ಸುಪ್ರೀಂಕೋರ್ಟ್
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ (Supreme Court of India) ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ (Justice Hemant Gupta ) ಮತ್ತು ಸುಧಾಂಶು ಧುಲಿಯಾ (Sudhanshu Dhulia) ವಿಭಿನ್ನ ನಿಲುವಿನ ವಿಭಜಿತ ತೀರ್ಪು ನೀಡಿದ್ದಾರೆ. ವಿಚಾರ ಒಂದೇ ಆಗಿದ್ದರೂ, ಇಬ್ಬರೂ ನ್ಯಾಯಮೂರ್ತಿಗಳು ವಿಭಿನ್ನ ಮಗ್ಗುಲಿನಿಂದ ಪ್ರಕರಣವನ್ನು ಪರಿಶೀಲಿಸಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಂದಿನ ದಿನಗಳಲ್ಲಿ ವಿಸ್ತೃತ ನ್ಯಾಯಪೀಠ ರಚಿಸುವ ಸಾಧ್ಯತೆಯಿದ್ದು ವಿಚಾರಣೆ ಪ್ರಕ್ರಿಯೆಯನ್ನು ನಿರ್ಧರಿಸಲಿದ್ದಾರೆ. ನಂತರದ ದಿನಗಳಲ್ಲಿ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದ್ದು, ಪ್ರಕರಣದ ಗೊಂದಲಗಳಿಗೆ ತೆರೆ ಬೀಳಲಿದೆ.
ಪ್ರಕರಣದ ಬಗ್ಗೆ ಇಂದು (ಅ 13) ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ನೀಡಿದ ವಿಭಜಿತ ತೀರ್ಪಿನ ಅತಿಮುಖ್ಯ ಅಂಶಗಳಿವು.
- ಹೈಕೋರ್ಟ್ ತೀರ್ಪು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸುವ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಸುಧಾಂಶು ಧುಲಿಯಾ ತಮ್ಮ ತೀರ್ಪಿನಲ್ಲಿ ಈ ಅರ್ಜಿಗಳನ್ನು ಪುರಸ್ಕರಿಸಿ, ಹೈಕೋರ್ಟ್ ತೀರ್ಪು ರದ್ದುಪಡಿಸಿದ್ದಾರೆ.
- ರಾಜ್ಯ ಸರ್ಕಾರದ ಆದೇಶ: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಅರ್ಜಿಗಳನ್ನು ತಮ್ಮ ತೀರ್ಪಿನಲ್ಲಿ ವಜಾ ಮಾಡಿರುವ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಕರ್ನಾಟಕ ಸರ್ಕಾರದ ಸಮವಸ್ತ್ರ ನೀತಿಯನ್ನು ಎತ್ತಿಹಿಡಿದಿದ್ದಾರೆ.
- ಆಯ್ಕೆಯ ಪ್ರಶ್ನೆ: ನ್ಯಾಯಮೂರ್ತಿ ಧುಲಿಯಾ ತಮ್ಮ ತೀರ್ಪಿನಲ್ಲಿ ಹಿಜಾಬ್ ವಿಚಾರದ ಬಗ್ಗೆ ನಿಲುವು ಸ್ಪಷ್ಟಪಡಿಸುವಾಗ, ‘ಇದು ಕೇವಲ ಆಯ್ಕೆಯ ಪ್ರಶ್ನೆಯಷ್ಟೇ. ಅದಕ್ಕಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ’ ಎಂದು ಹೇಳಿದ್ದಾರೆ.
- ವಿಸ್ತೃತ ಪೀಠ: ಕರ್ನಾಟಕ ಹಿಜಾಬ್ ನಿಷೇಧ ಕುರಿತ ತೀರ್ಪಿನ ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತರಲು ನಿರ್ಧರಿಸಲಾಗಿದೆ. ಅವರು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಮಂತ್ ಗುಪ್ತಾ ಹೇಳಿದ್ದಾರೆ.
- ಹಲವು ಪ್ರಶ್ನೆಗಳು: ಈ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಬೇಕೆ? ಇಸ್ಲಾಂ ಧರ್ಮದಡಿಯಲ್ಲಿ ಹಿಜಾಬ್ ಧರಿಸಬಹುದೇ? ಸರ್ಕಾರದ ಆದೇಶ ಶಿಕ್ಷಣದ ಉದ್ದೇಶ ಪೂರೈಸುತ್ತದಯೇ? ಹಿಜಾಬ್ ನಿರ್ಬಂಧಿಸಿದರೆ ಅದು ಸಂವಿಧಾನದ 25ನೇ ವಿಧಿಯ ಉಲ್ಲಂಘನೆಯಾಗುತ್ತದೆಯೇ ಎಂಬ ಪ್ರಶ್ನೆಗಳನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ತಮ್ಮ ತೀರ್ಪಿನಲ್ಲಿ ಪರಿಶೀಲಿಸಿದ್ದಾರೆ.
- ಆದೇಶ ರದ್ದು: ಇದು ಸಂವಿಧಾನದ 19 ಮತ್ತು 25ನೇ ವಿಧಿಗಳಿಗೆ ಸಂಬಂಧಿಸಿದ ಪ್ರಕರಣ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಿಜಾಬ್ ಎನ್ನುವುದು ಕೇವಲ ಆಯ್ಕೆಯ ಪ್ರಶ್ನೆ. ಕರ್ನಾಟಕ ಸರ್ಕಾರದ ಆದೇಶ ನಾನು ರದ್ದುಗೊಳಿಸಿದ್ದೇನೆ ಎಂದು ಹೇಳಿದ್ದಾರೆ.
- ಹೈಕೋರ್ಟ್ ಆದೇಶ ಊರ್ಜಿತ: ಹಿಜಾಬ್ ರದ್ದುಪಡಿಸುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ರದ್ದುಪಡಿಸಿಲ್ಲ, ಎತ್ತಿ ಹಿಡಿದೂ ಇಲ್ಲ. ಹಾಗಾಗಿ ಮುಂದಿನ ತೀರ್ಮಾನದವರೆಗೆ ಹೈಕೋರ್ಟ್ ಆದೇಶ ಊರ್ಜಿತದಲ್ಲಿರುತ್ತದೆ ಎಂದು ಸುಪ್ರೀಂಕೋರ್ಟ್ ವಕೀಲ ಬರುಣ್ ಸಿನ್ಹಾ ವಿವರಿಸಿದ್ದಾರೆ.
- ಉತ್ತಮ ಆದೇಶದ ನಿರೀಕ್ಷೆ: ವಿಶ್ವದಾದ್ಯಂತ ಹಿಜಾಬ್ ವಿರೋಧಿ ಹೋರಾಟಗಳು ನಡೆಯುತ್ತಿವೆ. ನಾವು ಇನ್ನೂ ಉತ್ತಮ ಆದೇಶ ಬರಬಹುದೆಂದು ನಿರೀಕ್ಷಿಸಿದ್ದೆವು. ಮುಂದಿನ ಆದೇಶದವರೆಗೂ ಕಾಯುತ್ತೇವೆ, ಅಲ್ಲಿಯವರೆಗೆ ಕರ್ನಾಟಕ ಹೈಕೋರ್ಟ್ ಆದೇಶ ಮತ್ತು ಸರ್ಕಾರದ ಅಧಿಸೂಚನೆ ಅನ್ವಯವಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
- ಮುಸ್ಲಿಂ ಪುರುಷರೂ ಹಿಜಾಬ್ ಧರಿಸಲಿ: ನ್ಯಾಯಮೂರ್ತಿ ಸುಧಾಂಶು ಧುಲಿಯಾ ಇನ್ನೂ ಪ್ರಗತಿಪರವಾಗಿ ಯೋಚಿಸಬೇಕಿತ್ತು ಎಂದು ಹಿಂದುತ್ವ ಪರ ಹೋರಾಟಗಾರರನ್ನು ಬೆಂಬಲಿಸುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ. ಹಿಜಾಬ್ ಎನ್ನುವುದು ಅಸಮಾನತೆಯ ಸಂಕೇತ. ಧರ್ಮದ ವಿಚಾರ ಎಂದಾದರೆ ಮುಸ್ಲಿಂ ಪುರುಷರೂ ಹಿಜಾಬ್ ಧರಿಸಬಾರದು ಏಕೆ ಎಂದು ಪ್ರಶ್ನಿಸಿದ್ದಾರೆ.
- ಸಂತ್ರಸ್ತರಿಗೆ ಭರವಸೆ: ಅರ್ಜಿದಾರರ ಮೂಲಭೂತ ಹಕ್ಕಿಗಾಗಿ, ಅವರ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕಾಳಜಿ ತೋರಿಸಿದ್ದಾರೆ. ಇದು ಶ್ಲಾಘನೀಯ. ತಲೆವಸ್ತ್ರಕ್ಕಿಂತಲೂ ಸಾವಿರಾರು ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ವಿಚಾರ ದೊಡ್ಡದು. ಮುಖ್ಯ ನ್ಯಾಯಮೂರ್ತಿಗಳು ನೀಡುವ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಹಿಜಾಬ್ ಬೇಕೆಂಬ ವಿದ್ಯಾರ್ಥಿನಿಯರ ಪರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಹುಸೇನ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Hijab Verdict: ಸುಪ್ರೀಂಕೋರ್ಟ್ನಿಂದ ಹಿಜಾಬ್ ಕುರಿತು ವಿಭಜಿತ ತೀರ್ಪು, ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ
ಇದನ್ನೂ ಓದಿ: Hijab Verdict: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಇಲ್ಲ ಅವಕಾಶ