ಸ್ವಾತಂತ್ರ್ಯದ ಅಮೃತ ಮಹೋತ್ಸವ: ಭಾರತದ ರಾಷ್ಟ್ರಗೀತೆ ಜನಗಣಮನದ ಇತಿಹಾಸ

| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2021 | 2:40 PM

Jana Gana Mana: 1911 ರಲ್ಲಿ ಕಲ್ಕತ್ತಾದಿಂದ 1942 ರಲ್ಲಿ ಜರ್ಮನಿಯವರೆಗೆ, 1950 ರಲ್ಲಿ ದಿಲ್ಲಿಯವರೆಗೆ ಮತ್ತು 2021 ರಲ್ಲಿ ಇಲ್ಲಿಯವರೆಗೆ ರಾಷ್ಟ್ರಗೀತೆಯು ನಮ್ಮ ಅಸ್ಮಿತೆಗೆ ಸಂಬಂಧಿಸಿದ್ದಾಗಿದ್ದು ಭಾರತೀಯರಿಗೆ ಸ್ಪೂರ್ತಿಯ ದನಿಯಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಭಾರತದ ರಾಷ್ಟ್ರಗೀತೆ ಜನಗಣಮನದ ಇತಿಹಾಸ
ರಾಷ್ಟ್ರಗೀತೆ
Follow us on

ರಾಷ್ಟ್ರಗೀತೆ ಜನಗಣಮನ ಭಾರತದ ವೈಭವ ಮತ್ತು ಸಾರ್ವಭೌಮತೆಯ ಸಂಕೇತ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಸಾಹಿತ್ಯವು ರಾಷ್ಟ್ರಗೀತೆಯಲ್ಲಿ ಭಾರತದ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ತುಂಬಿದೆ. ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸದ ಸಂದರ್ಭದಲ್ಲಿ ದೇಶದ ಜನರು ರಾಷ್ಟ್ರಗೀತೆ ಹಾಡಿ www.rashtragaan.in ನಲ್ಲಿ ಅಪ್ ಲೋಡ್ ಮಾಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಗೀತೆ ಜನಗಣಮನ ಬಗ್ಗೆ ತಕರಾರು ಎದ್ದಿತ್ತು. ಇಂಥಾ ವಿವಾದಗಳು ಹೊಸತೇನೂ ಅಲ್ಲ. ಇಂತಿರುವಾಗ ರಾಷ್ಟ್ರಗೀತೆಯ ಇತಿಹಾಸದ ಬಗ್ಗೆ ತಿಳಿಯೋಣ.

ರವೀಂದ್ರ ನಾಥ ಟ್ಯಾಗೋರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೋಲ್ಕತಾ ಅಧಿವೇಶನದ ಎರಡನೇ ದಿನವಾದ ಡಿಸೆಂಬರ್ 27, 1911 ರಂದು ಜನಗಣಮನ ಹಾಡಿದರು. ಅಲ್ಲಿಯವರೆಗೆ ಪ್ರತಿಭಟನೆಗಳಲ್ಲಿ ವಂದೇ ಮಾತರಂ ಗಟ್ಟಿಯಾಗಿ ಕೇಳಿಬರುತ್ತಿತ್ತು. ಕೋಲ್ಕತಾ ಸಮ್ಮೇಳನದಲ್ಲಿ ಹಾಡಿದ ಜನಗಣನ ರಾಷ್ಟ್ರೀಯತೆಯನ್ನು ಪ್ರತಿಧ್ವನಿಸಿದ್ದಲ್ಲದೆ ಸಭಿಕರಲ್ಲಿ ರೋಮಾಂಚನ, ಭಾವುಕ ಮತ್ತು ಆವೇಶವನ್ನುಂಟು ಮಾಡಿತ್ತು. ‘ಭಾಗ್ಯವಿಧಾತ’ ಎಂದು ಹೆಸರಿಟ್ಟಿದ್ದ ಆ ಹಾಡನ್ನು ಬಂಗಾಳಿಯಲ್ಲಿ ಶಂಕರಾಭರಣದ ರಾಗದಲ್ಲಿ ಹಾಡಲಾಗಿತ್ತು.

ರಾಮಸಿಂಗ್ ಠಾಕೂರ್ ಸಂಗೀತ ಸಂಯೋಜಿಸಿದ್ದ ಬಂಗಾಳಿ ಹಾಡನ್ನು ನಂತರ ಹಿಂದಿ ಮತ್ತು ಇಂಗ್ಲಿಷ್‌ಗೆ ಅನುವಾದಿಸಲಾಯಿತು. ರಾಷ್ಟ್ರೀಯ ಆಂದೋಲನದ ಚುಕ್ಕಾಣಿ ಹಿಡಿದಿದ್ದ ಇಂಡಿಯನ್ ನ್ಯಾಷನಲ್ ಜನಗಣಮನವನ್ನು ಮೊದಲು ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಿತು. ದೇಶವನ್ನು ಸರ್ವೋಚ್ಚ ಗಣರಾಜ್ಯವೆಂದು ಘೋಷಿಸುವ ಎರಡು ದಿನಗಳ ಮೊದಲು ಅಂದರೆ 1950 ರ ಜನವರಿ 24 ರಂದು ಸಂಸತ್ತಿನಲ್ಲಿ ಮೊದಲ ಬಾರಿ ಜನಗಣಮನ ಹಾಡಲಾಯಿತು. ಟ್ಯಾಗೋರ್ ಅವರ ಮಾತಿನಲ್ಲಿ ಹೇಳುವುದಾದರೆ, ಈ ಹಾಡು “ಭಾರತದ ಭಾಗ್ಯ ವಿಧಾತ (ಅದೃಷ್ಟದ ದೇವರು) ಭಾರತದ ರಥದ ಹಿಡಿತವನ್ನು ದೃಢವಾಗಿ ಹಿಡಿದು ವಿಜಯವನ್ನು ಆಚರಿಸುತ್ತಾರೆ. ಅದಾದ ಕೆಲವೇ ದಿನಗಳಲ್ಲಿ, ಜನವರಿ 1912 ರಲ್ಲಿ ಈ ಹಾಡನ್ನು ತತ್ವಬೋಧಿನಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಅದರಲ್ಲಿ ಟಾಗೋರ್ ಸಂಪಾದಕರಾಗಿದ್ದರು ಮತ್ತು ಬಂಗಾಳದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿದರು.

ಜನಗಣಮನಕ್ಕೆ 110 ವರ್ಷಗಳ ಐತಿಹ್ಯವಿದೆ. ಹೀಗಿದ್ದಾಗಲೂ ಜನಗಣಮನದ ಬದಲು ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂಬ ಕೂಗು ಆಗಾಗ ಕೇಳಿಬರುತ್ತದೆ. ಸಿನಿಮಾ ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆ ಮೊದಲು ಹಾಡಬೇಕು ಎಂಬ ಆದೇಶವು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

1911 ರಲ್ಲಿ ಕಲ್ಕತ್ತಾದಿಂದ 1942 ರಲ್ಲಿ ಜರ್ಮನಿಯವರೆಗೆ, 1950 ರಲ್ಲಿ ದಿಲ್ಲಿಯವರೆಗೆ ಮತ್ತು 2021 ರಲ್ಲಿ ಇಲ್ಲಿಯವರೆಗೆ ರಾಷ್ಟ್ರಗೀತೆಯು ನಮ್ಮ ಅಸ್ಮಿತೆಗೆ ಸಂಬಂಧಿಸಿದ್ದಾಗಿದ್ದು ಭಾರತೀಯರಿಗೆ ಸ್ಪೂರ್ತಿಯ ದನಿಯಾಗಿದೆ.

ರಾಷ್ಟ್ರಗೀತೆ
ಜನಗಣಮನ-ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ವಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿತರಂಗ
ತವ ಶುಭ ನಾಮೇ ಜಾಗೇ,
ತವ ಶುಭ ಆಶಿಷ ಮಾಗೇ,
ಗಾಹೇ ತವ ಜಯಗಾಥಾ.
ಜನಗಣಮಂಗಳದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ

ನಾವೀಗ ಹಾಡುತ್ತಿರುವ ರಾಷ್ಟ್ರಗೀತೆಯ ಸಾಲುಗಳಿವು. ಇದನ್ನು 52 ಸೆಕೆಂಡುಗಳ ಒಳಗೆ ಹಾಡಬೇಕು.
ಕೆಲವು ಸಂದರ್ಭಗಳಲ್ಲಿ ಹಾಡಲು ಈ ರಾಷ್ಟ್ರಗೀತೆಯ ಸಂಕ್ಷಿಪ್ತ ರೂಪವಿದೆ. ಇದು ಸಂಪೂರ್ಣ ರೂಪದ ಮೊದಲ ಮತ್ತು ಕೊನೆಯ ಸಾಲುಗಳನ್ನು ಒಳಗೊಂಡಿದೆ. ಅದು ಇಲ್ಲಿದೆ:

ಜನ ಗಣ ಮನ ಅಧಿನಾಯಕ ಜಯ ಹೇ
ಭಾರತಭಾಗ್ಯ-ವಿಧಾತ
ಜಯ ಹೇ, ಜಯ ಹೇ, ಜಯ ಹೇ,
ಜಯ ಜಯ ಜಯ ಜಯ ಹೇ
ಈ ಚಿಕ್ಕ ಆವೃತ್ತಿಯನ್ನು 20 ಸೆಕೆಂಡುಗಳಲ್ಲಿ ಹಾಡಬೇಕು.

*****
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಒಂದೇ ಭಾರತ ಎಂಬ ವಿಚಾರದೊಂದಿಗೆ ಸ್ವಾತಂತ್ರ್ಯೋತ್ಸವದ 75 ವರ್ಷವನ್ನು ಟಿವಿ9 ಆಚರಿಸುತ್ತಿದೆ. ಅದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ
ನಮ್ಮ ರಾಷ್ಟ್ರಗೀತೆ ಹಾಡಿ, ರೆಕಾರ್ಡ್ ಮಾಡಿ ಮತ್ತು www.rashtragaan.in ಗೆ ಅಪ್ಲೋಡ್ ಮಾಡಿ.  ಈ ಸಂಭ್ರಮದಲ್ಲಿ ನೀವೂ ಭಾಗಿಯಾಗಿ.

ಇದನ್ನೂ ಓದಿ: National Anthem: ರಾಷ್ಟ್ರಗೀತೆ ಹೇಗೆ ಹಾಡಬೇಕು? ಹಾಡುವಾಗ ಪಾಲಿಸಬೇಕಾದ ನಿಯಮಗಳೇನು?

Published On - 6:00 pm, Wed, 11 August 21