AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ನೇಮಕಾತಿ: 43 ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ, ಲಕ್ಷಕ್ಕೂ ಅಧಿಕ ಸಂಬಳ!

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) 43 ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಕರ್ಷಕ ಲಕ್ಷಕ್ಕೂ ಅಧಿಕ ಮಾಸಿಕ ವೇತನದ ಈ ಹುದ್ದೆಗಳಿಗೆ ಸೆಪ್ಟೆಂಬರ್ 20 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ. ಆಸಕ್ತರು ignou.ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ನೇಮಕಾತಿ: 43 ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ, ಲಕ್ಷಕ್ಕೂ ಅಧಿಕ ಸಂಬಳ!
43 ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನImage Credit source: Getty Images
ಅಕ್ಷತಾ ವರ್ಕಾಡಿ
|

Updated on: Oct 01, 2026 | 12:22 PM

Share

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ದೊರೆತಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (IGNOU) ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ignou.ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ ಹಾಗೂ ವರ್ಗೀಕರಣ:

ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 43 ಶೈಕ್ಷಣಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ 21 ಪ್ರಾಧ್ಯಾಪಕ (Professor), 16 ಅಸೋಸಿಯೇಟ್ ಪ್ರೊಫೆಸರ್ (Associate Professor) ಮತ್ತು 6 ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗಳು ಸೇರಿವೆ. ವರ್ಗವಾರು ಹಂಚಿಕೆಯನ್ನು ನೋಡುವುದಾದರೆ, ಸಾಮಾನ್ಯ ವರ್ಗಕ್ಕೆ 12, ಒಬಿಸಿ (OBC) ಅಭ್ಯರ್ಥಿಗಳಿಗೆ 15, ಎಸ್‌ಸಿ (SC) ಅಭ್ಯರ್ಥಿಗಳಿಗೆ 8, ಎಸ್‌ಟಿ (ST) ಅಭ್ಯರ್ಥಿಗಳಿಗೆ 5 ಹಾಗೂ ವಿಕಲಚೇತನ (PwBD) ಅಭ್ಯರ್ಥಿಗಳಿಗೆ 3 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ವಿಧಾನ, ಶಾರ್ಟ್‌ಲಿಸ್ಟಿಂಗ್ ಹಾಗೂ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಕರ್ಷಕ ವೇತನ ಶ್ರೇಣಿ:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಅತ್ಯುತ್ತಮ ವೇತನ ದೊರೆಯಲಿದೆ. ಪ್ರಾಧ್ಯಾಪಕ ಹುದ್ದೆಗೆ ಶೈಕ್ಷಣಿಕ ಮಟ್ಟ 14 ರ ಪ್ರಕಾರ ಪ್ರತಿ ತಿಂಗಳು ರೂ. 1,44,200 ರಿಂದ ರೂ. 2,18,200 ವೇತನ ಸಿಗಲಿದೆ. ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಶೈಕ್ಷಣಿಕ ಮಟ್ಟ 13A ಪ್ರಕಾರ ರೂ. 1,31,400 ರಿಂದ ರೂ. 2,17,100 ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಶೈಕ್ಷಣಿಕ ಮಟ್ಟ 10 ರ ಪ್ರಕಾರ ಪ್ರತಿ ತಿಂಗಳು ರೂ. 57,700 ರಿಂದ ರೂ. 1,82,400 ವರೆಗೆ ವೇತನ ನಿಗದಿಯಾಗಿದೆ.

ನೆನಪಿರಬೇಕಾದ ಪ್ರಮುಖ ದಿನಾಂಕಗಳು:

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 20 ರಿಂದ ಈಗಾಗಲೇ ಪ್ರಾರಂಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟ್‌ಔಟ್ ಮತ್ತು ಅಗತ್ಯ ದಾಖಲೆಗಳ ಹಾರ್ಡ್ ಕಾಪಿಯನ್ನು ತಲುಪಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದೆ.

ಇದನ್ನೂ ಓದಿ: ಎಸ್‌ಬಿಐ ನೇಮಕಾತಿ: ವಾರ್ಷಿಕ 97 ಲಕ್ಷ ರೂ.ವರೆಗೆ ವೇತನ; 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಮೊದಲು ಇಗ್ನೋ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ನಂತರ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ನಿಖರವಾಗಿ ನಮೂದಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ನಿಗದಿತ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಿ ಫಾರ್ಮ್ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ, ಭರ್ತಿ ಮಾಡಿದ ಫಾರ್ಮ್‌ನ ಪ್ರಿಂಟ್‌ಔಟ್ ತೆಗೆದುಕೊಂಡು, ಅದಕ್ಕೆ ತಮ್ಮ ಸ್ವಯಂ ದೃಢೀಕರಿಸಿದ (Self-attested) ಶೈಕ್ಷಣಿಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ “ಶೈಕ್ಷಣಿಕ ಸಮನ್ವಯ ವಿಭಾಗ, ಇಗ್ನೋ, ಮೈದಾನ್ ಗರ್ಹಿ, ನವದೆಹಲಿ-110068” ಈ ವಿಳಾಸಕ್ಕೆ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕೊನೆಯ ದಿನಾಂಕದೊಳಗಾಗಿ ತಲುಪಿಸುವುದು ಕಡ್ಡಾಯವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More