ಏಲೂರು, (ಪಶ್ಚಿಮ ಗೋದಾವರಿ) ಡಿಸೆಂಬರ್ 10: ಸೀಮಂತ, ಯಾವುದೇ ಮಹಿಳೆ ತನ್ನ ಜೀವಿತಾವಧಿಯಲ್ಲಿ ಆಚರಿಸಲು ಇಷ್ಟಪಡುವ ಹಬ್ಬ. ಏಕೆಂದರೆ ತನ್ನ ಹೊಟ್ಟೆಯಲ್ಲಿರುವ ಮಗು ಹಂತ ಹಂತವಾಗಿ ರೂಪಾಂತರಗೊಳ್ಳುತ್ತಿದ್ದಂತೆ ಮಹಿಳೆ ತುಂಬಾ ಸಂತೋಷವನ್ನು ಅನುಭವಿಸುತ್ತಾಳೆ. ಇಂತಹ ಸಮಯದಲ್ಲಿ ಗಂಡನ ಬಂಧುಗಳು, ಹೆಣ್ಣಿನ ಬಂಧುಗಳು ಎಲ್ಲರೂ ಸೇರಿ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ನಂತರ ಆಕೆಗೆ ಹುಟ್ಟಿದ ಮಗುವನ್ನು 21ನೇ ದಿನ ಅದೇ ಅದ್ಧೂರಿಯಿಂದ ತೊಟ್ಟಿಲು ಶಾಸ್ತ್ರ ( Cradle Ceremony) ಆಚರಿಸುತ್ತಾರೆ. ಇದು ಮಾನವರಲ್ಲಿ ಕಂಡುಬರುವ ಸಾಮಾನ್ಯ ಸಂಪ್ರದಾಯವಾಗಿದೆ. ಆದರೆ ಜಾನುವಾರು ಮತ್ತಿತರೆ ಸಾಕು ಪ್ರಾಣಿಗಳಿಗೂ (Cow) ಸೀಮಂತ ನಡೆಸುವ (Seemantha) ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಏಲೂರು ಜಿಲ್ಲೆಯಲ್ಲಿ ಇಂತಹುದೇ ಕಾರ್ಯಕ್ರಮ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಏಲೂರು ಜಿಲ್ಲೆಯ (West Godavari) ನಿಡ್ಮಾರು ಮಂಡಲದ ಫತ್ತೇಪುರಂ ಗ್ರಾಮದಲ್ಲಿ 21 ದಿನಗಳ ಚಿಕ್ಕ ಕರುವಿಗೆ ತೊಟ್ಟಿಲು ಸೇವೆ ಕಾರ್ಯಕ್ರಮವನ್ನು ಗ್ರಾಮಸ್ಥರು ಆಯೋಜಿದ್ದು, ಕಣ್ಣಿಗೆ ಹಬ್ಬವಾಗಿ ಕಂಗೊಳಿಸಿದೆ. ಗ್ರಾಮದ ನಡಿಮಪಲ್ಲಿ ವಾಸು ಎಂಬುವವರು ತಮ್ಮ ಹಸುವಿಗೆ ವೆಂಕಟಲಕ್ಷ್ಮಿ ಎಂದು ನಾಮಕರಣ ಮಾಡಿ ಸ್ಥಳೀಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ. ಪ್ರತಿದಿನ ದೇವಸ್ಥಾನಕ್ಕೆ ಬರುವ ಭಕ್ತರು ಆಂಜನೇಯ ಸ್ವಾಮಿಯ ಜೊತೆಗೆ ತಾಯಿ ಹಸುವಿಗೂ ಪೂಜಿಸುತ್ತಾರೆ. ಆ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು. ಹಾಗಾಗಿ ಗ್ರಾಮಸ್ಥರೆಲ್ಲರೂ ಸೇರಿ ತಿಂಗಳು ಮುಗಿದ ನಂತರ ಗರ್ಭಿಣಿಯಾದ ಮಹಿಳೆಯರಿಗೆ ಸೀಮಂತ ಮಾಡುವಂತೆ ವೆಂಕಟಲಕ್ಷ್ಮಿ ಹಸುವಿಗೂ ಮಾಡಬೇಕು ಎಂದು ನಿರ್ಧರಿಸಿದರು.
ವಿಜಯದಶಮಿಯ ದಿನದಂದು ಗ್ರಾಮಸ್ಥರೆಲ್ಲ ಸೇರಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲಾ ಗ್ರಾಮಸ್ಥರಿಗೆ 30 ಬಗೆಯ ಖಾದ್ಯಗಳೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಂದಹಾಗೆ, ಕಳೆದ ತಿಂಗಳು 17ರಂದು ವೆಂಕಟಲಕ್ಷ್ಮಿಗೆ ಹೆಣ್ಣು ಕರು ಜನಿಸಿದೆ. ಇದರಿಂದ ಗ್ರಾಮಸ್ಥರು ಸಂತಸಗೊಂಡಿದ್ದರು. ಹಸುವಿಗೆ ಸೀಮಂತ ಕಾರ್ಯ ಎಷ್ಟು ಅದ್ಧೂರಿಯಾಗಿ ಮಾಡಿದ್ದರೋ, ಅದೇ ರೀತಿ ಕರುವಿನ ಜನನವನ್ನೂ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದರು. ಇತ್ತೀಚೆಗೆ ಆಂಜನೇಯಸ್ವಾಮಿ ದೇಗುಲದಲ್ಲಿ ಕರುವಿಗೆ 21 ದಿನವಾದಾಗ ಪುಟ್ಟ ಕರುವಿಗೆ ಬಟ್ಟೆಗಳನ್ನು ಜೋಡಿಸಿ, ಮಂಗಳ ಘೋಷ ಹಾಕಿದರು.
Also Read: ಮಾನವರಂತೆ ವಿಶಿಷ್ಟ ರೀತಿಯಲ್ಲಿ ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಮಾಡಿ, ಮುದ್ದುಗೆರೆದ ಮುದ್ದಗೆರೆ ಗ್ರಾಮಸ್ಥರು!
ಆ ಪುಟ್ಟ ಕರುವಿಗೆ ಹಣೆಯಲ್ಲಿ ತಿಲಕವಿಟ್ಟು, ಅಕ್ಷತೆ ಹಾಕಿ ಆಶೀರ್ವದಿಸಿದರು. ಇದಲ್ಲದೆ, ತೊಟ್ಟಿಲಿಗೆ ಹೂವು, ಬಣ್ಣಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಪ್ರಸ್ತುತ ಈ ಪುಟ್ಟ ಕರುವಿಗೆ ನಡೆದ ಜನ್ಮದಿನ ಆಚರಣೆ ಏಲೂರು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಸು ಮತ್ತು ಕರುವನ್ನು ಸ್ವಂತ ಕುಟುಂಬದ ಸದಸ್ಯರಂತೆ ಗ್ರಾಮಸ್ಥರು ಸಮಾರಂಭ ಏರ್ಪಡಿಸಿ ಶುಭ ಕೋರಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ