ಇಂದೋರ್: 2025ರ ಜನವರಿ 1ರಿಂದ ನೀವೇನಾದರೂ ಈ ನಗರದಲ್ಲಿ ಭಿಕ್ಷಾಟನೆ ಮಾಡುವವರಿಗೆ ಹಣ ನೀಡಿದರೆ ನಿಮ್ಮ ವಿರುದ್ಧ ಪೊಲೀಸರು ಕೇಸ್ ದಾಖಲಿಸುತ್ತಾರೆ. ಹಾಗಾದರೆ, ಈ ನಗರ ಯಾವುದು? ಭಿಕ್ಷೆ ನೀಡಿದರೆ ಕೇಸ್ ಹಾಕುವುದು ಏಕೆ? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಈ ರೀತಿಯ ಹೊಸ ನಿಯಮ ಜಾರಿಯಾಗುವ ನಗರ ಇಂದೋರ್. ಜನವರಿ 1, 2025ರಿಂದ ಇಂದೋರ್ ನಗರದಲ್ಲಿ ಭಿಕ್ಷುಕರಿಗೆ ಭಿಕ್ಷೆ ನೀಡುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದು ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಇಂದೋರ್ ಜಿಲ್ಲಾಡಳಿತ ಪ್ರಕಟಿಸಿದೆ.
ಈ ಕ್ರಮವು ಇಂದೋರ್ ಸೇರಿದಂತೆ 10 ನಗರಗಳನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿರುವ ಸ್ಮೈಲ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಪ್ರಾಯೋಗಿಕ ಯೋಜನೆಯ ಭಾಗವಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಿಶಾಲ ಉಪಕ್ರಮದ ಭಾಗವಾಗಿ ಇಂದೋರ್ ಅನ್ನು ಭಿಕ್ಷುಕ ಮುಕ್ತಗೊಳಿಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ.
ಇದನ್ನೂ ಓದಿ: ಪರಿಸರ ಸಂರಕ್ಷಣೆ ದಾರಿದೀಪ: ತುಳಸಿ ಗೌಡ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಇಂದೋರ್ನಲ್ಲಿ ಭಿಕ್ಷಾಟನೆಯ ವಿರುದ್ಧ ಜಾಗೃತಿ ಅಭಿಯಾನ ನಡೆಯುತ್ತಿದೆ. 2024ರ ಡಿಸೆಂಬರ್ ಅಂತ್ಯದವರೆಗೆ ಈ ಅಭಿಯಾನ ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಹೇಳಿದ್ದಾರೆ. ಭಿಕ್ಷೆ ನೀಡುವುದನ್ನು ತಡೆಯಲು ಜನರಿಗೆ ಮನವಿ ಮಾಡಲಾಗುತ್ತಿದೆ. ಜನರಿಗೆ ಭಿಕ್ಷೆ ನೀಡುವ ಮೂಲಕ ಪಾಪದಲ್ಲಿ ಪಾಲುದಾರರಾಗಬೇಡಿ ಎಂದು ಅಭಿಯಾನ ನಡೆಸಲಾಗುತ್ತಿದೆ.
ಭಿಕ್ಷಾಟನೆ ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಜನವರಿಯಲ್ಲಿ ಹೊಸ ನಿಯಮ ಜಾರಿ ಆರಂಭವಾಗಲಿದೆ. ಆಡಳಿತವು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳನ್ನು ಭಿಕ್ಷಾಟನೆಗಾಗಿ ಬಳಸಿಕೊಳ್ಳುವ ಸಂಘಟಿತ ಗುಂಪುಗಳನ್ನು ಗುರುತಿಸಿದೆ. ಭಿಕ್ಷಾಟನೆ ಅಭ್ಯಾಸದಲ್ಲಿ ತೊಡಗಿರುವ ಅನೇಕ ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅವರಿಗೆ ವೈದ್ಯಕೀಯ ಆರೈಕೆ, ಸಮಾಲೋಚನೆ ಮತ್ತು ಶಿಕ್ಷಣ, ಸುಸ್ಥಿರ ಜೀವನೋಪಾಯಕ್ಕಾಗಿ ಕೌಶಲ್ಯ ಅಭಿವೃದ್ಧಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ನೀರು, ಹೂಡಿಕೆ, ಅಭಿವೃದ್ಧಿ, ಉದ್ಯೋಗ; ರಾಜಸ್ಥಾನದಲ್ಲಿ 50 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
2011ರ ಜನಗಣತಿಯ ಪ್ರಕಾರ ಭಾರತದ ಭಿಕ್ಷುಕರು ಮತ್ತು ಅಲೆಮಾರಿಗಳ ಜನಸಂಖ್ಯೆ ಸರಿಸುಮಾರು 4.13 ಲಕ್ಷ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಬಹುಪಾಲು ಕಾರ್ಮಿಕರಲ್ಲದವರು ಮತ್ತು ಸುಮಾರು 41,400 ಕನಿಷ್ಠ ಕಾರ್ಮಿಕರು ಎಂದು ವರ್ಗೀಕರಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ