ಪ್ರಧಾನಿ ಮೋದಿ ಭೇಟಿ ಮಾಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ: ಭಾರತದೊಂದಿಗೆ ಸಂಬಂಧ ಬಲಪಡಿಸಲು ಅಮೆರಿಕ ಉತ್ಸಾಹ

ಎರಡೂ ದೇಶಗಳಲ್ಲಿರುವ ಪ್ರಜಾಪ್ರಭುತ್ವ, ಬಹುತ್ವದಂಥಾ ಮೂಲ ಮೌಲ್ಯಗಳಿಂದಾಗಿ ನಮ್ಮ ಸಂಬಂಧ ಆತ್ಮೀಯವಾಗಿದೆ ಎಂದು ಪ್ರಧಾನಿ ಮೋದಿ ಲಾಯ್ಡ್ ಜೇಮ್ಸ್ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಅಮೆರಿಕಾ ನೂತನ ಅಧ್ಯಕ್ಷ ಜೋ ಬೈಡೆನ್​ಗೆ ತಮ್ಮ ಶುಭಾಶಯಗಳನ್ನು ತಿಳಿಸುವಂತೆಯೂ ಕೇಳಿಕೊಂಡರು.

ಪ್ರಧಾನಿ ಮೋದಿ ಭೇಟಿ ಮಾಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ: ಭಾರತದೊಂದಿಗೆ ಸಂಬಂಧ ಬಲಪಡಿಸಲು ಅಮೆರಿಕ ಉತ್ಸಾಹ
ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್
Follow us
TV9 Web
| Updated By: ganapathi bhat

Updated on:Apr 06, 2022 | 6:57 PM

ದೆಹಲಿ: ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ, ಸಮೃದ್ಧಿ ನೆಲೆಗೊಳ್ಳಲು ಅಮೆರಿಕಾ ಭಾರತದೊಂದಿಗೆ ಸದಾ ಜೊತೆಯಾಗಿರುತ್ತದೆ. ಭಾರತದ ಜೊತೆಗೆ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಅಮೆರಿಕಾ ಉತ್ಸುಕವಾಗಿದೆ ಎಂದು ಯುಎಸ್​ನ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಇಂದು (ಮಾರ್ಚ್ 19) ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಯಲ್ಲಿ ಭಾಗವಹಿಸಿದ ಅವರು, ಇಂಡೋ ಫೆಸಿಫಿಕ್ ಪ್ರದೇಶದಲ್ಲಿರುವ ಉಭಯ ದೇಶಗಳ ರಕ್ಷಣಾ ವ್ಯವಸ್ಥೆಯ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು.

ಎರಡೂ ದೇಶಗಳಲ್ಲಿರುವ ಪ್ರಜಾಪ್ರಭುತ್ವ, ಬಹುತ್ವದಂಥಾ ಮೂಲ ಮೌಲ್ಯಗಳಿಂದಾಗಿ ನಮ್ಮ ಸಂಬಂಧ ಆತ್ಮೀಯವಾಗಿದೆ ಎಂದು ಪ್ರಧಾನಿ ಮೋದಿ ಲಾಯ್ಡ್ ಜೇಮ್ಸ್ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಅಮೆರಿಕಾ ನೂತನ ಅಧ್ಯಕ್ಷ ಜೋ ಬೈಡೆನ್​ಗೆ ತಮ್ಮ ಶುಭಾಶಯಗಳನ್ನು ತಿಳಿಸುವಂತೆಯೂ ಕೇಳಿಕೊಂಡರು.

ಅಮೆರಿಕಾ ಅಧ್ಯಕ್ಷ ಬೈಡೆನ್​ರ ಶುಭಾಶಯಗಳನ್ನು ಮೋದಿಗೆ ತಿಳಿಸಿದ ಲಾಯ್ಡ್ ಜೇಮ್ಸ್ ಆಸ್ಟಿನ್, ರಕ್ಷಣಾ ಕಾರ್ಯದರ್ಶಿಯಾಗಿ ಭಾರತಕ್ಕೆ ಮೊದಲ ಭೇಟಿ ನೀಡುತ್ತಿದ್ದಾರೆ. ಆಸ್ಟಿನ್ ಮೂರು ದೇಶಗಳ ಪ್ರವಾಸ ಕೈಗೊಂಡಿದ್ದು, ಕೊನೆಯದಾಗಿ ಇಂದು (ಮಾರ್ಚ್ 19) ಭಾರತಕ್ಕೆ ಆಗಮಿಸಿದ್ದಾರೆ. ಜಪಾನ್ ಹಾಗೂ ದಕ್ಷಿಣ ಕೊರಿಯಾ ಭೇಟಿಯ ಬಳಿಕ ಲಾಯ್ಡ್ ಜೇಮ್ಸ್ ಆಸ್ಟಿನ್ ಭಾರತಕ್ಕೆ ಆಗಮಿಸಿದ್ದಾರೆ.

ಭಾರತ ಹಾಗೂ ಅಮೆರಿಕಾ ಸಂಬಂಧ ಬಲಗೊಳಿಸುವ ಜೊತೆಗೆ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಸಹಕಾರ ಹೆಚ್ಚಿಸುವುದು, ಪೂರ್ವ ಲಡಾಖ್​ನಲ್ಲಿ ಚೀನಾ ತೋರಿರುವ ನಡೆ, ಭಯೋತ್ಪಾದನೆ ಹಾಗೂ ಅಫ್ಘಾನ್ ಶಾಂತಿಯ ಸವಾಲು ಇತ್ಯಾದಿ ವಿಚಾರಗಳನ್ನು ಮೋದಿ ಹಾಗೂ ಆಸ್ಟಿನ್ ಚರ್ಚಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದ್ದವು.

ಸುಮಾರು 30 ಮಲ್ಟಿ ಮಿಷನ್ ಪ್ರಿಡೇಟರ್ ಡ್ರೋನ್​ಗಳನ್ನು, ಅಂದಾಜು 3 ಬಿಲಿಯನ್ ಯುಎಸ್ ಡಾಲರ್​ಗಳಿಗೆ ಅಮೆರಿಕಾದಿಂದ ಖರೀದಿಸುವುದು ಕೂಡ ಭಾರತದ ಯೋಜನೆಯಾಗಿದೆ. ಈ ಕುರಿತಾಗಿಯೂ ಮಾತುಕತೆ ನಡೆಯಬಹುದು ಎಂದು ಮೂಲಗಳು ತಿಳಿಸಿದ್ದವು.

ಯುಎಸ್ ರಕ್ಷಣಾ ಕಾರ್ಯದರ್ಶಿ ಭಾರತೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನೂ ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾಳೆ (ಮಾರ್ಚ್ 20) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೂ ಆಸ್ಟಿನ್ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗುವ ಸಾಧ್ಯತೆಯನ್ನೂ ಅಂದಾಜಿಸಲಾಗಿದೆ.

ಇದನ್ನೂ ಓದಿ: ಮಾನವ ಹಕ್ಕುಗಳ ಉಲ್ಲಂಘನೆ ಆರೋಪ; ಕೈಯಲ್ಲಿ ದೂರು ಹಿಡಿದು ಭಾರತಕ್ಕೆ ಬಂದ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ

Quad Summit 2021: ಪ್ರಜಾಪ್ರಭುತ್ವದ ಮೌಲ್ಯಗಳಿಂದ ನಾವು ಒಂದಾಗಿದ್ದೇವೆ: ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

Published On - 11:18 pm, Fri, 19 March 21