ಇಂದಿಗೆ ಪೆಟ್ರೋಲ್​ ಬೆಲೆ ಶತಕ ಬಾರಿಸಬೇಕಿತ್ತು! ಆದ್ರೆ ನಿಶ್ಚಲವಾಗಿ ನಿಂತುಬಿಟ್ಟಿದೆ. ಏನಿದರ ರಾಜಕೀಯ? ಇಲ್ಲಿದೆ ವಿವರ

| Updated By: Digi Tech Desk

Updated on: Mar 25, 2021 | 11:31 AM

Petrol price | ಎಲಕ್ಷನ್​ಗಳು ಮುಗಿಯುತ್ತಿದ್ದಂತೆ ಹಿಂದಿನ ಬಾಕಿ ಸಮೇತ ಒಮ್ಮೆಗೇ ಬೆಲೆ ಏರಿಕೆ ಜಡಿದರೆ ಗ್ರಾಹಕನ ಸ್ಥಿತಿ ಆ ದೇವರಿಗೇ ಪ್ರೀತಿ ಆದೀತು! ಅಂದರೆ ಇನ್ನೊಂದೆರಡು ತಿಂಗಳಲ್ಲಿ ಪೆಟ್ರೋಲ್ ಬೆಲೆ (ಹಿಂದಿನ ಬಾಕಿಯನ್ನೂ ಸೇರಿಸಿಕೊಂಡು) ನೂರಾರು ರೂಪಾಯಿ ಆಗಿಬಿಟ್ಟರೆ ಗ್ರಾಹಕನನ್ನು ಆ ದೇವರೇ ಕಾಪಾಡಬೇಕು.

ಇಂದಿಗೆ ಪೆಟ್ರೋಲ್​ ಬೆಲೆ ಶತಕ ಬಾರಿಸಬೇಕಿತ್ತು! ಆದ್ರೆ ನಿಶ್ಚಲವಾಗಿ ನಿಂತುಬಿಟ್ಟಿದೆ. ಏನಿದರ ರಾಜಕೀಯ? ಇಲ್ಲಿದೆ ವಿವರ
ಪೆಟ್ರೋಲ್​, ಡೀಸೆಲ್​ (ಸಾಂದರ್ಭಿಕ ಚಿತ್ರ)
Follow us on

ಹೌದು! ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ಸಮನೆ ಜರ್​ ಅಂತಾ ಪೆಟ್ರೋಲ್​ ಬೆಲೆ ನಿಗಿನಿಗಿ ಕೆಂಡಂದಂತೆ ಗ್ರಾಹಕನ ಜೇಬು ಸುಡುತ್ತಿತ್ತು. ಆದರೆ ಏಕಾಏಕಿ ಈ ತಿಂಗಳ ಆರಂಭದಿಂದಲೂ ಒಂದು ಪೈಸೆಯೂ ಏರಿಕೆ ಕಂಡಿಲ್ಲ. ಈ ವಿದ್ಯಮಾನ ಗಮನಿಸಿದ ಗ್ರಾಹಕರು ಆಶ್ಚರ್ಯಚಕಿತರಾಗಿದ್ದಾರೆ.

ಹಾಗೆ ನೋಡಿದರೆ ಪೆಟ್ರೋಲ್​ ಬೆಲೆ ಈ ತಿಂಗಳಲ್ಲಿ ಶತಕ ಬಾರಿಸಬೇಕಿತ್ತು! ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಈ ತಿಂಗಳು, ಮುಂದಿನ ತಿಂಗಳೂ ಸಹ ಪೆಟ್ರೋಲ್​ ಬೆಲೆ ಏರುವುದಿಲ್ಲ ಬಿಡಿ ಅನ್ನುತ್ತಿದ್ದಾರೆ ರಾಜಕೀಯ ಪಂಡಿತರು. ಇದ್ದಕ್ಕಿದ್ದ ಹಾಗೆ ಇವರು ಯಾರು ರಾಜಕೀಯ ಪಂಡಿತರು? ಪೆಟ್ರೋಲ್​ ಬೆಲೆಗೂ ರಾಜಕೀಯಕ್ಕೂ ಏನು ನಂಟು ಅಂತಾ ಕೇಳಿದರೆ… ಅಲ್ಲೇ ಇರುವುದು ನಂಟು! ಎಂಬುದು ಲವಲೇಶವೂ ಅನುಮಾನವಿಲ್ಲದೆ ದೃಢಪಡುತ್ತದೆ.

ಅದಕ್ಕೂ ಮುನ್ನ.. ಈ ಪೆಟ್ರೋಲ್​ ಬೆಲೆ ನಿರ್ಧಾರದ ವಿಷಯವನ್ನು ಆಯಾ ಕಂಪನಿಗಳ ಹೆಗಲಿಗೆ ವಹಿಸಿ ಯಾವುದೋ ಕಾಲವಾಗಿದೆ. ತಾಜಾ ಬೆಳವಣಿಗೆಗಳಿಗೆ ಅನುಸಾರವಾಗಿ ದೈನಂದಿನ ದಿನಮಾನದಲ್ಲಿ ಸಾರ್ವಜನಿಕ ವಲಯದಲ್ಲಿರುವ ಪೆಟ್ರೋಲ್​ ಸರಬರಾಜು ಕಂಪನಿಗಳೇ ಬೆಲೆ ನಿರ್ಧರಿಸಬೇಕು ಎಂಬುದು ನಿಯಮ. ಆದರೆ ಕಳೆದ 20 ದಿನಗಳಿಂದ ಪೆಟ್ರೋಲ್​ ಬೆಲೆ ನಿಗದಿಯಲ್ಲಿ ರಾಜಕೀಯ ನುಸುಳಿದ್ದು ಒಂದೂ ಪೈಸೆ ಬೆಲೆ ಏರದಂತೆ ನೋಡಿಕೊಳ್ಳುವಲ್ಲಿ ರಾಜಕೀಯ ವಲಯ ಯಶಸ್ವಿಯಾಗಿದೆ.

ಗಮನಿಸಿ, ಪೆಟ್ರೋಲ್​ ಬೆಲೆ ಗಗನಚುಂಬಿಯಾದಾಗ ಬೆಲೆ ಇಳಿಸಿ ಎಂದು ಇಡೀ ದೇಶ ಒಕ್ಕೊರಲಿಂದ ಕೇಳಿದಾಗ ಅದನ್ನು ಕಿವಿಗೆ ಹಾಕಿಕೊಳ್ಳದ ಕೇಂದ್ರ ವಿತ್ತ ಸಚಿವೆ, ಪೆಟ್ರೋಲಿಯಂ ಖಾತೆ ಸಚಿವ, ವಗೈರೆ ವಗೈರೆಗಳು ನಮಗೂ ಅದಕ್ಕೂ ಸಂಬಂಧವಿಲ್ಲ; ಅದೆಲ್ಲಾ ಪೆಟ್ರೋಲಿಯಂ ಕಂಪನಿಗಳ ನಿರ್ಧಾರಗಳು. ನಮ್ಮ ಕೈಯಲ್ಲಿ ಏನೂ ಇಲ್ಲ ಅಂದಿದ್ದರು.

ಅಂತಾರಾಷ್ಟ್ರೀಯ ಕಚ್ಚಾ ತೈಲ ದರವೂ ಪೆಟ್ರೋಲಿಯಂ ಕಂಪನಿಗಳ ಕೈ ಕಚ್ಚುತ್ತಿದೆ, ಆದರೂ..

ಆದರೆ ಈಗ ಮಾಡುತ್ತಿರುವುದೇನು? ದೇಶದಲ್ಲಿ ಆರೇಳು ಕಡೆ ವಿಧಾನಸಭಾ ಚುನಾವಣೆಗಳು, ಬೈ ಎಲೆಕ್ಷನ್​ಗಳ ಭರಾಟೆಯಿರುವಾಗ ಅಪ್ಪಿತಪ್ಪಿಯೂ ಬೆಲೆ ಏರಿಸಬೇಡಿ ಎಂದು ಕೇಂದ್ರವೇ ಫರ್ಮಾನು ಹೊರಡಿಸಿದಂತಿದೆ. ಚುನಾವಣೆ/ಮತದಾನ ಪರ್ವ ಇನ್ನೂ ಒಂದು ತಿಂಗಳ ಕಾಲ ಜಾರಿಯಲ್ಲಿರಲಿದೆ. ಅಲ್ಲಿಯವರೆಗೂ ಪೆಟ್ರೋಲ್​ ಬೆಲೆ ಏರಿಸಬಾರದು ಎಂಬ ಅಲಿಖಿತ ನಿಯಮವೂ ಜಾರಿಯಲ್ಲಿರುತ್ತದೆ ಎಂಬಂತಾಯಿತು.

ಅಂತಾರಾಷ್ಟ್ರೀಯ ಕಚ್ಚಾ ತೈಲ ದರವೂ ಪೆಟ್ರೋಲಿಯಂ ಕಂಪನಿಗಳ ಕೈ ಕಚ್ಚುತ್ತಿದೆ, ಆದರೂ..
ಗಮನಿಸಿ, ಇದೀಗ ಅಂತಾರಾಷ್ಟ್ರೀಯ ಸ್ತರದಲ್ಲಿ ಕಚ್ಚಾ ತೈಲ ದರ ಪೆಟ್ರೋಲಿಯಂ ಕಂಪನಿಗಳ ಕೈ ಕಚ್ಚುತ್ತಿದೆ. ಬ್ಯಾರಲ್​ಗೆ 64 ಡಾಲರ್​ ಇದ್ದ ತೈಲ ಬೆಲೆ ಇದೀಗ 68 ಡಾಲರ್​ಗೆ ನೆಗೆದಿದೆ. ಅಂದರೆ ಆಮದು ದರ ಮತ್ತಷ್ಟು ಹೆಚ್ಚಳವಾಗಿದೆ. ಕಂಪನಿಗಳಿಗೆ ಒಂದು ಲೀಟರ್​ ಪೆಟ್ರೋಲ್​ಗೆ ಕನಿಷ್ಟ 5 ರೂಪಾಯಿ ನಷ್ಟವುಂಟಾಗುತ್ತಿದೆ. ಅಂದ್ರೆ ಕಂಪನಿಗಳಿಗೆ ಬೆಲೆ ಏರಿಕೆ ಅನಿವಾರ್ಯವಾಗಿದೆ. ಆದರೂ ರಾಜಕೀಯ ನಾಯಕರ ಆಣತಿಯಂತೆ ಬೆಲೆ ಏರಿಕೆ ಮಾಡದೆ ಸುಮ್ಮನಿದೆ.

ಕರ್ನಾಟಕದಲ್ಲಿ 2018ರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿಯೂ ಹೀಗೆಯೇ ಆಗಿತ್ತು. ಏಪ್ರಿಲ್ 24ರಿಂದ ಮೇ 13 ರವರೆಗೂ, 19 ದಿನಗಳ ಕಾಲ ರಾಜ್ಯದಲ್ಲಿ ಪೆಟ್ರೋಲ್​ ಬೆಲೆ ಏರಿಸುವುದು ಬೇಡ ಎಂದು ಕೇಂದ್ರ ಸರ್ಕಾರ ಅನೌಪಚಾರಿಕವಾಗಿ ಹೇಳಿತ್ತು. ಅದರಂತೆ ಪೆಟ್ರೋಲ್​ ಬೆಲೆ ಏರಿಕೆಯಾಗಿರಲಿಲ್ಲ!

ಮುಂದಿದೆ ಮಾರಿಹಬ್ಬ:
ಹಾಗಂತ ಗ್ರಾಹಕರು ಪೆಟ್ರೋಲ್​ ದರ ಹೆಚ್ಚಳವಾಗುತ್ತಿಲ್ಲ ಎಂದು ಬೀಗುವಂತಿಲ್ಲ. ಏಕೆಂದರೆ ಎಲಕ್ಷನ್​ಗಳು ಮುಗಿಯುತ್ತಿದ್ದಂತೆ ಹಿಂದಿನ ಬಾಕಿ ಸಮೇತ ಒಮ್ಮೆಗೇ ಬೆಲೆ ಏರಿಕೆ ಜಡಿದರೆ ಗ್ರಾಹಕನ ಸ್ಥಿತಿ ಆ ದೇವರಿಗೇ ಪ್ರೀತಿ ಆದೀತು! ಅಂದರೆ ಇನ್ನೊಂದೆರಡು ತಿಂಗಳಲ್ಲಿ ಪೆಟ್ರೋಲ್ ಬೆಲೆ (ಹಿಂದಿನ ಬಾಕಿಯನ್ನೂ ಸೇರಿಸಿಕೊಂಡು) ನೂರಾರು ರೂಪಾಯಿ ಆಗಿಬಿಟ್ಟರೆ ಗ್ರಾಹಕನನ್ನು ಆ ದೇವರೇ ಕಾಪಾಡಬೇಕು. ಅಂದಹಾಗೆ, ಮಾಮೂಲಿ ಬೆಲೆ ಏರಿಕೆ ಪ್ರವೃತ್ತಿಯಲ್ಲಿ ಇಂದು ಮಾರ್ಚ್​ 20ರಂದು ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ 105 ರೂಪಾಯಿಯಾಗಬೇಕಿತ್ತು! ಆದರೆ 94.20 ರೂಪಾಯಿಯಲ್ಲೇ ನಿಂತಿದೆ…

Published On - 11:27 am, Sat, 20 March 21