ಸರ್ಕಾರಿ ಅಧಿಕಾರಿಗಳಿಗೆ ಶೇ. 30ರಷ್ಟು ಸಂಬಳ ಕಡಿತ; ಹಿಮಾಚಲ ಪ್ರದೇಶದಲ್ಲಿ ಹೊಸ ನಿಯಮ ಜಾರಿ

ಹಿಮಾಚಲ ಪ್ರದೇಶದ ಸರ್ಕಾರದ ಹಿರಿಯ ಅಧಿಕಾರಿಗಳಿಗೆ 6 ತಿಂಗಳವರೆಗೆ ಕೇವಲ ಶೇ. 70ರಷ್ಟು ಸಂಬಳ ನೀಡಲು ಅಲ್ಲಿನ ಕಾಂಗ್ರೆಸ್ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಿರಿಯ ಸರ್ಕಾರಿ ನೌಕರರ ಶೇ. 30ರಷ್ಟು ವೇತನವನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಏಪ್ರಿಲ್ ತಿಂಗಳಿನಿಂದ ಮುಂದಿನ 6 ತಿಂಗಳವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ಉಳಿದ ಶೇ. 30ರಷ್ಟು ವೇತನವನ್ನು 6 ತಿಂಗಳ ಬಳಿಕ ನೀಡಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರಿ ಅಧಿಕಾರಿಗಳಿಗೆ ಶೇ. 30ರಷ್ಟು ಸಂಬಳ ಕಡಿತ; ಹಿಮಾಚಲ ಪ್ರದೇಶದಲ್ಲಿ ಹೊಸ ನಿಯಮ ಜಾರಿ
Sukhvinder Singh Sukhu
Image Credit source: PTI

Updated on: Apr 20, 2026 | 3:26 PM

ನವದೆಹಲಿ, ಏಪ್ರಿಲ್ 20: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದನ್ನು ಸರಿದೂಗಿಸಲು ಸರ್ಕಾರದ ಹಿರಿಯ ಅಧಿಕಾರಿಗಳ ಸಂಬಳದ ಶೇ. 30ರಷ್ಟನ್ನು ಕಡಿತ ಮಾಡಲು ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ. ಏಪ್ರಿಲ್ ತಿಂಗಳಿಂದ 6 ತಿಂಗಳವರೆಗೆ ಕೇವಲ ಶೇ. 70ರಷ್ಟು ಸಂಬಳವನ್ನು ಮಾತ್ರ ಹಿರಿಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಸರ್ಕಾರವು ರಾಜ್ಯದ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ತಡೆಹಿಡಿಯಲಾದ ಸಂಬಳವನ್ನು ಹಿಂತಿರುಗಿಸಲಾಗುತ್ತದೆ. ಆರ್ಥಿಕ ಒತ್ತಡದ ಮಧ್ಯೆ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಸರ್ಕಾರದ ಅಧಿಸೂಚನೆಯ ಪ್ರಕಾರ, ಹಿಮಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಹಿರಿಯ ಅರಣ್ಯ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಶೇ. 30ರಷ್ಟು ವೇತನ ಮುಂದೂಡಿಕೆಯನ್ನು ಎದುರಿಸಬೇಕಾಗುತ್ತದೆ. ಕಾರ್ಯದರ್ಶಿಗಳು, ಇಲಾಖೆಗಳ ಮುಖ್ಯಸ್ಥರು, ಪೊಲೀಸ್ ಮಹಾನಿರ್ದೇಶಕರು ಮತ್ತು ವಿಭಾಗೀಯ ಅರಣ್ಯ ಅಧಿಕಾರಿ ಶ್ರೇಣಿಯವರೆಗಿನ ಅರಣ್ಯ ಅಧಿಕಾರಿಗಳ ಮಟ್ಟದ ಅಧಿಕಾರಿಗಳು ಶೇ. 20ರಷ್ಟು ಸಂಬಳ ಕಡಿತವನ್ನು ಹೊಂದಲಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶ: ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು

ಈ ಸಂಬಳ ಕಡಿತವು ಶಾಶ್ವತವಲ್ಲ, ಬದಲಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ತಡೆಹಿಡಿಯಲಾದ ಸಂಬಳವನ್ನು ನೌಕರರಿಗೆ ಹಿಂತಿರುಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದಲ್ಲದೆ, ಈ ಮೊತ್ತವನ್ನು ಪಿಂಚಣಿ, ರಜೆ ನಗದು ಮತ್ತು ಇತರ ಸೇವಾ ಪ್ರಯೋಜನಗಳಲ್ಲಿ ಸೇರಿಸಲಾಗುವುದು. ಆದ್ದರಿಂದ ಇದು ನೌಕರರ ಪಿಎಫ್ ಇತ್ಯಾದಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: DA Hike: ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್; ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ಈ ನಿರ್ಧಾರದ ವ್ಯಾಪ್ತಿಯು ಉನ್ನತ ಅಧಿಕಾರಿಗಳಿಗೆ ಸೀಮಿತವಾಗಿಲ್ಲ, ವಿವಿಧ ಹಂತಗಳಲ್ಲಿರುವ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸಹ ಅನ್ವಯಿಸುತ್ತದೆ. ಸರ್ಕಾರವು ಈಗಾಗಲೇ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರಿಗೆ ತಾತ್ಕಾಲಿಕ ವೇತನ ಕಡಿತವನ್ನು ಜಾರಿಗೆ ತಂದಿದೆ. ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:22 pm, Mon, 20 April 26

Follow Us