follow us on

ಹರಿದ್ವಾರ: ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಭಾಷಣಗಳ ಕುರಿತು ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ನೇತೃತ್ವದ ನ್ಯಾಯಪೀಠ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್​ನಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ನಾವೆಲ್ಲ ಹೋರಾಡಬೇಕು ಎಂದು ಭಾಷಣ ಮಾಡಿ ಪ್ರಚೋದಿಸಲಾಗಿತ್ತು.

ಸೋಮವಾರ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಧರ್ಮ ಸಂಸದ್​​ನ ದ್ವೇಷ ಭಾಷಣಗಳ ಕುರಿತು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಪ್ರಸ್ತಾಪಿಸಿದ್ದರು. ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಹಾಗೂ ಹಿರಿಯ ವಕೀಲರಾದ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತ ಕುರ್ಬಾನ್ ಅಲಿ ಈ ಕುರಿತು ಅರ್ಜಿ ಸಲ್ಲಿಸಿದ್ದರು. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಸಮಾವೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ, ದ್ವೇಷದ ಭಾಷಣಗಳನ್ನು ಮಾಡಿದ ಜನರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಆ ಅರ್ಜಿ ವಿಚಾರಣೆಯನ್ನು ಇಂದು ನಡೆಸಲಾಗಿದ್ದು, ಇಂತಹ ಕೂಟಗಳ ವಿರುದ್ಧ ಕ್ರಮ ಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಹಿಂದಿನ ತೀರ್ಪುಗಳಲ್ಲಿ ಆದೇಶ ಹೊರಡಿಸಲಾಗಿತ್ತು. ಆದರೆ, ಇನ್ನೂ ನೋಡಲ್ ಅಧಿಕಾರಿಯನ್ನು ನೇಮಿಸಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆಯಾಗುತ್ತಿಲ್ಲ ಎಂದು ಅರ್ಜಿದಾರರು ಕೋರ್ಟ್​ ಎದುರು ಹೇಳಿದ್ದಾರೆ.

ಡಿಸೆಂಬರ್ 17ರಿಂದ 19ರವರೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಮೂರು ದಿನಗಳ “ಧರ್ಮ ಸಂಸದ್” ಅಥವಾ ಧಾರ್ಮಿಕ ಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಮತ್ತು ಕೋಮುವಾದಿ ಭಾಷಣಗಳನ್ನು ಮಾಡಲಾಗಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಹಲವಾರು ಹಿಂದೂ ಧಾರ್ಮಿಕ ಮುಖಂಡರು, ಸಮುದಾಯದ ರಕ್ಷಣೆಗೆ ಮುಸ್ಲಿಮರ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದ್ದರು. ಹಾಗೇ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಕರೆ ನೀಡಿದ್ದರು.

ಇತ್ತೀಚೆಗೆ ದೆಹಲಿ ಮತ್ತು ಹರಿದ್ವಾರದಲ್ಲಿ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ‘ದ್ವೇಷ ಭಾಷಣ’ ಮತ್ತು ‘ಜನಾಂಗೀಯ ನಿರ್ಮೂಲನೆ’ಗೆ ಕರೆ ನೀಡಿರುವುದರ ವಿರುದ್ಧ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್‌ನ 76 ವಕೀಲರು ಈ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ಪತ್ರ ಬರೆದಿದ್ದರು.

ಇಂದು ಸುಪ್ರೀಂ ಕೋರ್ಟ್​ನಲ್ಲಿ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, “ಈ ವಿಷಯದ ಕುರಿತು ತುರ್ತಾಗಿ ವಿಚಾರಣೆ ನಡೆಸಬೇಕು. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಉನಾ, ದಸ್ನಾ, ಅಲಿಗಢದಲ್ಲಿ ಹೆಚ್ಚಿನ ಧರಮ್ ಸಂಸದ್ ಘೋಷಿಸಲಾಗಿದೆ. ಇದು ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಇದು ಹಿಂಸೆಗೆ ಪ್ರಚೋದನೆ ನೀಡುತ್ತದೆ” ಎಂದು ಹೇಳಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರ ತ್ರಿಸದಸ್ಯ ಪೀಠವು ಈ ವಿಷಯವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ (ಪಿಐಎಲ್) ವಿಚಾರಣೆ ನಡೆಸುತ್ತಿದೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷದ ಭಾಷಣಗಳ ಬಗ್ಗೆ ತನಿಖೆ ನಡೆಸಬೇಕು ಎಂಬ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಕಪಿಲ್ ಸಿಬಲ್ ವಾದಮಂಡನೆಯ ವೇಳೆ ಭಾರತದ ಘೋಷ ವಾಕ್ಯವು ಸತ್ಯಮೇವ ಜಯತೆ ಇದ್ದು, ಇದು ಶಾಸ್ತ್ರಮೇವ ಜಯತೆ ಎಂದು ಬದಲಾಗುತ್ತಿದೆ. ಇಂತಹ ಅಪಾಯಕಾರಿ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವೆಡೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸಿಬಲ್ ಹೇಳಿದ್ದರು. 2021ರ ಡಿಸೆಂಬರ್ 17 ಮತ್ತು 19ರ ನಡುವೆ ಹರಿದ್ವಾರದಲ್ಲಿ ಯತಿ ನರಸಿಂಹಾನಂದ್ ಮತ್ತು ಹಲವು ನಾಯಕರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಮುಸ್ಲಿಂ ಸಮುದಾಯ ವಿರುದ್ಧ ದ್ವೇಷದ ಭಾಷಣ ಮಾಡಿ ಮಾರಣಹೋಮಕ್ಕೆ ಪ್ರಚೋದನೆ ನೀಡುವ ಧರ್ಮ ಸಂಸದ್‌ನಂತ ಕಾರ್ಯಕ್ರಮಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ವಿದ್ವಾಂಸರ ಒಕ್ಕೂಟ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: ಹರಿದ್ವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಆರೋಪ; ಮಧ್ಯ ಪ್ರವೇಶಿಸುವಂತೆ ಸಿಜೆಐ ರಮಣಗೆ ಪತ್ರ ಬರೆದ 76 ವಕೀಲರು

Haridwar: ಕೊರೋನಾಗೆ ಡೋಂಟ್ ಕೇರ್; ಹರಿದ್ವಾರದ ಗಂಗಾ ತೀರದಲ್ಲಿ ಸೇರಿದ ಭಕ್ತರ ದಂಡನ್ನು ನೋಡಿದರೆ ಶಾಕ್ ಆಗ್ತೀರ…

Published On - 12:55 pm, Wed, 12 January 22