ನವದೆಹಲಿ: ಜನವರಿ 26ರಂದು ವಿದೇಶದ ಪ್ರಮುಖ ನಾಯಕರು ದೆಹಲಿಗೆ ಆಗಮಿಸಿ, ಭವ್ಯ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮ ಕಣ್ತುಂಬಿಕೊಂಡು ಹೋಗುವುದು ಈ ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಆದರೆ, ಈ 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾರೊಬ್ಬರೂ ಅತಿಥಿಯಾಗಿ ಬರುತ್ತಿಲ್ಲ.
ಬ್ರಿಟನ್ನಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ, ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರವಾಸ ರದ್ದು ಮಾಡಿದ್ದರು. ಹೀಗಾಗಿ ಮುಖ್ಯ ಅತಿಥಿ ಇಲ್ಲದೆ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಬೋರಿಸ್ ಜಾನ್ಸನ್ ಮಾದರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬರಲು ಅನೇಕ ನಾಯಕರು ಈ ಮೊದಲು ನಿರಾಕರಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ..
1966ರ ಜನವರಿ 11ರಂದು ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತ್ರಿ ಮೃತಪಟ್ಟಿದ್ದರು. ಈ ವೇಳೆ ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಬೆಳವಣಿಗೆ ನಡುವೆ ಗಣರಾಜ್ಯೋತ್ಸವಕ್ಕೆ ಯಾರೊಬ್ಬರೂ ಮುಖ್ಯ ಅತಿಥಿಯಾಗಿ ಆಗಮಿಸಿರಲಿಲ್ಲ.
ಡೊನಾಲ್ಡ್ ಟ್ರಂಪ್: 2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಆಹ್ವಾನ ನೀಡಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಕಾರ್ಯಕ್ರಮಕ್ಕೆ ಬರಲು ಅವರು ನಿರಾಕರಿಸಿದ್ದರು.
ಒಮನ್ ಸುಲ್ತಾನ: ಒಮನ್ ಸುಲ್ತಾನ ಖಬೂಸ್ ಬಿಸ್ ಸಯೀದ್ ಅಲ್ 2013ರಲ್ಲಿ ಗಣ ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ, ಸಂವಹನ ಸಮಸ್ಯೆಯಿಂದಾಗಿ ಅವರು ಆಗಮನ ನಿರಾಕರಿಸಿದ್ದರು.
ಬಿಲ್ ಕ್ಲಿಂಟನ್: 1995ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ಗೆ ಭಾರತ ಸರ್ಕಾರ ಆಹ್ವಾನ ನೀಡಿತ್ತು. ಆದರೆ, ಈ ಆಹ್ವಾನವನ್ನು ಅವರು ತಿರಸ್ಕರಿಸಿದ್ದರು.