ತಿರುಪತಿ: ಸರ್ಕಲ್ ಇನ್ಸ್ಪೆಕ್ಟರ್ ವೈ. ಶ್ಯಾಮ್ ಸುಂದರ್ ಅವರಿಗೆ ಅದು ಅಭಿಮಾನದ ಕ್ಷಣ. ಡಿವೈಎಸ್ಪಿಯಾಗಿರುವ ಮಗಳು ಯೆಂದುಲುರು ಜೆಸ್ಸಿ ಪ್ರಶಾಂತಿ ಮುಂದೆ ಸೆಲ್ಯೂಟ್ ಹೊಡೆದು ನಿಂತಾಗ ಮಗಳಿಗೆ ಕಸಿವಿಸಿ. ನಾವು ಕರ್ತವ್ಯದಲ್ಲಿರುವಾಗ ಭೇಟಿಯಾಗಿದ್ದು ಇದೇ ಮೊದಲು. ನನಗೆ ಅವರು ಸೆಲ್ಯೂಟ್ ಹೊಡೆಯುವುದು ಸರಿ ಅನಿಸುತ್ತಿರಲಿಲ್ಲ. ಅವರು ನನ್ನ ಅಪ್ಪ. ನನಗೆ ಸೆಲ್ಯೂಟ್ ಮಾಡಬೇಡಿ ಎಂದು ನಾನು ಹೇಳಿದ್ದೆ. ಆದರೆ ಅದು ನಡೆದೇ ಹೋಯ್ತು, ನಾನೂ ಅವರಿಗೆ ಪ್ರತಿಯಾಗಿ ಸೆಲ್ಯೂಟ್ ಮಾಡಿದೆ ಅಂತಾರೆ ಗುಂಟೂರ್ ಡಿವೈಎಸ್ಪಿ ಪ್ರಶಾಂತಿ.
ತಿರುಪತಿಯಲ್ಲಿ ಜನವರಿ 4 ರಿಂದ 7ರವರೆಗೆ ಆಂಧ್ರಪ್ರದೇಶ ರಾಜ್ಯ ಪೊಲೀಸರ ಡ್ಯೂಟಿ ಮೀಟ್ ‘ಇಗ್ನೈಟ್’ ಆಯೋಜಿಸಲಾಗಿದೆ. ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಾಂತಿ ಮತ್ತು ಅಪ್ಪ ಶ್ಯಾಮ್ ಸುಂದರ್ ಪರಸ್ಪರ ಭೇಟಿಯಾಗಿದ್ದಾರೆ. 2018ರ ಬ್ಯಾಚ್ ಐಪಿಎಸ್ ಅಧಿಕಾರಿ ಜೆಸ್ಸಿ ಪ್ರಶಾಂತಿ ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಇದೇ ಮೊದಲ ಬಾರಿ ಕರ್ತವ್ಯದಲ್ಲಿರುವಾಗಲೇ ಅಪ್ಪನನ್ನು ಭೇಟಿಯಾಗಿದ್ದು.
ಈ ಬಗ್ಗೆ ‘ದಿ ನ್ಯೂಸ್ ಮಿನಿಟ್’ ಜತೆ ಮಾತನಾಡಿದ ಅವರು, ‘ನನ್ನ ಅಪ್ಪ ನನಗೆ ಸ್ಫೂರ್ತಿ, ಜನರ ಸೇವೆ ಮಾಡುತ್ತಿರುವ ಅಪ್ಪನನ್ನು ನೋಡಿಯೇ ನಾನು ಬೆಳೆದದ್ದು. ಅವರು ಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಹಾಗಾಗಿಯೇ ನಾನು ಈ ಇಲಾಖೆಯಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡೆ. ಇಲಾಖೆ ಬಗ್ಗೆ ನನಗೆ ಪಾಸಿಟಿವ್ ನಿಲುವು ಇದೆ’ ಎಂದಿದ್ದಾರೆ.
ಮಗಳಿಗೆ ಅಪ್ಪ ಸೆಲ್ಯೂಟ್ ಮಾಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವರನ್ನು ಭಾವುಕರನ್ನಾಗಿಸಿದೆ.
#APPolice1stDutyMeet brings a family together!
Circle Inspector Shyam Sundar salutes his own daughter Jessi Prasanti who is a Deputy Superintendent of Police with pride and respect at #IGNITE which is being conducted at #Tirupati.
A rare & heartwarming sight indeed!#DutyMeet pic.twitter.com/5r7EUfnbzB
— Andhra Pradesh Police (@APPOLICE100) January 3, 2021
2018ರಲ್ಲಿ ತೆಲಂಗಾಣದಲ್ಲಿ ಪೊಲೀಸ್ ಇಲಾಖೆಯ ಮಾಜಿ ಡಿಸಿಪಿ ಎ.ಆರ್.ಉಮಾ ಮಹೇಶ್ವರ ಶರ್ಮಾ ಅವರ ಮಗಳು ಸಿಂಧೂ ಶರ್ಮಾ ತೆಲಂಗಾಣದ ಜಗತಿಯಲ್ ಜಿಲ್ಲೆಯಲ್ಲಿ ಎಸ್ಐ ಆಗಿ ನೇಮಕವಾದಾಗ ಸೆಲ್ಯೂಟ್ ಹೊಡೆದಿದ್ದರು. 2014ರ ಐಪಿಎಸ್ ಬ್ಯಾಚ್ ಅಧಿಕಾರಿಯಾಗಿದ್ದರು ಸಿಂಧೂ ಶರ್ಮಾ. ಹೈದರಾಬಾದ್ ಹೊರವಲಯದಲ್ಲಿ ಟಿಆರ್ಎಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರ ವೇಳೆ ಅಪ್ಪ-ಮಗಳು ಮುಖಾಮುಖಿಯಾಗಿದ್ದರು. ಮಗಳಿಗೆ ಅಪ್ಪ ಸೆಲ್ಯೂಟ್ ಹೊಡೆದಿದ್ದ ಆ ಫೋಟೊ ಕೂಡಾ ವೈರಲ್ ಆಗಿತ್ತು.
ಈ ಪೊಲೀಸ್ ಕಾನ್ಸ್‌ಟೇಬಲ್ ವಿವಾಹ ಆಮಂತ್ರಣ ಪತ್ರಿಕೆ ಎಲ್ಲರಿಗೂ ಮಾದರಿ! ಹೇಗೆ ಗೊತ್ತಾ?