Droupadi Murmu Assam Visit: ಅಸ್ಸಾಂಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ; ವಿವಿಧ ಯೋಜನೆಗಳಿಗೆ ಚಾಲನೆ
2 ದಿನಗಳ ಅಸ್ಸಾಂ ಭೇಟಿಗಾಗಿ ಇಂದು ಗುವಾಹಟಿಗೆ ಆಗಮಿಸಲಿರುವ ದ್ರೌಪದಿ ಮುರ್ಮು ಅಸ್ಸಾಂನಲ್ಲಿ ಹೊಸದಾಗಿ ನಿರ್ಮಿಸಲಾದ ಧುಬ್ರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
ತ್ರಿಪುರಾ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು (ಅಕ್ಟೋಬರ್ 13) ಅಸ್ಸಾಂನಲ್ಲಿ ಹೊಸದಾಗಿ ನಿರ್ಮಿಸಲಾದ ಧುಬ್ರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಅಲ್ಲಿಂದ ಅಗ್ಯಥೂರಿಗೆ ತೆರಳಿ, ಹೊಸ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. 2 ದಿನಗಳ ಅಸ್ಸಾಂ ಭೇಟಿಗಾಗಿ ಇಂದು ಗುವಾಹಟಿಗೆ ಆಗಮಿಸಲಿರುವ ದ್ರೌಪದಿ ಮುರ್ಮು ಈ ಸಂದರ್ಭದಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿಯ ಸಮಾರಂಭದಲ್ಲಿ ಭಾಗವಹಿಸುತ್ತಾರೆ.
ರಾಷ್ಟ್ರಪತಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ರಾಜ್ಯ ಆರೋಗ್ಯ ಸಚಿವ ಕೇಶಬ್ ಮಹಾಂತ ನಿನ್ನೆ ಧುಬ್ರಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ, ಉದ್ಘಾಟನಾ ಸಮಾರಂಭದ ಸಿದ್ಧತೆಗಳ ಬಗ್ಗೆ ತೆಗೆದುಕೊಳ್ಳಬೇಕಾದ ಅಂಶಗಳನ್ನು ಪರಿಶೀಲಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕೇಶಬ್ ಮಹಾಂತ, ಗುರುವಾರ ಮಧ್ಯಾಹ್ನ 2 ಗಂಟೆಗೆ ಧುಬ್ರಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಸಭೆ ನಡೆಯುತ್ತಿದ್ದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 3 ಗಂಟೆಗೆ ಧುಬ್ರಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಲಿದ್ದಾರೆ. ಧುಬ್ರಿ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯು ನವೆಂಬರ್ 15ರೊಳಗೆ ಪೂರ್ಣಗೊಳ್ಳುತ್ತದೆ ಮತ್ತು ತರಗತಿಗಳು ಪ್ರಾರಂಭವಾಗುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: President Droupadi Murmu: ಇಂದಿನಿಂದ ದ್ರೌಪದಿ ಮುರ್ಮು ತ್ರಿಪುರಾ ಪ್ರವಾಸ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಅಸ್ಸಾಂ ಸರ್ಕಾರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವುಗಳು ಸೂಪರ್‌ಕಂಪ್ಯೂಟರ್ ಸೌಲಭ್ಯ ಪರಮ್ ಕಾಮ್ರೂಪ ಮತ್ತು ಐಐಟಿ ಗುವಾಹಟಿಯಲ್ಲಿ ಉನ್ನತ ಶಕ್ತಿಯ ಮೈಕ್ರೋವೇವ್ ಘಟಕಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಸೌಲಭ್ಯವನ್ನು ಒಳಗೊಂಡಿವೆ. ಹಾಗೇ, ಇಂದು ಸಂಜೆ ಅವರು ಗುವಾಹಟಿಯಲ್ಲಿ ಅವರ ಗೌರವಾರ್ಥವಾಗಿ ಆಯೋಜಿಸಲಾಗುವ ನಾಗರಿಕ ಸ್ವಾಗತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅಸ್ಸಾಂ ಸರ್ಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ರೈಲ್ವೇಗಳ ಕೇಂದ್ರ ಸಚಿವಾಲಯಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಹಾಗೇ, ಮಿಷನ್ ಸೌಭಾಗ್ಯ, ಸಿಲ್ಚಾರ್‌ನ ಮೊಯಿನಾರ್‌ಬಾಂಡ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ರೈಲ್-ಫೆಡ್ ಪೆಟ್ರೋಲಿಯಂ ಶೇಖರಣಾ ಡಿಪೋ ಉದ್ಘಾಟನೆ, ಎರಡು ಹೆದ್ದಾರಿ ಯೋಜನೆಗಳು, ಅಸ್ಸಾಂನ ಚಹಾ ತೋಟದ ಪ್ರದೇಶಗಳಲ್ಲಿ 100 ಮಾದರಿ ಮಾಧ್ಯಮಿಕ ಶಾಲೆಗಳಿಗೆ ಅಡಿಪಾಯ, ಆಧುನಿಕ ಕಾರ್ಗೋ-ಕಮ್-ಕೋಚಿಂಗ್ ಟರ್ಮಿನಲ್ ಅಗ್ತೋರಿ, ಗುವಾಹಟಿಯಿಂದ ಲುಮ್ಡಿಂಗ್‌ಗೆ ಶೋಖುವಿ (ನಾಗಾಲ್ಯಾಂಡ್) ಮತ್ತು ಮಂಡಿಪಥರ್ (ಮೇಘಾಲಯ) ವರೆಗಿನ ರೈಲಿಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ.