Narendra Modi: ಇಂದಿನಿಂದ ಎರಡು ದಿನ ತ್ರಿಪುರಾದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ (ಫೆ.11) ಎರಡು ದಿನಗಳ ಕಾಲ ತ್ರಿಪುರಾಗೆ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.

Narendra Modi: ಇಂದಿನಿಂದ ಎರಡು ದಿನ ತ್ರಿಪುರಾದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ
Follow us
Ganapathi Sharma
|

Updated on:Feb 11, 2023 | 10:38 AM

ಅಗರ್ತಲ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದಿನಿಂದ (ಫೆ.11) ಎರಡು ದಿನಗಳ ಕಾಲ ತ್ರಿಪುರಾಗೆ (Tripura) ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಭೇಟಿಗಳ ವೇಳೆ ಮೋದಿ ಅವರು ಎರಡು ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಗೋಮತಿ ಜಿಲ್ಲೆಯ ಉದಯಪುರ ಉಪ ವಿಭಾಗದ ಆರ್​.ಕೆ. ಪುರದಲ್ಲಿ ಮೊದಲ ಸಮಾವೇಶ ನಡೆಯಲಿದೆ. ಅದರಲ್ಲಿ ಭಾಗವಹಿಸಿದ ಬಳಿಕ ಅವರು ಧಲಾಯಿ ಜಿಲ್ಲೆಯ ಅಂಬಸ್ಸಾದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರ ಜಿಲ್ಲೆಯ ಬಗ್​ಬಸ್ಸಾದಲ್ಲಿ 13ರಂದು ಸಮಾವೇಶ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

ಈ ಮಧ್ಯೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ತ್ರಿಪುರಾದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬಿಜೆಪಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು, ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಇನ್ನಷ್ಟು ಕೊಡುಗೆಗಳನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

5 ರೂ.ಗೆ ಎಲ್ಲರಿಗೂ ಊಟ; ರೈತರಿಗೆ ಹಣಕಾಸು ನೆರವಿನ ಭರವಸೆ

ತ್ರಿಪುರಾ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆಯನ್ನು ಬಿಜೆಪಿ ಈಗಾಗಲೇ ಬಿಡುಗಡೆ ಮಾಡಿದ್ದು, ಬುಡಕಟ್ಟು ಜನರ ಕಲ್ಯಾಣ, ರೈತರಿಗೆ ಹೆಚ್ಚಿನ ಹಣಕಾಸು ನೆರವು ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದೆ. ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಬಿಡುಗಡೆ ಮಾಡಿದ್ದರು. ಪ್ರತಿ ಹೆಣ್ಣು ಮಗುವಿಗೆ 50,000 ರೂಪಾಯಿಗಳ ಬಾಲಿಕಾ ಸಮೃದ್ಧಿ ಬಾಂಡ್ ನೀಡಲಾಗುವುದು. ಬುಡಕಟ್ಟು ಭಾಷೆಯಾದ ಕೊಕ್​ಬೊರೊಕ್ ಅನ್ನು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ ವಿಷಯವನ್ನಾಗಿ ಸೇರ್ಪಡೆಗೊಳಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಅಧಿಕಾರಕ್ಕೆ ಬಂದರೆ ‘ಅನುಕೂಲ್ ಚಂದ್ರ’ ಯೋಜನೆಯಡಿಯಲ್ಲಿ ಎಲ್ಲರಿಗೂ 5 ರೂಪಾಯಿಗೆ ಊಟ ನೀಡಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Tripura Elections 2023: 2018ರಲ್ಲಿ ಸೋತ 5 ಕ್ಷೇತ್ರಗಳೂ ಸೇರಿ ತ್ರಿಪುರದ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸ್ಪರ್ಧೆ

ಈ ಮಧ್ಯೆ, ಹಿಂದಿನ ಚುನಾವಣೆಯಲ್ಲಿ ಸೋತ 5 ಕ್ಷೇತ್ರಗಳೂ ಸೇರಿ ತ್ರಿಪುರಾದ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ. 2018ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ಈಶಾನ್ಯ ರಾಜ್ಯದಿಂದ ಪಕ್ಷವು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ.

ಫೆಬ್ರವರಿ 16 ರಂದು ತ್ರಿಪುರಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾರ್ಚ್ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:37 am, Sat, 11 February 23