ಹರ್ಯಾಣದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ (Sonali Phogat) ಗೋವಾದಲ್ಲಿ (Goa) ಹೃದಯಾಘಾತದಲ್ಲಿ (heart attack) ಸಾವಿಗೀಡಾಗಿದ್ದರು. ಆದರೆ ಈ ಸಾವಿನ ಬಗ್ಗೆ ಕುಟುಂಬದವರು ಶಂಕೆ ವ್ಯಕ್ತ ಪಡಿಸಿದ್ದು ಸೋನಾಲಿ ಅವರ ಪಿಎ ಸುಧೀರ್ ಸಾಂಗವಾನ್ನ್ನು (Sudhir sangwan) ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಫೋಗಟ್ ಸಾವಿನ ಬಗ್ಗೆ ಶಂಕೆ ವ್ಯಕ್ತ ಪಡಿಸಿರುವ ಕುಟುಂಬ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದೆ. 42ರ ಹರೆಯದ ಫೋಗಟ್ ಸೋಮವಾರ ರಾತ್ರಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗ ಕರೆದೊಯ್ದಾಗ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಆಕೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ನಮಗೆ ನಂಬಲು ಸಾಧ್ಯವಿಲ್ಲ ಎಂದು ಸೋನಾಲಿ ಅವರ ಸಹೋದರಿ ಹೇಳಿದ್ದಾರೆ. ಆಕೆ ಕೊನೆಬಾರಿ ಫೋನಲ್ಲಿ ಮಾತನಾಡಿದಾಗ ಏನೋ ಒಂದು ಸುಳಿವು ಕೊಟ್ಟಂತಿತ್ತು ಎಂದಿದ್ದಾರೆ.
ನನ್ನ ಸಹೋದರಿಗೆ ಹೃದಯಾಘಾತವಾಗಲು ಸಾಧ್ಯವೇ ಇಲ್ಲ. ಆಕೆ ತುಂಬಾ ಫಿಟ್ ಆಗಿದ್ದರು. ಆಕೆಯ ಸಾವಿನ ಬಗ್ಗೆ ಸಿಬಿಐ ತನಿಖೆ ಮಾಡಬೇಕು. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ನಾವು ಒಪ್ಪುವುದಿಲ್ಲ. ಆಕೆಗೆ ಯಾವುದೇ ವೈದ್ಯಕೀಯ ಸಮಸ್ಯೆಗಳಿರಲಿಲ್ಲ ಎಂದು ಆಕೆಯ ಸಹೋದರಿ ರಮನ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಆಕೆಯ ಸಾವಿಗೆ ಮುನ್ನ ಸಂಜೆ ಆಕೆ ಕರೆ ಮಾಡಿದ್ದಳು. ಆಕೆ ವಾಟ್ಸಾಪ್ ನಲ್ಲಿ ಮಾತನಾಡಲು ಬಯಸಿದ್ದು, ಇಲ್ಲಿ ಏನೋ ಸಮಸ್ಯೆ ನಡೀತಿದೆ ಎಂದಿದ್ದಳು. ಆನಂತರ ಆಕೆ ಕರೆ ಕಟ್ ಮಾಡಿದ್ದ್ದು, ನಂತರ ಪೋನ್ ಕರೆ ಸ್ವೀಕರಿಸಲೇ ಇಲ್ಲ ಎಂದಿದ್ದಾರೆ ಫೋಗಟ್ ಸಹೋದರಿ. ತಮ್ಮ ತಂಡದೊಂದಿಗೆ ಗೋವಾಕ್ಕೆ ಹೋಗಿದ್ದ ಸೋನಾಲಿಗೆ ಅಸ್ವಸ್ಥತೆ ಕಂಡುಬಂದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಕೆ ಸಾವಿಗೀಡಾಗಿರುವ ಪರಿಸ್ಥಿತಿ ಬಗ್ಗೆ ನಮಗೆ ಪ್ರಶ್ನೆ ಇದೆ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೋವಾ ಪೊಲೀಸ್ ಮುಖ್ಯಸ್ಥ ಜಸ್ಪಾಲ್ ಇದರಲ್ಲಿ ಮೋಸದಾಟ ಏನೂ ನಡೆದಿಲ್ಲ ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ತಿಳಿಯುತ್ತದೆ ಎಂದಿದ್ದಾರೆ.
ರಾಜಕೀಯ ಜೀವನ
2019ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸೋನಾಲಿ 43ರ ಹರೆಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಇವರು ಹರ್ಯಾಣದ ಮಾಜಿ ಸಿಎಂ ಭಜನ್ ಲಾಲ್ ಅವರ ಪುತ್ರ ಮೂರು ಬಾರಿ ಶಾಸಕರಾಗಿದ್ದ ಕುಲದೀಪ್ ಬಿಷ್ಣೋಯ್ ವಿರುದ್ಧ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಸೋತಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಇವರು ಜನಪ್ರಿಯರಾಗಿದ್ದರು. ಮುಂಬರುವ ಉಪಚುನಾವಣೆಯಲ್ಲಿ ಆದಂಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಷ್ಣೋಯ್ ಕಳೆದ ವಾರ ಸೋನಾಲಿ ಫೋಗಟ್ ಅವರನ್ನು ಭೇಟಿಯಾಗಿದ್ದರು.
ಬಿಗ್ ಬಾಸ್ ಸ್ಪರ್ಧಿ
ಟಿಕ್ ಟಾಕ್ ಭಾರತದಲ್ಲಿ ಬ್ಯಾನ್ ಆಗುವ ಮುನ್ನ ಅದರಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ ಗಳನ್ನು ಹೊಂದಿದ್ದ ಸೋನಾಲಿ, ಬಿಗ್ ಬಾಸ್ 14ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ ಪಡೆದಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿ ಅಲೈ ಗೋನಿ ಮೇಲೆ ತನಗೆ ಪ್ರೀತಿ ಹುಟ್ಟಿತ್ತು ಎಂದು ಅವರು ಹೇಳಿದ್ದರು. ಗೋನಿ ಅವರು ಜಾಸ್ಮಿನ್ ಭಾಸಿನ್ ಅವರನ್ನು ಪ್ರೀತಿಸುತ್ತಿದ್ದು, ಸೋನಾಲಿ ಬಿಗ್ ಬಾಸ್ ಮನೆಗೆ ಬಂದ ದಿನವೇ ಭಾಸಿನ್, ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು.
ಕೊನೇ ಇನ್ಸ್ಟಾ ಪೋಸ್ಟ್
ಸಾಯುವ ಕೆಲವೇ ಗಂಟೆಗಳ ಮೊದಲು, ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಿಂಕ್ ಪೇಟ ಧರಿಸಿ ಮೊಹಮ್ಮದ್ ರಫಿ ಅವರ ಹಾಡು ‘ರೂಖ್ ಸೆ ಜರಾ ನಿಕಾಬ್ ತೋ ಹಟಾ ದೋ ಮೇರೆ ಹಜೂರ್…’ ಹಿನ್ನೆಲೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದೇ ಉಡುಪಿನಲ್ಲಿ ತನ್ನ ಟ್ವಿಟರ್ ಪ್ರೊಫೈಲ್ ಚಿತ್ರವನ್ನು ಕೂಡ ಅವರು ಬದಲಿಸಿದ್ದರು.
Published On - 1:26 pm, Wed, 24 August 22