
ಗಾಜಿಯಾಬಾದ್, ಅಕ್ಟೋಬರ್ 08: ಭಾರತೀಯ ವಾಯುಪಡೆ ಈಗ ಅಸಾಧಾರಣ, ಸಮರ್ಥ, ನೆಟ್‌ವರ್ಕ್ ಕೇಂದ್ರಿತ ಮತ್ತು ಬಹು-ಡೊಮೇನ್ ಪಡೆಯಾಗಿ ಬೆಳೆದಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಹೇಳಿದ್ದಾರೆ. ಗಾಜಿಯಾಬಾದ್‌ನ ಹಿಂದನ್ ವಾಯುನೆಲೆಯಲ್ಲಿ ನಡೆದ 94ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಗೆ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ಐಎಎಫ್ ಸಿದ್ಧವಾಗಿದೆ ಎಂದು ಹೇಳಿದರು.
ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ವಾಯುಶಕ್ತಿಯೇ ಪ್ರಾಥಮಿಕ ಅಸ್ತ್ರವಾಗಿದೆ ಎಂಬುದನ್ನು ಪ್ರಸ್ತುತ ಜಾಗತಿಕ ಸಂಘರ್ಷಗಳು ಸಾಬೀತುಪಡಿಸಿವೆ ಎಂದರು. ಇದೇ ವೇಳೆ ಕರ್ತವ್ಯದ ಹಾದಿಯಲ್ಲಿ ಪ್ರಾಣಾರ್ಪಣೆ ಮಾಡಿದ ವಾಯು ಯೋಧರಿಗೆ ಅವರು ಗೌರವ ನಮನ ಸಲ್ಲಿಸಿದರು.
ಕಳೆದ 94 ವರ್ಷಗಳಲ್ಲಿ ಭಾರತೀಯ ವಾಯುಪಡೆ ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಂಡಿದೆ ಎಂದು ಎಪಿ ಸಿಂಗ್ ಹೇಳಿದರು. ಜಗತ್ತಿನ ವಿವಿಧ ಸಂಘರ್ಷಗಳು ದೇಶದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಾಯುಶಕ್ತಿಯ ಮಹತ್ವವನ್ನು ಮತ್ತೊಮ್ಮೆ ತೋರಿಸಿವೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಐಎಎಫ್ ತನ್ನ ಕಾರ್ಯಾಚರಣೆಯ ವೇಗ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಅವರು ಉಲ್ಲೇಖಿಸಿದರು. ಐಎಎಫ್ನ ನೆಟ್‌ವರ್ಕ್ ಆಧಾರಿತ ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಗಳು ಆಧುನಿಕ ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ನಮ್ಮ ಸಾಮರ್ಥ್ಯಗಳು ಸರಿಯಾದ ದಿಕ್ಕಿನಲ್ಲಿ ವೃದ್ಧಿಸುತ್ತಿವೆ. ಐಎಎಫ್ ದೇಶದ ನಿರೀಕ್ಷೆಗಳನ್ನು ತಲುಪುವುದು ಮಾತ್ರವಲ್ಲ, ಅವುಗಳನ್ನು ಮೀರಿ ಮುನ್ನಡೆಯಲಿದೆ. ದೇಶದ ಮೇಲೆ ಎದುರಾಗುವ ಯಾವುದೇ ಸವಾಲನ್ನು ಹಿಮ್ಮೆಟ್ಟಿಸಲು ಪಡೆ ಸದಾ ಜಾಗರೂಕವಾಗಿದೆ ಎಂದು ಭರವಸೆ ನೀಡಿದರು.
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಅವರು, ಭಾರತೀಯ ವಾಯುಪಡೆಯ ಯುದ್ಧ ಕಾರ್ಯಾಚರಣೆಯ ವೇಗ ಮತ್ತು ನಿಖರತೆಯನ್ನು ಈ ಕಾರ್ಯಾಚರಣೆ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಶ್ಲಾಘಿಸಿದರು.
ಮತ್ತಷ್ಟು ಓದಿ:
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ
ಅಕ್ಟೋಬರ್ 31 ರಂದು ನಿವೃತ್ತರಾಗಲಿರುವ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, “ಈ ಮಹಾನ್ ಪಡೆಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ್ದು ನನ್ನ ಜೀವನದ ಅತಿದೊಡ್ಡ ಸೌಭಾಗ್ಯ ಮತ್ತು ಅತ್ಯಂತ ಹೆಮ್ಮೆಯ ಕ್ಷಣ” ಎಂದು ಸ್ಮರಿಸಿದರು. ವಾಯುಪಡೆ ಮುಖ್ಯಸ್ಥರು 1960ರ ದಶಕದ ವಿಂಟೇಜ್ ಕಾರಿನಲ್ಲಿ ಸಮಾರಂಭದ ಸ್ಥಳಕ್ಕೆ ಆಗಮಿಸಿದ್ದು, ಆಕಾಶದಲ್ಲಿ ಮೂರು ಹೆಲಿಕಾಪ್ಟರ್‌ಗಳು ‘ಧ್ವಜ’ ರಚನೆಯಲ್ಲಿ ಹಾರಾಟ ನಡೆಸಿ ಗೌರವ ವಂದನೆ ಸಲ್ಲಿಸಿದವು.
ರಫೇಲ್ (Rafale), ಸುಖೋಯ್ ಸು-30 ಎಂಕೆಐ (Su-30 MKI) ಮತ್ತು ಜಾಗ್ವಾರ್ (Jaguar) ಯುದ್ಧ ವಿಮಾನಗಳು ಟಾರ್ಮ್ಯಾಕ್‌ನಲ್ಲಿ ಗಮನ ಸೆಳೆದವು. ಲಘು ಯುದ್ಧ ಹೆಲಿಕಾಪ್ಟರ್ ‘ಎಲ್‌ಸಿಎಚ್ ಪ್ರಚಂಡ್’ (LCH Prachand), ‘ಎಎಲ್‌ಎಚ್ ಧ್ರುವ್’ (ALH Dhruv) ಹೆಲಿಕಾಪ್ಟರ್‌ಗಳು ಹಾಗೂ ಸುಧಾರಿತ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳು ಸ್ಥಿರ ಪ್ರದರ್ಶನದಲ್ಲಿ ಅನಾವರಣಗೊಂಡವು. ಈ ಕಾರ್ಯಕ್ರಮದಲ್ಲಿ ಮೂರೂ ಸೇನೆಗಳ ಮುಖ್ಯಸ್ಥರು, ಹಿರಿಯ ಸೇನಾಧಿಕಾರಿಗಳು ಮತ್ತು ನಿವೃತ್ತ ಏರ್ ಚೀಫ್ ಮಾರ್ಷಲ್‌ಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ