ಜುಲೈ ತಿಂಗಳಿನಿಂದ ಒಂದಿಷ್ಟು ತೆರಿಗೆದಾರರು ಹೆಚ್ಚುವರಿ ಟಿಡಿಎಸ್ (Tax Deducted at Source – TDS) ಕಟ್ಟಬೇಕಾಗುತ್ತದೆ. ಇದನ್ನು ಪರಿಶೀಲಿಸಲೆಂದು ಆದಾಯ ತೆರಿಗೆ ಇಲಾಖೆಯು ಟ್ಯಾಕ್ಸ್ ಪೋರ್ಟಲ್ನಲ್ಲಿ ಹೊಸ ವ್ಯವಸ್ಥೆ ಕಲ್ಪಿಸಿದೆ. 2021ರ ಬಜೆಟ್ನಲ್ಲಿ ಕೇಂದ್ರ ಹಣಕಾಸು ಇಲಾಖೆಯು ಆದಾಯ ತೆರಿಗೆ ಕಾಯ್ದೆಗೆ 206 ಎಬಿ ಸೆಕ್ಷನ್ ಹೊಸದಾಗಿ ಸೇರಿಸಿತ್ತು. ಐಟಿ ರಿಟರ್ನ್ ಸಲ್ಲಿಸದವರು ಮತ್ತು ಟಿಡಿಎಸ್ ವಂಚಿಸುವವರನ್ನು ಪತ್ತೆಹಚ್ಚಲು ಮತ್ತು ಹೆಚ್ಚುವರಿ ಬಾಧ್ಯತೆ, ದಂಡ ವಿಧಿಸಲು ಇದು ಅವಕಾಶ ಕಲ್ಪಿಸಿತ್ತು. ಯಾವುದೇ ತೆರಿಗೆ ಪಾವತಿದಾರ ಕಳೆದ ಎರಡು ಆರ್ಥಿಕ ವರ್ಷದಲ್ಲಿ ಟಿಡಿಎಸ್ ಪಾವತಿಸದಿದ್ದರೆ, ಬಾಕಿ ಉಳಿಸಿಕೊಂಡಿರುವ ಟಿಡಿಎಸ್ ಮೊತ್ತ ₹ 50 ಸಾವಿರ ಮೀರಿದರೆ ಆದಾಯ ತೆರಿಗೆ ರಿಟರ್ನ್ಸ್ (Income Tax Returns – ITR) ಸಲ್ಲಿಕೆ ವೇಳೆ ಜುಲೈ 1ರಿಂದ ಹೆಚ್ಚುವರಿ ತೆರಿಗೆ ಕಡಿತಗೊಳಿಸಲಾಗುತ್ತದೆ. ಇಂಥವರಿಗೆ ಮುಂದಿನ ಟಿಡಿಎಸ್ ಕಟಾವಣೆ ಸಂದರ್ಭದಲ್ಲಿ ದುಪ್ಪಟ್ಟು ಅಥವಾ ನಿರ್ದಿಷ್ಟ ಸೆಕ್ಷನ್ ಅಥವಾ ನಿಯಮಗಳ ಪ್ರಕಾರ ನಿಗದಿಯಾಗಿರುವಷ್ಟು ಅಥವಾ ಶೇ 5ರಷ್ಟು ಹೆಚ್ಚುವರಿ ಟಿಡಿಎಸ್ ವಿಧಿಸಲಾಗುತ್ತದೆ. ಯಾವ ದಂಡದ ಪ್ರಮಾಣ ಹೆಚ್ಚಾಗುವುದೋ ಅದು ಅನ್ವಯವಾಗುತ್ತದೆ ಎಂಬ ನಿಯಮವಿರುವುದನ್ನು ಗಮನಿಸಬೇಕು.
ಜುಲೈ ತಿಂಗಳಿನಿಂದ ಹೆಚ್ಚುವರಿ ಟಿಡಿಎಸ್ ಕಟಾವಣೆಗೆ ವ್ಯಕ್ತಿಯೊಬ್ಬನ ಬಾಧ್ಯತೆಯನ್ನು ತೆರಿಗೆ ಸಂಗ್ರಾಹಕ ಅಥವಾ ತೆರಿಗೆ ಕಡಿತಗೊಳಿಸುವ ವ್ಯಕ್ತಿ ಪರಿಶೀಲಿಸಬೇಕು. ಯಾವುದೇ ಸೇವೆ ಪಡೆದುಕೊಳ್ಳುವ ಅಥವಾ ಉತ್ಪನ್ನ ಖರೀದಿಸುವವರಿಗೆ ಇದು ಅನ್ವಯಿಸುತ್ತದೆ. ಇದು ಅಂಥ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಹೆಚ್ಚುವರಿ ಕಾರ್ಯಭಾರಕ್ಕೆ ಕಾರಣವಾಗಬಹುದು. ಇದನ್ನು ಕಡಿಮೆ ಮಾಡಲೆಂದೇ ಆದಾಯ ತೆರಿಗೆ ಕಾಯ್ದೆಯಲ್ಲಿ 206 ಎಬಿ ಮತ್ತು 206 ಸಿಸಿಎ ಸೆಕ್ಷನ್ಗಳ ಅಡಿ ವಿವರಣೆಗಳನ್ನು ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಾಹಕರು ಒಂದು ಅಥವಾ ಹಲವು ಪಾನ್ ಕಾರ್ಡ್ (Permanent Account Number – PAN) ಬಳಸಿ ವಿವರಗಳನ್ನು ಹುಡುಕಬಹುದು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಾಹಿತಿ ನೀಡಿದೆ. ಆದಾಯ ತೆರಿಗೆ ಇಲಾಖೆಯ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ಈ ಆಯ್ಕೆ ಲಭ್ಯವಿದೆ ಎಂದು ಸಿಬಿಡಿಟಿ ತಿಳಿಸಿದೆ.
ಒಂದು ನಿರ್ದಿಷ್ಟ ಪಾನ್ ಕಾರ್ಡ್ ಆಧರಿಸಿ ವಿವರ ಹುಡುಕಿದಾಗ ಅಂಥ ಮಾಹಿತಿಯು ಕಂಪ್ಯೂಟರ್ ಸ್ಕ್ರೀನ್ ಮೇಲೆ ಡಿಸ್ಪ್ಲೇ ಆಗುತ್ತದೆ. ಹಲವರ ಮಾಹಿತಿ ಹುಡುಕಿದಾಗ ಸಿಗುವ ಮಾಹಿತಿಯನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಮೊದಲ ಬಾರಿಗೆ ಜೂನ್ 10ರಂದು ವಿವರಗಳು ಹೊರಬಿದ್ದಿದ್ದವು. ಜಿಎಸ್ಟಿ ಕುರಿತಂತೆ ಇಂಥ ಬಾಧ್ಯತೆಗಳನ್ನು ಪರಿಶೀಲಿಸಲು ಜಿಎಸ್ಟಿ ಪೋರ್ಟಲ್ನಲ್ಲಿ ಅದಾಗಲೇ ಸೌಲಭ್ಯ ಲಭ್ಯವಿತ್ತು. ಇದೀಗ ಆದಾಯ ತೆರಿಗೆ ಪೋರ್ಟಲ್ನಲ್ಲಿಯೂ ಇಂಥದ್ದೇ ಸೌಲಭ್ಯ ಲಭ್ಯವಿರುವುದು ಉತ್ತಮ ಬೆಳವಣಿಗೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ.
2021-22ರ ಹಣಕಾಸು ವರ್ಷದ ಆರಂಭದಲ್ಲಿಯೇ 2019-20 ಮತ್ತು 2020-21ರ ಹಣಕಾಸು ವರ್ಷಗಳ ತೆರಿಗೆ ಬಾಧ್ಯತೆ ಉಳಿಸಿಕೊಂಡಿರುವವರ ಪಟ್ಟಿಯನ್ನು ಆದಾಯ ತೆರಿಗೆ ಇಲಾಖೆ ಸಿದ್ಧಪಡಿಸಿತ್ತು. ಈ ಪಟ್ಟಿಯಲ್ಲಿ ವಾರ್ಷಿಕ ಟಿಡಿಎಸ್ ಮೊತ್ತ ₹ 50 ಸಾವಿರ ಅಥವಾ ಅದಕ್ಕೂ ಹೆಚ್ಚಿರುವವರ ಹೆಸರುಗಳಿದ್ದವು. ಇಂಥವರ ಹೆಸರನ್ನು ತೆರಿಗೆ ಸಂಗ್ರಹಾಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. 2021-22ರ ಹಣಕಾಸು ವರ್ಷದಲ್ಲಿ ಈ ಪಟ್ಟಿಗೆ ಹೊಸದಾಗಿ ಯಾವುದೇ ಹೆಸರನ್ನು ಸೇರಿಸುವುದಿಲ್ಲ. ಪ್ರತಿ ವರ್ಷವು ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. 2022-23ರ ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಎಚ್ಚರ ತಪ್ಪಿದರೆ ತೆರಿಗೆ ಹೊರೆ: ವಿವೇಕ್ ಮಲ್ಯ
ಕೇಂದ್ರ ಹಣಕಾಸು ಇಲಾಖೆ ಜಾರಿ ಮಾಡಿರುವ ಈ ಹೊಸ ಬೆಳವಣಿಗೆ ಕುರಿತು ಟಿವಿ9 ಕನ್ನಡ ಡಿಜಿಟಲ್ಗೆ ಪ್ರತಿಕ್ರಿಯಿಸಿದ ಹಣಕಾಸು ತಜ್ಞ ವಿವೇಕ್ ಮಲ್ಯ, ‘ತೆರಿಗೆ ಪಾವತಿ ವಿಚಾರದಲ್ಲಿ ತಮ್ಮ ಬಾಧ್ಯತೆಗಳನ್ನು ಪೂರೈಸದವರಿಗೆ ಜುಲೈ 1ರಿಂದ ದುಬಾರಿ ದಂಡ ಬೀಳುತ್ತದೆ. ಟಿಡಿಎಸ್ಗೆ ಒಳಪಡುವ ಎಲ್ಲರೂ ಹಿಂದಿನ ಎರಡು ಆರ್ಥಿಕ ವರ್ಷಗಳಲ್ಲಿ ತೆರಿಗೆ ವಿವರ (ಇನ್ಕಮ್ ಟ್ಯಾಕ್ಸ್ ರಿಟರ್ನ್) ಸಲ್ಲಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಟಿಡಿಎಸ್ ಮೇಲೆ ಶೇ 5ರಿಂದ 20ರಷ್ಟು ದಂಡ ಬೀಳುತ್ತದೆ. ಐಟಿ ರಿಟರ್ನ್ ಸಲ್ಲಿಸದ ಗುತ್ತಿಗೆದಾರರಿಗೆ ಶೇ 2, ಭೂಮಾಲೀಕರು ಮತ್ತು ಸೇವಾದಾತರಿಗೆ ಶೇ 10ರಷ್ಟು ದಂಡ ಬೀಳುತ್ತದೆ. ವರ್ಷಕ್ಕೆ ₹ 50 ಸಾವಿರಕ್ಕಿತಂಲೂ ಹೆಚ್ಚು ಆದಾಯ ಪಡೆಯುತ್ತಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಸರ್ಕಾರದ ಈ ಹೊಸ ನಿಯಮವು ಸಣ್ಣ ಗುತ್ತಿಗೆದಾರರು, ಮನೆ ಮಾಲೀಕರು, ಸೇವಾದಾತರು, ಸೆಕ್ಯುರಿಟಿ ಕಂಪನಿಗಳು, ಸ್ಕ್ರಾಪ್ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದರು.
‘ಯಾವುದೇ ಕಂಪನಿ ₹ 50 ಸಾವಿರಕ್ಕೂ ಹೆಚ್ಚು ಮೊತ್ತದ ಗುತ್ತಿಗೆಯನ್ನು ನಿರ್ದಿಷ್ಟ ವ್ಯಕ್ತಿ, ಸಂಸ್ಥೆಗೆ ನೀಡಿದಾಗಲೂ ಈ ನಿಯಮ ಅನ್ವಯಿಸುತ್ತದೆ. ಈ ಹಿಂದೆಯೂ ಇಂಥ ನಿಯಮಗಳು ಇದ್ದವು. ಆದರೆ ಈಗ ಯಾರು ಹಿಂದಿನ 2 ವರ್ಷದ ತೆರಿಗೆ ಕಟ್ಟಿಲ್ಲ ಎಂದಾದರೆ ಟಿಡಿಎಸ್ ಮೊತ್ತ ಹೆಚ್ಚಾಗುತ್ತದೆ. ಈ ಟಿಡಿಎಸ್ ಮೇಲೆ ಜಿಎಸ್ಟಿ ಸ್ಲ್ಯಾಬ್ ಬೀಳುತ್ತೆ. ರಿಟರ್ನ್ ಫೈಲ್ ಮಾಡಿದರೆ ಟಿಡಿಎಸ್ ಕಡಿಮೆಯಾಗುತ್ತೆ ಎಂದು ಸರ್ಕಾರ ಪರೋಕ್ಷವಾಗಿ ಹೇಳಿದೆ. ರಿಟರ್ನ್ ಫೈಲ್ ಮಾಡದಿದ್ದರೆ ಟಿಡಿಎಸ್ ಹೆಚ್ಚಾಗುತ್ತದೆ. ಒಂದು ವೇಳೆ ಟಿಡಿಎಸ್ ಕಟಾವಣೆ ಮಾಡಿಕೊಳ್ಳುವಾಗ ಸಂಬಂಧಿಸಿದ ವ್ಯಕ್ತಿ ರಿಟರ್ನ್ ಕಟ್ಟಿದ್ದಾರೆ ಇಲ್ಲ ಎನ್ನುವುದನ್ನು ಗಮನಿಸಿಯೇ ಟಿಡಿಎಸ್ ಸ್ಲ್ಯಾಬ್ ನಿರ್ಧರಿಸಿಕೊಳ್ಳಬೇಕು. ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿ ಪಾನ್ ನಂಬರ್ ಹಾಕಿ, ಹಿಂದಿನ ವರ್ಷದ ರಿಟರ್ನ್ಸ್ ಸಲ್ಲಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸದಿದ್ದರೆ ಕೆಲಸ ಕೊಟ್ಟವರು ಅಥವಾ ಸೇವೆ ಪಡೆದುಕೊಂಡವರೇ ಸೇವಾದಾತರ ಪರವಾಗಿ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ಪಾವತಿಸದವರ ಹೆಸರು ಸಾರ್ವಜನಿಕಾಗಿ ಸಿಗುವಂತೆ ಮಾಡುವ ಮೂಲಕ ‘ನೇಮಿಂಗ್ ಅಂಡ್ ಶೇಮಿಂಗ್’ ತಂತ್ರ ಅನುಸರಿಸಲೂ ಸರ್ಕಾರ ಮುಂದಾಗಿದೆ. ಹಣ ಪಾವತಿಸುವಾಗ ಕಂಪನಿಗಳು ಎಚ್ಚರ ವಹಿಸದಿದ್ದರೆ ಹೆಚ್ಚುವರಿ ತೆರಿಗೆ ತೆರಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿಕೊಳ್ಳುತ್ತವೆ’ ಎಂದು ಅವರು ಎಚ್ಚರಿಸಿದರು.
(Income Tax Return TDS New Rules from july how IT Department will check the Liability)
ಇದನ್ನೂ ಓದಿ: ಕೊವಿಡ್ ಸಂಕಷ್ಟದಲ್ಲೂ ರಾಜ್ಯದಲ್ಲಿ ತೆರಿಗೆ ಸಂಗ್ರಹ ತೃಪ್ತಿಕರ: ವಾರ್ಷಿಕ ಗುರಿಯ ಶೇ 14ರಷ್ಟು ಸಾಧನೆ
ಇದನ್ನೂ ಓದಿ: GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇಕಡಾ 5 ಜಿಎಸ್ಟಿ ಮುಂದುವರಿಕೆ