ದೆಹಲಿ: ಅದೇನೋ ಬಿಜೆಪಿ ಪಕ್ಷ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯನ್ನು ಈ ವರ್ಷವೂ ಗೆದ್ದಿದ್ದರೂ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ಪ್ರಸ್ತುತ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಿಮಂತಾ ಬಿಸ್ವಾ ಶರ್ಮಾ ನಡುವೆ ತೀವ್ರ ಪೈಪೋಟಿ ಎದ್ದಿದ್ದು, ದೆಹಲಿ ಅಂಗಳದಲ್ಲಿ ಸಭೆ ನಡೆಯುತ್ತಿದೆ. ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂಬುದು ಇನ್ನೂ ಸಹ ಖಚಿತವಾಗಿಲ್ಲ.
ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿವಾಸದಲ್ಲಿ, ಅಮಿತ್ ಶಾ ನೇತೃತ್ವದಲ್ಲಿ, ಸರ್ಬಾನಂದ ಸೋನೋವಾಲ್ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಿಮಂತಾ ಬಿಸ್ವಾ ಶರ್ಮಾ ಜತೆ ಸಭೆ ಮಾಡಲಾಗಿದೆ. ಅಸ್ಸಾಂನ ಮುಖ್ಯಮಂತ್ರಿ ಗಾದಿಗೇರುವ ಬಗ್ಗೆ ಆಳವಾದ ಚರ್ಚೆಯೂ ನಡೆದಿದೆ. ಅದಕ್ಕೂ ಮೊದಲು ಈ ಇಬ್ಬರು ನಾಯಕರನ್ನು ಜೆ.ಪಿ.ನಡ್ಡಾ, ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಅಸ್ಸಾಂನಲ್ಲಿ ಕಳೆದ ವರ್ಷ ಬಿಜೆಪಿ ಸರ್ಕಾರವಿದ್ದಾಗ ಸರ್ಬಾನಂದ ಸೋನೋವಾಲ್ ಮುಖ್ಯಮಂತ್ರಿಯಾಗಿದ್ದರು. ಹಾಗೇ, ಹಿಮಂತಾ ಬಿಸ್ವಾ ಶರ್ಮಾ ಆರೋಗ್ಯ ಸಚಿವರಾಗಿದ್ದರು. ಅಸ್ಸಾಂನಲ್ಲಿ ಹಿಮಂತಾ ಬಿಸ್ವಾ ಬಿಜೆಪಿಯ ಪಾಲಿಗೆ ಟ್ವಬಲ್ ಶೂಟರ್ ಎಂದೇ ಹೇಳಬಹುದು.
ಅಸ್ಸಾಂನಲ್ಲಿ ಬಿಜೆಪಿ ಗೆದ್ದಿದೆ. ಹಾಗಿದ್ದಾಗ ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಆಂತರಿಕ ಕಲಹ ಏಳುವುದು ಬೇಡ. ಹಾಗೆ ಆದರೆ ಪಕ್ಷಕ್ಕೆ ತೊಂದರೆಯಾಗುತ್ತದೆ. ಮತ್ತೆ ಬಂಡಾಯ ಶುರುವಾಗಬಹುದು ಎಂಬ ಆತಂಕ ಬಿಜೆಪಿ ವರಿಷ್ಠರದ್ದು. ಹಾಗಾಗಿ ಈ ಇಬ್ಬರೂ ನಾಯಕರನ್ನು ಮುಖಾಮುಖಿ ಮಾಡುವ ದೃಷ್ಟಿಯಿಂದ ಕರೆಸಿ ಚರ್ಚೆ ನಡೆಸುತ್ತಿದ್ದಾರೆ. ಆದರೆ ಈ ಇಬ್ಬರು ನಾಯಕರಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಬಿಜೆಪಿ ಮುಖಂಡರಿಗೂ ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಯಾಕೆಂದರೆ ಇವರಿಬ್ಬರೂ ಅಸ್ಸಾಂನಲ್ಲಿ ಪ್ರಭಾವಿ ನಾಯಕರೇ ಹೌದು. ಪಕ್ಷ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿರುವವರು.
2106ರ ಅಸ್ಸಾಂ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ಮುಂಚಿತವಾಗಿಯೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸರ್ಬಾನಂದ್ ಸೋನೊವಾಲ್ ಹೆಸರನ್ನು ಘೋಷಿಸಿತ್ತು. ಆದರೆ ಈ ಬಾರಿ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿರಲಿಲ್ಲ. ಸದ್ಯಕ್ಕಂತೂ ಅಸ್ಸಾಂ ಮುಖ್ಯಮಂತ್ರಿ ಯಾರಾಗ್ತಾರೆ ಎಂಬುದು ಕುತೂಹಲವಾಗಿಯೇ ಉಳಿದಿದೆ.
ಇದನ್ನೂ ಓದಿ: ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಒಂದೇ ದಿನದಲ್ಲಿ ಹರಿದು ಬಂದ ಮೊತ್ತವೆಷ್ಟು ಗೊತ್ತಾ?
Personal finance: ಸ್ಯಾಲರಿ ಓವರ್ಡ್ರಾಫ್ಟ್ ಅಥವಾ ಕ್ರೆಡಿಟ್ ಕಾರ್ಡ್ ಇವೆರಡರಲ್ಲಿ ಯಾವ ಸಾಲ ಉತ್ತಮ?