ಭಾರತೀಯ ಪ್ರಜೆಗಳು ಅಮೆರಿಕದಲ್ಲಿ ಎಷ್ಟು ಸಮಯ ಉಳಿಯಬಹುದು?ವೀಸಾ ಮುಕ್ತಾಯದ ಬಗ್ಗೆ ಸ್ಪಷ್ಟನೆ ಇಲ್ಲಿದೆ

ಭಾರತದಿಂದ ಅಮೆರಿಕಕ್ಕೆ ಹೋದವರು ಅಮೆರಿಕದಲ್ಲಿ ಎಷ್ಟು ಕಾಲ ಉಳಿಯಬಹುದು? ವೀಸಾ ಮುಕ್ತಾಯ ದಿನಾಂಕದ ಬಗ್ಗೆ ಅಮೆರಿಕದ ರಾಯಭಾರ ಕಚೇರಿ ನೀಡಿರುವ ಸ್ಪಷ್ಟನೆ ಇಲ್ಲಿದೆ. 79 ವರ್ಷದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಯೋತ್ಪಾದನೆ, ವೀಸಾ ಅವಧಿ ಮೀರಿದ ವಾಸ್ತವ್ಯ ಮತ್ತು ಭ್ರಷ್ಟಾಚಾರ ಸೇರಿದಂತೆ ಇತರ ಕಾರಣಗಳನ್ನು ಉಲ್ಲೇಖಿಸಿ ಅಫ್ಘಾನಿಸ್ತಾನ ಮತ್ತು ಸಿರಿಯಾ ಸೇರಿದಂತೆ 19 ದೇಶಗಳಿಂದ ಅಮೆರಿಕಕ್ಕೆ ಪ್ರಯಾಣವನ್ನು ನಿಷೇಧಿಸಿದ್ದರು.

ಭಾರತೀಯ ಪ್ರಜೆಗಳು ಅಮೆರಿಕದಲ್ಲಿ ಎಷ್ಟು ಸಮಯ ಉಳಿಯಬಹುದು?ವೀಸಾ ಮುಕ್ತಾಯದ ಬಗ್ಗೆ ಸ್ಪಷ್ಟನೆ ಇಲ್ಲಿದೆ
Donald Trump

Updated on: Dec 18, 2025 | 3:59 PM

ನವದೆಹಲಿ, ಡಿಸೆಂಬರ್ 18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವಲಸಿಗರ ಮೇಲಿನ ಕಠಿಣ ಕ್ರಮದ ಮಧ್ಯೆ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯು ವಿದೇಶಿಗರು ಅಮೆರಿಕದಲ್ಲಿ ಎಷ್ಟು ದಿನಗಳು ಉಳಿಯಬಹುದು? ಎಂಬುದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಈ ಬಗ್ಗೆ ಮಾಡಿರುವ ಎಕ್ಸ್​ ಪೋಸ್ಟ್‌ನಲ್ಲಿ ರಾಯಭಾರ ಕಚೇರಿಯು ಅಮೆರಿಕದಲ್ಲಿ ವಿಸಿಟರ್​​ಗಳ ವಾಸ್ತವ್ಯದ ಅವಧಿಯು ಅವರ ವೀಸಾ ಮುಕ್ತಾಯ ದಿನಾಂಕದ ಪ್ರಕಾರವಾಗಿರುವುದಿಲ್ಲ ಎಂದು ಹೇಳಿದೆ.

“ಅಂತಾರಾಷ್ಟ್ರೀಯ ವಿಸಿಟರ್​​ಗಳಿಗೆ ಅಮೆರಿಕದಲ್ಲಿ ಉಳಿಯಲು ಅನುಮತಿಸಲಾದ ಸಮಯವನ್ನು ಅವರ ಆಗಮನದ ನಂತರ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಅಧಿಕಾರಿ ನಿರ್ಧರಿಸುತ್ತಾರೆ. ವೀಸಾ ಮುಕ್ತಾಯದ ದಿನಾಂಕಕ್ಕೂ ಅವರು ಅಮೆರಿಕದಲ್ಲಿ ಉಳಿಯಲು ಇರುವ ಗಡುವಿಗೂ ಸಂಬಂಧವಿಲ್ಲ. ವೀಸಾ ಮುಕ್ತಾಯದ ದಿನಾಂಕಕ್ಕೂ ಮೊದಲೇ ಅವರು ಅಮೆರಿಕ ಬಿಟ್ಟು ಹೊರಡಬೇಕಾಗಬಹುದು. ನೀವು ಎಷ್ಟು ಕಾಲ ಉಳಿಯಬಹುದು ಎಂಬುದನ್ನು ನೋಡಲು, https://i94.cbp.dhs.gov ನಲ್ಲಿ ನಿಮ್ಮ I-94 ‘Admit Until Date’ ಅನ್ನು ಪರಿಶೀಲಿಸಿ” ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್​ಗೆ ತಕ್ಕ ಉತ್ತರ; ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ

ಅಮೆರಿಕದ ಹೆಚ್ಚಿನ ವಿಸಿಟರ್​​ಗಳಿಗೆ ಕಡ್ಡಾಯವಾಗಿರುವ I-94 ಫಾರ್ಮ್ ‘admit Until date’ ಮಾಹಿತಿಯನ್ನು ಹೊಂದಿರುತ್ತದೆ. ಒಬ್ಬ ವ್ಯಕ್ತಿಯು ಅಮೆರಿಕದ ನೆಲದಲ್ಲಿ ಉಳಿಯಬಹುದಾದ ಕೊನೆಯ ದಿನಾಂಕವನ್ನು ಇದು ತೋರಿಸುತ್ತದೆ. ಪ್ರಯಾಣಿಕರು ಗಮನಿಸಬೇಕಾದ ಅಂಶವೆಂದರೆ ಆ ದಿನಾಂಕವು ಅವರ ವೀಸಾ ಮುಕ್ತಾಯ ದಿನಾಂಕದೊಂದಿಗೆ ಹೊಂದಿಕೆಯಾಗುವುದಿಲ್ಲ. ಅದನ್ನು ಅವರು ಅಮೆರಿಕದ ಗಡಿಯನ್ನು ತಲುಪಿದ ನಂತರ ಕಸ್ಟಮ್ಸ್ ಅಧಿಕಾರಿ ನಿರ್ಧರಿಸುತ್ತಾರೆ.

ಇದನ್ನೂ ಓದಿ: ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು

ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ಬಂದರು ಮೂಲಕ ಅಮೆರಿಕಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕಸ್ಟಮ್ಸ್ ಮತ್ತು ಗಡಿ ಪೊಲೀಸ್ ಅಧಿಕಾರಿ ಎಲೆಕ್ಟ್ರಾನಿಕ್ I-94 ಫಾರ್ಮ್ ಅನ್ನು ಒದಗಿಸುತ್ತಾರೆ. ಈ ವ್ಯಕ್ತಿಗಳು ಇನ್ನು ಮುಂದೆ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗಿಲ್ಲ. ಆದರೆ, ಭೂಮಿ ಅಥವಾ ಹಡಗಿನ ಮೂಲಕ ಅಮೆರಿಕವನ್ನು ಪ್ರವೇಶಿಸುವವರು ತಾತ್ಕಾಲಿಕ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗುತ್ತದೆ. ಹೀಗಾಗಿ ಅದಾದ ನಂತರ ಪ್ರವೇಶದ ಹಂತದಲ್ಲಿ ಅವರು ಅಮೆರಿಕದಲ್ಲಿ ವಾಸವಾಗುವ ಗಡುವಿನ ಸಮಯವನ್ನು ನಿರ್ಧರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ