Earthquake: ಭಾರೀ ಭೂಕಂಪದ ಅಪಾಯದಲ್ಲಿ ಭಾರತ, ಹಿಮಾಲಯ ಪ್ರದೇಶಕ್ಕೆ ಹೆಚ್ಚು ಭೀತಿ; ಐಐಟಿ ವಿಜ್ಞಾನಿ ಆತಂಕ

|

Updated on: Feb 11, 2023 | 11:55 AM

ದೇಶದಲ್ಲಿ ಭಾರೀ ಭೂಕಂಪಗಳು ಮುಂದಿನ ಒಂದು ಅಥವಾ ಎರಡು ದಶಕಗಳಲ್ಲಿ ಸಂಭವಿಸಬಹುದು ಅಥವಾ ಒಂದೆರಡು ವರ್ಷಗಳಲ್ಲೇ ಘಟಿಸಿದರೂ ಘಟಿಸಬಹುದು. ಭೂಕಂಪದ ಕೇಂದ್ರ ಬಿಂದುಗಳು ಹಿಮಾಲಯ ಶ್ರೇಣಿ ಅಥವಾ ಅಂಡಮಾನ್ ನಿಕೋಬಾರ್ ದ್ವೀಪಗಳಾಗುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಿ ಜಾವೇದ್ ಮಲಿಕ್ ತಿಳಿಸಿದ್ದಾರೆ.

Earthquake: ಭಾರೀ ಭೂಕಂಪದ ಅಪಾಯದಲ್ಲಿ ಭಾರತ, ಹಿಮಾಲಯ ಪ್ರದೇಶಕ್ಕೆ ಹೆಚ್ಚು ಭೀತಿ; ಐಐಟಿ ವಿಜ್ಞಾನಿ ಆತಂಕ
ಟರ್ಕಿ ಭೂಕಂಪದಿಂದ ಧರೆಗುರುಳಿದ ಕಟ್ಟಡಗಳು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿದು ನೂರಾರು ಮನೆಗಳ ಗೋಡೆಗಳಲ್ಲಿ ಬಿರುಕುಬಿಟ್ಟಿದ್ದ ಕಹಿ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಮತ್ತೊಂದು ಆತಂಕಕಾರಿ ವಿಚಾರವನ್ನು ಐಐಟಿ ಕಾನ್ಪುರದ (IIT Kanpur) ಭೂವಿಜ್ಞಾನಿ ಜಾವೇದ್ ಮಲಿಕ್ (Javed Malik) ಬಹಿರಂಗಪಡಿಸಿದ್ದಾರೆ. ಭಾರೀ ಭೂಕಂಪ(Earthquake) ಅಪಾಯದಲ್ಲಿ ಭಾರತವಿದೆ. ಟರ್ಕಿ, ಸಿರಿಯಾದಂತೆಯೇ ಭಾರತದಲ್ಲಿಯೂ ಭೂಕಂಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಮಲಿಕ್ ತಿಳಿಸಿದ್ದಾರೆ. ದೇಶದಲ್ಲಿ ಸಂಭವಿಸಿದ ಭೂಕಂಪಗಳ, ಭೂಮಿಯಲ್ಲಿನ ಬದಲಾವಣೆಗಳು ಮತ್ತು ಪರಿಣಾಮಗಳ ಬಗ್ಗೆ ದೀರ್ಘಾವಧಿಯಿಂದ ಮಲಿಕ್ ಅವರು ಸಂಶೋಧನೆ ನಡೆಸುತ್ತಿದ್ದಾರೆ. ದೇಶದ ಕೆಲವು ಪ್ರದೇಶಗಳಲ್ಲಿ 7.5ಕ್ಕಿಂತಲೂ ಹೆಚ್ಚಿನ ತೀವ್ರತೆಯ ಭೂಕಂಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ದೇಶದಲ್ಲಿ ಭಾರೀ ಭೂಕಂಪಗಳು ಮುಂದಿನ ಒಂದು ಅಥವಾ ಎರಡು ದಶಕಗಳಲ್ಲಿ ಸಂಭವಿಸಬಹುದು ಅಥವಾ ಒಂದೆರಡು ವರ್ಷಗಳಲ್ಲೇ ಘಟಿಸಿದರೂ ಘಟಿಸಬಹುದು. ಭೂಕಂಪದ ಕೇಂದ್ರ ಬಿಂದುಗಳು ಹಿಮಾಲಯ ಶ್ರೇಣಿ ಅಥವಾ ಅಂಡಮಾನ್ ನಿಕೋಬಾರ್ ದ್ವೀಪಗಳಾಗುವ ಸಾಧ್ಯತೆ ಇದೆ. ಹೀಗಾಗಿ ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಪ್ರತಿ ಹಂತದಲ್ಲಿಯೂ ನಿಗಾವಹಿಸಬೇಕಾದ ಅಗತ್ಯವಿದೆ ಎಂದು ಮಲಿಕ್ ಹೇಳಿದ್ದಾರೆ.

ಮಲಿಕ್ ಅವರು ಭೂಕಂಪ ಪೀಡಿತ ಕಛ್, ಅಂಡಮಾನ್, ಉತ್ತರಾಖಂಡಗಳಲ್ಲಿ ದೀರ್ಘಾವಧಿಯಿಂದಲೂ ಅಧ್ಯಯನ ನಡೆಸುತ್ತಿದ್ದಾರೆ. ಭೂಕಂಪದ ದೃಷ್ಟಿಯಿಂದ ದೇಶದಲ್ಲಿ ಐದು ವಲಯಗಳು ರಚನೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪಾಯಕಾರಿ ವಲಯಗಳು ಯಾವುದೆಲ್ಲ?

‘ವಲಯ 5’ ಅನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾಗಿದೆ. ಇದರಲ್ಲಿ ಕಛ್, ಅಂಡಮಾನ್-ನಿಕೋಬಾರ್, ಹಿಮಾಲಯ ಪ್ರದೇಶ ಒಳಗೊಂಡಿದೆ. ‘ವಲಯ 4’ರಲ್ಲಿ ಬಹ್ರೈಚ್, ಲಖಿಂಪುರ, ಫಿಲಿಬಿತ್, ಗಾಜಿಯಾಬಾದ್, ರೂಕೀ, ನೈನಿತಾಲ್ ಹಾಗೂ ಕಾನ್ಪುರ, ಲಖ್ನೋ, ಪ್ರಯಾಗ್​ರಾಜ್, ವಾರಾಣಸಿ, ಸೋನ್​ಭದ್ರಾಗಳು ‘ವಲಯ 3’ರಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭೂಕಂಪ ಯಾಕೆ ಸಂಭವಿಸುತ್ತದೆ?

ಭೂಮಿಯ ತಳಭಾಗದಲ್ಲಿ ‘ಟೆಕ್ಟಾನಿಕ್ ಪ್ಲೇಟ್​​’ಗಳು ಪರಸ್ಪರ ಡಿಕ್ಕಿಯಾಗುವುದರಿಂದ ಭೂಕಂಪಗಳು ಸಂಭವಿಸುತ್ತವೆ. ‘ಟೆಕ್ಟಾನಿಕ್ ಪ್ಲೇಟ್​​’ಗಳ ಡಿಕ್ಕಿಯಿಂದ ಉಂಟಾಗುವ ಒತ್ತಡವು ಬಲವಾಗಿದ್ದರೆ ಪ್ರಬಲ ಭೂಕಂಪ ಸಂಭವಿಸುತ್ತದೆ ಎಂದು ಮಲಿಕ್ ವಿವರಣೆ ನೀಡಿದ್ದಾರೆ. ಟರ್ಕಿಯಲ್ಲಿ ಸಂಭವಿಸಿದ ಭೂಕಂಪ 7.8 ತೀವ್ರತೆಯದ್ದಾಗಿದೆ. 2004ರಲ್ಲಿ ಭಾರತದಲ್ಲಿ ಸಂಭವಿಸಿದ್ದ ಭೂಕಂಪದ ತೀವ್ರತೆ 9.1 ಇತ್ತು ಎಂದು ಅಂದಾಜಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:54 am, Sat, 11 February 23