ಲಕ್ನೋ: ಕಚೇರಿ ಹಾಗೂ ಕೆಲಸದ ಸ್ಥಳಗಳಲ್ಲಿ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ನೀಡಲಾದ ಮೊದಲನೇ ಸೌಲಭ್ಯವೆಂದರೆ ಅದು ಹೆರಿಗೆ ರಜೆ. ಅಂತೆಯೇ, ಹೆರಿಗೆ ಹಾಗೂ ನವಜಾತ ಶಿಶುವಿನ ಲಾಲನೆಪಾಲನೆಗಾಗಿ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಅದರೆ, ಇಲ್ಲೊಬ್ಬರು IAS ಅಧಿಕಾರಿ ತಮಗೆ ನೀಡಲಾಗಿದ್ದ ಹೆರಿಗೆ ರಜೆಯ ಪ್ರಯೋಜನ ಪಡೆಯದೆ ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸೌಮ್ಯಾ ಪಾಂಡೆ ನಾನೊಬ್ಬ IAS ಅಧಿಕಾರಿ. ಹಾಗಾಗಿ, ನನ್ನ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿ ತಾಯಿಗೂ ತನ್ನ ಮಗುವಿನ ಲಾಲನೆಪಾಲನೆ ಮಾಡಲು ಆ ದೇವರು ಶಕ್ತಿ ನೀಡಿರುತ್ತಾನೆ. ಗ್ರಾಮೀಣ ಭಾರತದಲ್ಲಂತೂ ಮಹಿಳೆಯರು ಗರ್ಭವತಿ ಆಗಿರುವಾಗಲೂ ಮನೆಗೆಲಸವನ್ನು ಮಾಡಿಕೊಂಡು ತದನಂತರ ಹೆರಿಗೆ ಬಳಿಕವೂ ಹಸುಗೂಸು ಮತ್ತು ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುತ್ತಾರೆ. ಹಾಗೆಯೇ, ನನಗೂ ನನ್ನ ಕರ್ತವ್ಯ ನಿರ್ವಹಿಸಲು ಆ ದೇವರು ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.
ಜೊತೆಗೆ, ನನ್ನ ಬೆನ್ನಿಗೆ ನಿಂತ ಜಿಲ್ಲಾಡಳಿತಕ್ಕೆ ಹಾಗೂ ನನ್ನ ಸಿಬ್ಬಂದಿಗೆ ನಾನು ಕೃತಜ್ಞಳಾಗಿರುವೆ ಎಂದು ಹೇಳಿದ್ದಾರೆ. ಸೌಮ್ಯಾ ತಮ್ಮ ಆಪರೇಷನ್ ಸಂದರ್ಭದಲ್ಲಿ 22 ದಿನಗಳ ಕಾಲ ಹಾಗೂ ಹೆರಿಗೆ ಬಳಿಕ ಎರಡು ವಾರಗಳ ರಜೆ ಪಡೆದಿದ್ದರು.
Published On - 6:37 pm, Tue, 13 October 20