Hijab Verdict: ಸುಪ್ರೀಂಕೋರ್ಟ್ನಿಂದ ಹಿಜಾಬ್ ಕುರಿತು ವಿಭಜಿತ ತೀರ್ಪು, ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ವಿಭಜಿತ ತೀರ್ಪು ನೀಡಿದ್ದಾರೆ.
ದೆಹಲಿ: ಇಡೀ ವಿಶ್ವ ಕಾತರದಿಂದ ಎದುರು ನೋಡುತ್ತಿದ್ದ ಹಿಜಾಬ್ ವಿವಾದ (Hijab Controversy) ಕುರಿತು ಸುಪ್ರೀಂಕೋರ್ಟ್ (Supreme Court of India) ಗುರುವಾರ (ಅ 13) ಐತಿಹಾಸಿಕ ತೀರ್ಪು ನೀಡಿತು. ಹಿಜಾಬ್ನ ಪರ ಹಾಗೂ ವಿರುದ್ಧ ವಾದ ಮಂಡಿಸಿದ್ದ ಬಹುತೇಕ ವಕೀಲರು ಈ ವೇಳೆ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ವಿಭಜಿತ ತೀರ್ಪು ನೀಡಿದ್ದಾರೆ. ಪ್ರಸ್ತುತ ನ್ಯಾಯಮೂರ್ತಿ ಹೇಮಂತ್ ಗುಪ್ತ ತೀರ್ಪು ಓದುತ್ತಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿ ಅರ್ಜಿಯನ್ನು ಅವರು ವಜಾ ಮಾಡಿದ್ದಾರೆ. ಆದರೆ ನ್ಯಾಯಮೂರ್ತಿ ಸುಧಾಂಶು ಅವರು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದ್ದಾರೆ. ಒಬ್ಬ ನ್ಯಾಯಮೂರ್ತಿ ಹಿಜಾಬ್ ಪರವಾಗಿ ತೀರ್ಪು ನೀಡಿದ್ದರೆ, ಮತ್ತೊಬ್ಬರು ಹಿಜಾಬ್ ವಿರುದ್ಧ ತೀರ್ಪು ನೀಡಿದ್ದಾರೆ. ಇಬ್ಬರು ವಿಭಿನ್ನ ತೀರ್ಪು ನೀಡಿರುವುದರಿಂದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ (Chief Justice Bench) ವರ್ಗಾವಣೆ ಮಾಡಲಾಗಿದೆ.
ಪ್ರಕರಣದ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮುಂದಿನ ದಿನಗಳಲ್ಲಿ ವಿಸ್ತೃತ ನ್ಯಾಯಪೀಠ (Larger Bench) ರಚಿಸುವ ಸಾಧ್ಯತೆಯಿದೆ. ಪ್ರಕರಣವನ್ನು ಮತ್ತೊಮ್ಮೆ ಆಮೂಲಾಗ್ರ ಪರಿಶೀಲಿಸಿದ ನಂತರ ವಿಸ್ತೃತ ನ್ಯಾಯಪೀಠವು ತನ್ನ ತೀರ್ಪು ನೀಡಲಿದೆ. ವಿಸ್ತೃತ ನ್ಯಾಯಪೀಠ ರಚಿಸುವುದು ಮತ್ತು ವಿಚಾರಣೆಯ ಸ್ವರೂಪ ನಿರ್ಧರಿಸುವುದು ಮುಖ್ಯ ನ್ಯಾಯಮೂರ್ತಿಯ ವಿವೇಚನೆಗೆ ಬಿಟ್ಟ ಅಧಿಕಾರವಾಗಿರುತ್ತದೆ.
ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಪೀಠವು ಯಾವುದೇ ಮಧ್ಯಂತರ ಆದೇಶ ಪ್ರಕಟಿಸಿಲ್ಲ. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ನಿಲುವಿನ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಹಿಜಾಬ್ ವಿವಾದದ ಬಗ್ಗೆ ಕರ್ನಾಟಕ ಹೈಕೋರ್ಟ್ನ ಆದೇಶವು ಯಥಾಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಸುಪ್ರೀಂಕೋರ್ಟ್ನ ಹಿರಿಯ ವಕೀಲರು ವಿಶ್ಲೇಷಿಸಿದ್ದಾರೆ. ಆದರೆ ಈವರೆಗೆ ಸುಪ್ರೀಂಕೋರ್ಟ್ನ ವಿಭಜಿತ ತೀರ್ಪಿನ ಪ್ರತಿ ಲಭ್ಯವಾಗಿಲ್ಲ. ಹೀಗಾಗಿ ಸ್ಪಷ್ಟವಾಗಿ ಹೀಗೆ ಎಂದು ಹೇಳಲು ಆಗುವುದಿಲ್ಲ. ಒಮ್ಮೆ ತೀರ್ಪಿನ ಪ್ರತಿಯನ್ನು ಪೂರ್ತಿ ಓದಿದ ನಂತರವೇ ನ್ಯಾಯಮೂರ್ತಿಗಳ ನಿಲುವು ಇಂಥದ್ದು ಎಂದು ಸ್ಪಷ್ಟವಾಗುತ್ತದೆ ಎಂದು ವಕೀಲರು ಪ್ರತಿಕ್ರಿಯಿಸಿದ್ದಾರೆ.
ತೀರ್ಪು ಓದುವ ವೇಳೆ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿ ಅರ್ಜಿಗಳನ್ನು ವಜಾ ಮಾಡಿ, ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿಹಿಡಿದರು. ಇದು ಪರೋಕ್ಷವಾಗಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ನಿಲುವನ್ನು ಒಪ್ಪಿಕೊಂಡಂತೆ ಆಗಿದೆ.
ಆದರೆ ಭಿನ್ನ ತೀರ್ಪು ನೀಡಿದ ನ್ಯಾಯಮೂರ್ತಿ ಧುಲಿಯಾ, ಮುಸ್ಲಿಂ ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ಮುಂದುವರಿಯುವುದು ಬಹಳ ಮುಖ್ಯ ಎಂದು ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರು. ವಿಸ್ತೃತ ವಿಚಾರಣೆಗಾಗಿ ಸೂಕ್ತ ಪೀಠಕ್ಕೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಶಿಫಾರಸು ಮಾಡಲು ನ್ಯಾಯಮೂರ್ತಿಗಳು ನಿರ್ಧರಿಸಿದರು.
Karnataka Hijab ban case | Supreme Court Justice Hemant Gupta dismisses appeals challenging Karnataka High Court’s order which had upheld the state government’s order to ban wearing hijabs in educational institutions of the state https://t.co/8nb8pvU6Ed
— ANI (@ANI) October 13, 2022
Published On - 10:40 am, Thu, 13 October 22