Hijab Verdict: ಇಂದು ಸುಪ್ರೀಂಕೋರ್ಟ್ನಿಂದ ಹಿಜಾಬ್ ತೀರ್ಪು ಸಾಧ್ಯತೆ; ಕರ್ನಾಟಕದಲ್ಲಿ ಬಿಗಿ ಬಂದೋಬಸ್ತ್
ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ಪ್ರತಿಭಟನೆಗಳಿಂದ ಶಾಲೆ-ಕಾಲೇಜುಗಳು ಬಂದ್ ಆಗಬಾರದು ಎಂದು ಹೈಕೋರ್ಟ್ ಹೇಳಿತ್ತು.
ಉಡುಪಿ / ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು (ಅ 13) ಮಹತ್ವದ ತೀರ್ಪು ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೋರ್ಟ್ ತೀರ್ಪಿನ ಪರ-ವಿರುದ್ಧ ಹೇಳಿಕೆಗಳನ್ನು ನೀಡುವುದು, ವಿಜಯೋತ್ಸವ ಅಥವಾ ಪ್ರತಿಭಟನೆ ಮಾಡುವುದು ತಪ್ಪು. ಇಂಥ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಕರ್ನಾಟಕದ ಉಡುಪಿಯಿಂದ ಆರಂಭವಾದ ಹಿಜಾಬ್ ವಿವಾದ ನಂತರದ ದಿನಗಳಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಿಕೊಂಡಿತು. ದೇಶದ ವಿವಿಧೆಡೆ ಸದ್ದು ಮಾಡಿದ್ದಲ್ಲದೆ ಒಂದು ಹಂತದಲ್ಲಿ ಬಿಬಿಸಿ, ಅಲ್ಜಝೀರಾದಂಥ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು.
‘ಮಂಡ್ಯ ಪ್ರಕರಣ’ದ ನಂತರ ಭಾರತಕ್ಕೆ ವಿವಿಧ ಮುಸ್ಲಿಂ ದೇಶಗಳ ನಡುವೆ ರಾಜತಾಂತ್ರಿಕ ಸಮಸ್ಯೆಯೊಂದು ಉದ್ಭವಿಸುವ ಅಪಾಯವೂ ಕಂಡುಬಂದಿತ್ತು. ಮಂಡ್ಯದಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದ ಯುವತಿಯ ಎದುರು ನಿಂತ ಕೆಲವರು ‘ಜೈ ಶ್ರೀರಾಮ್’ ಘೋಷಣೆ ಕೂಗಿ ಪ್ರತಿಭಟಿಸಿದ್ದರು. ಇದನ್ನು ಪ್ರತಿಭಟಿಸದೆ ಆ ಯುವತಿ, ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ್ದರು. ಇದು ರಾಷ್ಟ್ರವ್ಯಾಪಿ ದೊಡ್ಡ ಸುದ್ದಿಯಾಗಿತ್ತು. ಆದರೆ ನಂತರದ ದಿನಗಳಲ್ಲಿ ನ್ಯಾಯಾಲಯಗಳ ಸಕಾಲಿಕ ಮಧ್ಯಪ್ರವೇಶ, ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿದ್ದು ಹಾಗೂ ಧಾರ್ಮಿಕ ಸಂಘಟನೆಗಳ (ಹಿಂದೂ-ಮುಸ್ಲಿಂ) ತಾಳ್ಮೆಯ ವರ್ತನೆಯಿಂದ ಪರಿಸ್ಥಿತಿ ತಹಬದಿಗೆ ಬಂತು.
ಉಡುಪಿಯ ಸರ್ಕಾರಿ ಪದವಿ ಪೂರ್ವ ಹೆಣ್ಣುಮಕ್ಕಳ ಕಾಲೇಜಿನ ವಿದ್ಯಾರ್ಥಿನಿಯರಿಂದ ವಿವಾದ ಆರಂಭವಾಯಿತು. ಪಿಎಫ್‌ಐ ಈ ವಿದ್ಯಾರ್ಥಿನಿಯರಿಗೆ ಸಲ್ಲದ ವಿಚಾರಗಳನ್ನು ತುಂಬಿದೆ. ಪಿಎಫ್‌ಐ ಶಿಬಿರದ ನಂತರವೇ ಇವರು ಹೀಗೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಹಿಜಾಬ್ ಧರಿಸಿ ಪರೀಕ್ಷೆಗೆ ಬರೆಯುವಂತಿಲ್ಲ ಎಂದು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದ ನಂತರ ಕೆಲ ವಿದ್ಯಾರ್ಥಿನಿಯರು ಪರೀಕ್ಷೆಯಿಂದ ದೂರ ಉಳಿದದ್ದು ವಿಷಾದದ ಸಂಗತಿ. ಆದರೆ ನಂತರದ ದಿನಗಳಲ್ಲಿ ಹೈಕೋರ್ಟ್ ತೀರ್ಪು ಬಂದ ನಂತರ ಬಹುತೇಕ ವಿದ್ಯಾರ್ಥಿನಿಯರು ತಮ್ಮ ಬಿಗಿ ನಿಲುವು ಸಡಿಲಿಸಿ, ಕಾನೂನು ಹೋರಾಟದಿಂದ ಹಿಂದಕ್ಕೆ ಸರಿದಿದ್ದರು.
ಡಿಸೆಂಬರ್ 27, 2021ರಂದು ಮೊದಲ ಬಾರಿಗೆ ಹಿಜಾಬ್ ಹೋರಾಟ ಆರಂಭವಾಗಿತ್ತು. ಮಾರ್ಚ್ 15 ತೀರ್ಪು ಪ್ರಕಟಿಸಿದ್ದ ಹೈಕೋರ್ಟ್, ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಹಲವು ವಿದ್ಯಾರ್ಥಿನಿಯರು ಶಿಕ್ಷಣದಿಂದ ದೂರವೇ ಉಳಿದಿದ್ದರು.
ಈ ಹಂತದಲ್ಲಿ ಉಡುಪಿಯ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸಂಘಟನೆಯು ಸುಪ್ರೀಂಕೋರ್ಟ್ಗೆ ಹಿಜಾಬ್ ವಿವಾದ ಕೊಂಡೊಯ್ದಿತ್ತು. ಕಳೆದ ಹಲವು ತಿಂಗಳುಗಳಿಂದ ವಿಚಾರಣೆ ನಡೆಸಿ, ವಾದ-ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಸುಪ್ರೀಂಕೋರ್ಟ್ನಲ್ಲಿ ವಾದ-ಪ್ರತಿವಾದ
ರಾಜ್ಯ ಸರಕಾರದ ಪರ ವಾದ ಮಂಡಿಸಿದ್ದ ತುಷಾರ್ ಮೆಹ್ತಾ, ಹಿಜಾಬ್‌ಗಾಗಿ ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿನಿಯರು ಹೋರಾಟ ಮಾಡಿಲ್ಲ. ಪ್ರತಿಭಟನೆಯ ಹಿಂದೆ ಪಿಎಫ್‌ಐ ಇದೆ. ಪ್ರತಿಭಟನೆಯ ಉದ್ದೇಶದಿಂದಲೇ ಹಿಜಾಬ್ ಹೋರಾಟವನ್ನು ರೂಪಿಸಲಾಯಿತು. ಹಿಜಾಬ್ ವಿವಾದದ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಪಿಎಫ್‌ಐ ಕೂಡಾ ಇದರಲ್ಲಿ ಭಾಗಿಯಾಗಿದೆ. ಮಕ್ಕಳು ಹಿಜಾಬ್‌ಗಾಗಿ ಸ್ವಯಂ ಪ್ರೇರಣೆಯಿಂದ ಹೋರಾಟ ಮಾಡಿಲ್ಲ’ ಎಂದು ಹೇಳಿದ್ದರು.
‘ವಿದ್ಯಾರ್ಥಿನಿಯರ ಮನವೊಲಿಸಿ ಪ್ರತಿಭಟನೆ ಆರಂಭಿಸಲು ಚಿತಾವಣೆ ಮಾಡಲಾಯಿತು. 2021ರ ತನಕ ಯಾವ ವಿದ್ಯಾರ್ಥಿನಿಯೂ ಹಿಜಾಬ್ ಧರಿಸುತ್ತಿರಲಿಲ್ಲ. ಇಂಥದ್ದೊಂದು ಪ್ರಶ್ನೆಯೂ ಉದ್ಭವಿಸಿರಲಿಲ್ಲ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಆರಂಭಿಸಿದಾಗ ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಬರಲು ಶುರು ಮಾಡಿದರು. ಈ ವೇಳೆ ಸರ್ಕಾರ ಹಿಜಾಬ್‌ಗೆ ನಿಷೇಧ ಹೇರಿತು. ಸರ್ಕಾರದ ಆದೇಶದ ಬಳಿಕ ಈ ವಿವಾದ ಭುಗಿಲೆದ್ದಿತು’ ಎಂದು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ರಾಜ್ಯ ಸರಕಾರದ ಪರ ವಾದ ಮಂಡಿಸಿದ್ದ ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ, ಮುಸ್ಲಿಂ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವುದನ್ನು ಸರ್ಕಾರವು ಪ್ರಶ್ನಿಸುವುದಿಲ್ಲ’ ಎಂದಿದ್ದರು.
ಹಿಜಾಬ್ ಧಾರಿಗಳಿಗೆ ತಾರತಮ್ಯ
ಹಿಜಾಬ್ ಬ್ಯಾನ್ ಮಾಡಿರುವ ಸರಕಾರದ ಕ್ರಮದ ವಿರುದ್ಧ ವಕೀಲ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದರು. ಶಾಲೆಗೆ ಹಿಜಾಬ್ ಧರಿಸಿ ಹೋದ ವಿದ್ಯಾರ್ಥಿಗಳು ತಾರತಮ್ಯ ಎದುರಿಸಿದ್ದರು. ಹೆಣ್ಣು ಮಕ್ಕಳನ್ನು ಹಾಸ್ಯ ಮಾಡಿ ಗೇಲಿ ಮಾಡಲಾಯಿತು. ತರಗತಿಯ ಹೊರಗೆ ನಿಲ್ಲುವಂತೆ ಮಾಡಿದರು. ಹಿಜಾಬ್‌ಗೆ ಶಾಲೆಯಿಂದ ಒಪ್ಪಿಗೆ ಇದ್ದರೂ ಅನಗತ್ಯ ಕಿರುಕುಳ ನೀಡಲಾಯಿತು. ಹಿಜಾಬ್ ವಿಚಾರವಾಗಿ ಏಕಪಕ್ಷೀಯ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದರು.
ಶಾಲೆಯ ಕಮಿಟಿಯಲ್ಲಿ ಹಿಜಾಬ್‌ಗೆ ವಿರುದ್ಧ ಇರುವ ಸ್ಥಳೀಯ ಶಾಸಕರೇ ಅಧ್ಯಕ್ಷರು. ಇಂತಹ ಶಾಸಕ ಅಧ್ಯಕ್ಷರಿಂದ ಪಾರದರ್ಶಕತೆ ಹೇಗೆ ಸಾಧ್ಯ? ಹಿಜಾಬ್ ವಿರುದ್ಧದ ಅಭಿಯಾನದಲ್ಲಿ ವಿದ್ಯಾರ್ಥಿನಿಯರ ಬಳಿ ಒತ್ತಾಯವಾಗಿ ಸಹಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿದ್ದರು. ಅದಕ್ಕೆ ಬಹಳಷ್ಟು ದಾಖಲೆಗಳು, ಪುರಾವೆ ಇವೆ. ಆದರೆ ಏಕಾಏಕಿ ಹಿಜಾಬ್ ಧರಿಸದಂತೆ ಶಿಕ್ಷಕಿ ಸೂಚನೆ ನೀಡಿ, ತರಗತಿಯಿಂದ ಹೊರಗೆ ಕಳುಹಿಸಲಾಯಿತು. ಪ್ರಾಂಶುಪಾಲರ ಬಳಿ ಚರ್ಚಿಸುವಂತೆ ಹೇಳಲಾಯಿತು. ಆದರೆ ಪ್ರಾಂಶುಪಾಲರು ಚರ್ಚಿಸಲಿಲ್ಲ. ಅಂದು ವಿದ್ಯಾರ್ಥಿನಿಯರಿಗೆ ವಿದ್ಯಾಬ್ಯಾಸಕ್ಕೆ ತೊಂದರೆಯಾಯಿತು’ ಎಂದು ವಿವರಿಸಿದ್ದರು.
‘ಅಲ್ಲಿಂದಾಚೆಗೆ ಹಿಜಾಬ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತು. ಮಾಧ್ಯಮಗಳಲ್ಲೂ ಹಿಜಾಬ್ ವಿಚಾರವಾಗಿ ನಾಟಕೀಯ ಬೆಳವಣಿಗೆಗಳನ್ನು ತೋರಿಸಲಾಯಿತು’ ಎಂದಿದ್ದರು.
ಹಿಜಾಬ್ ಪರ ವಾದ ಮಂಡಿಸಿದ್ದ ದೇವದತ್ ಕಾಮತ್, ಹಿಜಾಬ್ ವಿಚಾರದಲ್ಲಿ ಸರ್ಕಾರವು ತನ್ನ ಕರ್ತವ್ಯ ಮರೆತಿದೆ. ವಿದ್ಯಾರ್ಥಿನಿಯರು ಜೀನ್ಸ್ ಪ್ಯಾಂಟ್ ಹಾಕಿ ಅಥವಾ ಯುನಿಫಾರಂ ಹಾಕದೇ ಬಂದಿರಲಿಲ್ಲ. ಅಥವಾ ಬುರ್ಖಾ ಹಾಕಿ ತರಗತಿಗೆ ಹಾಜರಾಗಿರಲಿಲ್ಲ. ಕೇವಲ ಹೆಡ್ ಸ್ಕಾರ್ಫ್ ಹಾಕಿಕೊಂಡು ಬಂದಿದ್ದರು. ಇದನ್ನೇ ದೊಡ್ಡ ಅಪರಾಧವೆನ್ನುವಂತೆ ಸರಕಾರ ಬಿಂಬಿಸಿತು ಎಂದು ಹೇಳಿದ್ದರು.
‘ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಕಸಿದುಕೊಂಡಿದೆ. ಸಮವಸ್ತ್ರದ ಮಾದರಿಯ ಹೆಡ್ ಸ್ಕಾಫ್ ಹಾಕಿದ್ರೆ ತಪ್ಪೇನು? ಸಾಮಾನ್ಯವಾಗಿ ಮಹಿಳೆಯರು ಸ್ಕಾಫ್ ಹಾಕಿಕೊಳ್ಳುತ್ತಾರೆ. ಕೇಂದ್ರಿಯ ವಿದ್ಯಾಲಯಗಳಲ್ಲಿ ಯುನಿಫಾರ್ಮ್ಗೆ ಮ್ಯಾಚ್ ಆಗುವ ಹೆಡ್ಸ್ಕಾರ್ಫ್ ಧರಿಸಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೇಂದ್ರವೇ ಅವಕಾಶ ನೀಡಿದೆ’ ಎಂದು ಅರ್ಜಿದಾರರ ಪರ ವಕೀಲ ನಿಜಾಮುದ್ದಿನ್ ಪಾಷಾ ವಾದಿಸಿದ್ದರು.
ಹಿಜಾಬ್ ಇಸ್ಲಾಂಂ ಧರ್ಮದ ಅಗತ್ಯ ಆಚರಣೆ ಎಂದು ವಾದಿಸಿದ್ದ ಪಾಷಾ, ಹಿಜಾಬ್ ಮುಸ್ಲಿಂ ಮಹಿಳೆಯರ ಗುರುತನ್ನು ರಕ್ಷಿಸುತ್ತದೆ. ಮುಸ್ಲಿಂ ಮಹಿಳೆಯರನ್ನು ಕಿರುಕುಳ ಇತ್ಯಾದಿ ಘಟನೆಗಳಿಂದ ರಕ್ಷಿಸುತ್ತದೆ. ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿದೆ. ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದ್ದರು.
ರಾಜ್ಯ ಸರ್ಕಾರದ ಶಾಸನಬದ್ಧ ಅಧಿಕಾರಗಳು
ಹಿಜಾಬ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಾಲಾ ಆಡಳಿತ ಮಂಡಳಿಗೆ ಸಮವಸ್ತ್ರ ಕುರಿತು ಸೂಚಿಸುವ ಶಾಸನಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಎಲ್ಲ ವಿಚಾರಗಳನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ತಿಲಕವನ್ನು ಧರಿಸುವುದು ನನ್ನ ಹಕ್ಕು ಎಂದು ನಾನು ಹೇಳುತ್ತೇನೆ. ಆದರೆ ಉಲ್ಲೇಖಕ್ಕಾಗಿ ಸಮರ್ಥನೆಗಳಿಲ್ಲ. ಯಾವ ದೇಶದಲ್ಲಿ ಆ ಧರ್ಮ ಹುಟ್ಟಿದೆ ಅಲ್ಲಿಯೇ ಈ ಅಭ್ಯಾಸಗಳನ್ನು ಅನುಸರಿಸುವುದಿಲ್ಲ. ಹೀಗಾಗಿ ಇವು ತುಂಬಾ ಅವಶ್ಯಕ ಎಂದು ನಾವು ಹೇಳಬಹುದೇ? ಹಿಜಾಬ್ ಧರ್ಮದ ಸ್ಥಾಪನೆಯೊಂದಿಗೆ ಪ್ರಾರಂಭವಾಯಿತು ಎಂದು ಯಾವುದೇ ಸಮರ್ಥನೆಗಳಿಲ್ಲ ಎಂದು ಹೇಳಿದ್ದರು.
ಹಿಜಾಬ್ ಅನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಅನುಸರಿಸದವರಿಗೆ ಬಹಿಷ್ಕಾರ ಹಾಕುವ ಬೆದರಿಕೆ ಹಾಕಲಾಗುತ್ತಿದೆ. ಸಾರ್ವಜನಿಕವಾಗಿ ನಗ್ನ ನೃತ್ಯ ಮಾಡುವುದು ನನ್ನ ಧರ್ಮದ ಭಾಗವಾಗಿದೆ ಎಂದರೆ ಇದು ಸಾರ್ವಜನಿಕ ಸುವ್ಯವಸ್ಥೆ ಮತ್ತು ನೈತಿಕತೆಗೆ ವಿರುದ್ಧವಾಗಿದೆ ಎಂದು ಯಾರಾದರೂ ಹೇಳುತ್ತಾರೆ. ಸ್ಥಳೀಯ ಅಧಿಕಾರಿಗಳು ತಡೆಯುತ್ತಾರೆ. ಆದರೆ ಈ ಅಧಿಕಾರವನ್ನು ಯಾರು ನಿರ್ಧರಿಸುತ್ತಾರೆ? ಹಾಗೆಯೇ ಹಿಜಾಬ್ ಅನ್ನು ಶಾಲಾ ಆಡಳಿತ ಮಂಡಳಿ ನಿರ್ಬಂಧಿಸಿದೆ. ಹಿಜಾಬ್ ಧರಿಸುವುದು ಅಗತ್ಯ ಆಚರಣೆಯಲ್ಲ. ಅದು ಧರ್ಮದ ಆದರ್ಶ ಪಾಲನೆ ಎಂದು ಅರ್ಜಿದಾರರ ಪರ ವಕೀಲರೇ ಹೇಳಿದ್ದಾರೆ ಎಂದು ಉಲ್ಲೇಖಿಸಿದ್ದರು.
ಹೈಕೋರ್ಟ್ ಮಧ್ಯಂತರ ಆದೇಶ
ಹಿಜಾಬ್ ಪ್ರಕರಣ ಕುರಿತು ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್ನ ಪೂರ್ಣ ಪೀಠವು ಹೀಗೆ ಹೇಳಿತ್ತು. ‘ಪ್ರತಿಭಟನೆಗಳಿಂದ ಶಾಲೆ-ಕಾಲೇಜು ಮುಚ್ಚಿದ್ದು ನೋವಿನ ಸಂಗತಿ. ಸಂವಿಧಾನ, ವೈಯಕ್ತಿಕ ಕಾನೂನಿನ ಗಂಭೀರ ವಿಚಾರಣೆ ನಡೆಯುತ್ತಿದೆ. ನಮ್ಮದು ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮಗಳ ದೇಶ. ಸರ್ಕಾರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಆಚರಣೆಯ ಹಕ್ಕಿದೆ. ಆದರೆ ಈ ಹಕ್ಕು ಪರಿಪೂರ್ಣ ಹಕ್ಕಲ್ಲ, ನಿರ್ಬಂಧಗಳಿವೆ’ ಎಂದು ಅಭಿಪ್ರಾಯಪಟ್ಟಿತ್ತು.
ತರಗತಿಯಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕೇ ಎಂಬ ಪ್ರಶ್ನೆ ಕೇಳಿಕೊಂಡಿದ್ದ ಹೈಕೋರ್ಟ್, ಈ ಬಗ್ಗೆ ಆಳವಾದ ವಿಚಾರಣೆ ನಡೆಸುವ ಅಗತ್ಯವಿದೆ. ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ಪ್ರತಿಭಟನೆಗಳಿಂದ ಶಾಲೆ-ಕಾಲೇಜುಗಳು ಬಂದ್ ಆಗಬಾರದು ಎಂದು ಹೇಳಿತ್ತು.
Published On - 10:03 am, Thu, 13 October 22