ಸತ್ಯಸಾಯಿ ಜಿಲ್ಲೆ, ಜನವರಿ 26: ಬಿಸಿಬಿಸಿ ಮೀನಿನ ಸಾರು ಇನ್ನೇನು ಕೆಲವೇ ಕ್ಷಣಗಳಲ್ಲಿ ಸಿದ್ಧವಾಗುವುದಿತ್ತು. ಆ ಇಬ್ಬರು ಸಹೋದರರು ಒಟ್ಟಿಗೆ ಕುಳಿತು ತಿನ್ನಲು ನಿರ್ಧರಿಸಿದ್ದರು. ಆದರೆ ಮೀನಿನ ಸಾರು ಸಿದ್ಧವಾಗುವ ಮೊದಲು, ಅಣ್ಣನನ್ನು ಅವನ ಕಿರಿಯ ಸಹೋದರ ಕೊಂದುಹಾಕಿದ್ದಾನೆ. ಮೀನಿನ ಸಾರು ಅನ್ನ ಪ್ರಾಣವನ್ನೇ ಕಿತ್ತುಕೊಂಡಿದೆ. ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ವಿವರಕ್ಕೆ ಹೋದರೆ.. ಶ್ರೀ ಸತ್ಯಸಾಯಿ ಜಿಲ್ಲೆಯ ತನಕಲ್ಲು ಮಂಡಲದ ನಡಿಮಿಕುಂಟಪಲ್ಲಿ ಗ್ರಾಮದ ಸಂಜೀವ್ ಮತ್ತು ವೆಂಕಟೇಶ್ ಇಬ್ಬರು ಸಹೋದರರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದು ದಿನ ಅಣ್ಣನಾದವನು ತನ್ನ ಹೆಂಡತಿ ತವರು ಮನೆಗೆ ಹೋದಾಗ ಮಾರುಕಟ್ಟೆಗೆ ಹೋಗಿ ಮನೆಗೆ ಮೀನು ತಂದಿದ್ದಾನೆ.
ಆದರೆ ಅಣ್ಣ ಸಂಜೀವ ತನ್ನ ಕಿರಿಯ ಸಹೋದರ ವೆಂಕಟೇಶನ ಹೆಂಡತಿಗೆ ಮೀನಿನ ಸಾರು ಬೇಯಿಸಲು ಹೇಳಿದ್ದಾನೆ. ತಮ್ಮ ವೆಂಕಟೇಶನ ಪತ್ನಿ ಮೀನಿನ ಸಾರು ಬೇಯಿಸಲು ಮಸಾಲೆ ತಯಾರಿಸುತ್ತಿದ್ದಾಗ ಸಹೋದರರಿಬ್ಬರು ಮದ್ಯ ಸೇವಿಸಿ ಫುಲ್ ಟೈಟ್ ಆಗಿದ್ದಾರೆ. ಬಳಿಕ ಇಬ್ಬರು ಸಹೋದರರ ನಡುವೆ ಮೀನಿನ ಸಾರು ಬೇಯಿಸುವ ವಿಚಾರದಲ್ಲಿ ಜಗಳವಾಗಿದೆ.
ಮೀನಿನ ಸಾರು ಬೇಗ ಬೇಗ ಬೇಯಿಸುವ ಸಲುವಾಗಿ, ಸಂಜೀವ್ ಹಾಸಿಗೆಯ ಮೇಲೆ ಮಲಗಿದ್ದ ತಮ್ಮ ವೆಂಕಟೇಶನನ್ನು ಮಸಾಲೆ ತಯಾರಿಸಲು ಸಹಾಯ ಮಾಡುವಂತೆ ಪದೇ ಪದೇ ಕೀಟಲೆ ಮಾಡಿದ್ದಾನೆ. ಇದರಿಂದ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದುಹೋಗಿದೆ. ಇತ್ತ ಅಣ್ಣತಮ್ಮ ಇಬ್ಬರೂ ಜಗಳವಾಡುತ್ತಿರುವಾಗ ವೆಂಕಟೇಶನ ಹೆಂಡತಿ ಮೀನಿನ ಸಾರು ಬೇಯಿಸಲು ಎಲ್ಲವನ್ನೂ ಸಿದ್ಧಪಡಿಸಿ ಒಲೆಯನ್ನು ಹೊತ್ತಿಸಿದಳು.
ಆದರೆ ಅಷ್ಟರಲ್ಲಿ ಕಿರಿಯ ಸಹೋದರ ವೆಂಕಟೇಶ್ ಕುಡಿದ ಮತ್ತಿನಲ್ಲಿ ದೊಣ್ಣೆ ತಂದು ಅಣ್ಣ ಸಂಜೀವನ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸಂಜೀವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೀನಿನ ಸಾರು ಅಡುಗೆ ಮಾಡುವ ವಿವಾದ ಕೊನೆಗೆ ಅಣ್ಣನ ಪ್ರಾಣವನ್ನೇ ತೆಗೆಯುವ ಮಟ್ಟಕ್ಕೆ ಬಂದಿತ್ತು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.