ದೆಹಲಿ: ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಿದ್ಧರಾಗಿರುವ ಸುವೇಂದು ಅಧಿಕಾರಿ ಅವರಿಗೆ Z ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಗೃಹ ಇಲಾಖೆ ನಿರ್ಧಾರ ಮಾಡಿದೆ.
ಸುವೇಂದು ಅಧಿಕಾರಿಯವರಿಗೆ ನೀಡಬೇಕಾದ ಭದ್ರತಾ ವ್ಯವಸ್ಥೆ ಬಗ್ಗೆ ಕೇಂದ್ರ ಭದ್ರತಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಅವರಿಗೆ ಪಶ್ಚಿಮ ಬಂಗಾಳದಲ್ಲಿ Z ಶ್ರೇಣಿಯ ಭದ್ರತೆ ನೀಡಲು ನಿರ್ಧರಿಸಲಾಗಿದೆ. ಇದರ ಅನ್ವಯ ಸುವೇಂದು ಅಧಿಕಾರಿಯವರಿಗೆ ಸಿಆರ್ಪಿಎಫ್ ಭದ್ರತೆ ಮತ್ತು ಗುಂಡು ನಿರೋಧಕ ವಾಹನ ನೀಡಲಾಗುವುದು. ಹಾಗೇ, ಸುವೇಂದು ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿ ಅವರಿಗೆ Y+ ಶ್ರೇಣಿಯ ಭದ್ರತೆ ನೀಡಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಕಳೆದ ನವೆಂಬರ್ನಲ್ಲಿಯೇ ಸಚಿವ ಸ್ಥಾನ ತೊರೆದಿದ್ದ ಸುವೇಂದು ಅಧಿಕಾರಿ, ಎರಡು ದಿನಗಳ ಹಿಂದೆ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಿನ್ನೆ ತಮ್ಮ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಟಿಎಂಸಿಯಲ್ಲಿ ಇದ್ದು ಜನಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜೀನಾಮೆ ತಿರಸ್ಕಾರ
ಆದರೆ ಇತ್ತ ಇನ್ನೊಂದು ಟ್ವಿಸ್ಟ್ ಸಿಕ್ಕಿದ್ದು, ಸುವೇಂದು ರಾಜೀನಾಮೆಯನ್ನು ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ತಿರಸ್ಕರಿಸಿದ್ದಾರೆ. ಬಿಜೆಪಿ ಸೇರಲು ತುದಿಗಾಲಿನಲ್ಲಿ ನಿಂತಿರುವ ಸುವೇಂದು ಇನ್ನು ಮುಂದೆ ಏನು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಮತ್ತೆ ಆಘಾತ; ಇನ್ನಿಬ್ಬರು ಪ್ರಭಾವಿ ನಾಯಕರ ರಾಜೀನಾಮೆ
Published On - 3:31 pm, Fri, 18 December 20