ಕೊವಿಡ್​ 19 ಲಸಿಕೆ ಸರ್ಟಿಫಿಕೆಟ್​​ನ್ನು ನವೀಕರಿಸಿದ ಭಾರತ; ಯುಕೆ ತಕರಾರಿನ ಬೆನ್ನಲ್ಲೇ ಹೊಸ ಆವೃತ್ತಿ ಬಿಡುಗಡೆ

ಈ ತಿಂಗಳ ಪ್ರಾರಂಭದಲ್ಲಿ ಯುಕೆ ತನ್ನ ನವೀಕೃತ ಪ್ರಯಾಣ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಕೊವಿಶೀಲ್ಡ್​ ಲಸಿಕೆಯ ಸೂತ್ರಗಳು ಅನುಮೋದಿತಗೊಂಡಿವೆ. ಹಾಗಾಗಿ ನಮಗೆ ಲಸಿಕೆ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಪ್ರಮಾಣಪತ್ರದ ಬಗ್ಗೆ ಸಮ್ಮತಿ ಇಲ್ಲ ಎಂದಿತ್ತು.

ಕೊವಿಡ್​ 19 ಲಸಿಕೆ ಸರ್ಟಿಫಿಕೆಟ್​​ನ್ನು ನವೀಕರಿಸಿದ ಭಾರತ; ಯುಕೆ ತಕರಾರಿನ ಬೆನ್ನಲ್ಲೇ ಹೊಸ ಆವೃತ್ತಿ ಬಿಡುಗಡೆ
ಆರ್​.ಆರ್.ಶರ್ಮಾ (ಎನ್​ಎಚ್​ಎ ಸಿಇಒ)
Edited By:

Updated on: Oct 01, 2021 | 9:24 AM

ಈಗಂತೂ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಕೊವಿಡ್​ 19 ಲಸಿಕೆ ಪ್ರಮಾಣಪತ್ರ (Covid 19 Vaccine Certificate) ಕಡ್ಡಾಯವಾಗಿದೆ. ಆದರೆ ಭಾರತೀಯರ ಕೊರೊನಾ ಲಸಿಕೆ ಪ್ರಮಾಣ ಪತ್ರದ ಬಗ್ಗೆ ನಮಗೆ ಸಂಪೂರ್ಣ ಸಹಮತ ಇಲ್ಲ ಎಂದು ಯುಕೆ  ಸರ್ಕಾರ (ಬ್ರಿಟನ್​ ಸರ್ಕಾರ) ಹೇಳಿದೆ. ಅದೂ ಕೂಡ ಭಾರತದ ಕೊವಿಶೀಲ್ಡ್​ ಲಸಿಕೆ ಬಗ್ಗೆ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ನಂತರ ಕೊವಿನ್​ (CoWIN) ಮೂಲಕ ಪಡೆಯುವ ಸರ್ಟಿಫಿಕೇಟ್​​ ಬಗ್ಗೆ ನಮಗೆ ಸಮಾಧಾನವಿಲ್ಲ ಎಂದು ಯುಕೆ ಹೇಳಿದೆ. ಹಾಗೇ, ಭಾರತ ಸೇರಿ ಇನ್ನೂ ಕೆಲವು ರಾಷ್ಟ್ರಗಳು ಕೊರೊನಾ ಲಸಿಕೆ ಹಾಕಿದ್ದರೂ, ಬ್ರಿಟನ್​ಗೆ ಹೋದರೆ ಅಲ್ಲಿ 10 ದಿನಗಳ ಕಾಲ ಕ್ವಾರಂಟೈನ್​​ನಲ್ಲಿಯೇ ಇರಬೇಕಾಗಿದೆ.  ಭಾರತದ ಪ್ರಯಾಣಿಕರು ಕೊವಿಶೀಲ್ಡ್ ಲಸಿಕೆ ಹಾಕಿಸಿಕೊಂಡು, ಸರ್ಟಿಫಿಕೆಟ್​ ತೆಗೆದುಕೊಂಡು ಹೋಗಿದ್ದರೂ, ಅದನ್ನು ಮಾನ್ಯ ಮಾಡದೆ, ಅವರನ್ನು ಲಸಿಕೆಹಾಕದವರಂತೆ ನಡೆಸಿಕೊಳ್ಳಲಾಗುತ್ತದೆ. 

ಹೀಗೆ ಭಾರತದ ಕೊವಿಡ್​ 19 ಸರ್ಟಿಫಿಕೇಟ್​ ಬಗ್ಗೆ ಯುಕೆ ಅಸಮ್ಮತಿ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಕೊರೊನಾ ಲಸಿಕೆ ಪ್ರಮಾಣಪತ್ರವನ್ನು ನವೀಕರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸಿದ್ಧಪಡಿಸಿರುವ ಕೊವಿಡ್​ 19 ಪ್ರಮಾಣಪತ್ರದ ದಾಖಲೆಗಳಿಗೆ ಅನುಸಾರವಾಗಿಯೇ ಭಾರತೀಯರ ಕೊವಿಡ್​ 19 ಲಸಿಕೆ ಪ್ರಮಾಣಪತ್ರವನ್ನೂ ಎನ್​ಎಚ್​ಎ ಅಪ್​ಡೇಟ್​ ಮಾಡಿದೆ. ಡಬ್ಲ್ಯೂಎಚ್​ಒ ಮಾರ್ಗಸೂಚಿಯಂತೆಯೇ ರೂಪಿಸಿದೆ. ಅದರ ಅನ್ವಯ ಭಾರತೀಯರ ಕೊವಿಡ್​ 19 ಲಸಿಕೆ ಪ್ರಮಾಣ ಪತ್ರದ ಮೇಲೆ ಆಯಾ ವ್ಯಕ್ತಿಗಳ ಹುಟ್ಟಿದ ದಿನಾಂಕ (Date Of Birth)ದ ಉಲ್ಲೇಖ ಇರಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎನ್​ಎಚ್​ಎ ಸಿಇಒ ಆರ್​.ಎಸ್​.ಶರ್ಮಾ, ಕೊರೊನಾ ಲಸಿಕೆ ಅಭಿಯಾನಕ್ಕೆ ವಿಶ್ವ ದರ್ಜೆಯ ವೇದಿಕೆ ನಿರ್ಮಾಣ ಮಾಡುವ ದೃಷ್ಟಿಯಿಂದ ಇದೀಗ ಕೊವಿನ್​ ಆ್ಯಪ್​ ಮೂಲಕ ಸಿಗುವ ಕೊರೊನಾ ಪ್ರಮಾಣ ಪತ್ರವನ್ನು ಡಬ್ಲ್ಯೂಎಚ್​ಒದ ‘ಡಿಜಿಟಲ್​ ಡಾಕ್ಯುಮೆಂಟೇಶನ್​ ಆಫ್​ ಕೊವಿಡ್ 19 ಸರ್ಟಿಫಿಕೇಟ್​-ವ್ಯಾಕ್ಸಿನ್ ಸ್ಟೇಟಸ್​’ (ಕೊವಿಡ್​ 19 ಪ್ರಮಾಣಪತ್ರದ ಡಿಜಿಟಲ್​ ದಾಖಲೆ-ಲಸಿಕೆ ಸ್ಥಿತಿಗತಿ)ಗೆ ಅನುಸಾರವಾಗಿ ನವೀಕರಿಸಲಾಗಿದೆ. ಇನ್ನು ಮುಂದೆ ಅಂತಾರಾಷ್ಟ್ರೀಯ ಪ್ರಯಾಣ ಮಾಡುವ ಭಾರತೀಯರು ಕೊವಿನ್​ ಆ್ಯಪ್​​ನಿಂದ ಅಂತಾರಾಷ್ಟ್ರೀಯ ಆವೃತ್ತಿಯ ಕೊವಿಡ್​ 19 ಸರ್ಟಿಫಿಕೇಟ್​​ನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು. ಅದರಲ್ಲಿ ಆ ವ್ಯಕ್ತಿಯ ಡೇಟ್​ ಆಫ್​ ಬರ್ತ್​ ಇರಲಿದೆ ಎಂದು ಹೇಳಿದ್ದಾರೆ.

ಈ ತಿಂಗಳ ಪ್ರಾರಂಭದಲ್ಲಿ ಯುಕೆ ತನ್ನ ನವೀಕೃತ ಪ್ರಯಾಣ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಕೊವಿಶೀಲ್ಡ್​ ಲಸಿಕೆಯ ಸೂತ್ರಗಳು ಅನುಮೋದಿತಗೊಂಡಿವೆ. ಹಾಗಾಗಿ ನಮಗೆ ಲಸಿಕೆ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಕೊರೊನಾ ಲಸಿಕೆ ಪಡೆದವರಿಗೆ ಭಾರತ ನೀಡುತ್ತಿರುವ ಪ್ರಮಾಣಪತ್ರದ ಬಗ್ಗೆ ನಮಗೆ ಸಹಮತ ಇಲ್ಲ. ಹಾಗಾಗಿ, ಭಾರತದಿಂದ ಯುಕೆಗೆ ಬಂದವರು ಕೊವಿಶೀಲ್ಡ್ ಲಸಿಕೆ ಪಡೆದು ಬಂದಿದ್ದರೂ ಅವರನ್ನು ಲಸಿಕೆ ಪಡೆಯದವರು ಎಂದೇ ಪರಿಗಣಿಸಲಾಗುತ್ತದೆ. ನಮ್ಮಲ್ಲಿಗೆ ಬರುವ ಮೊದಲು ಅವರು ಆರ್​ಟಿ-ಪಿಸಿಆರ್​ ಟೆಸ್ಟ್​ ಮಾಡಿಸಿರಬೇಕು. ಯುಕೆಗೆ ಬಂದು ಇಳಿದ 2 ಮತ್ತು 8ನೇ ದಿನಕ್ಕೆ ಮತ್ತೆ ಆರ್​ಟಿ-ಪಿಸಿಆರ್​ ಟೆಸ್ಟ್​ ಮಾಡಿಸಬೇಕು ಮತ್ತು 10 ದಿನಗಳ ಕಾಲ ಕ್ವಾರಂಟೈನ್​​ನಲ್ಲಿರುವುದು ಕಡ್ಡಾಯ ಎಂದು ಯುಕೆ ಸರ್ಕಾರ ಹೇಳಿತ್ತು. ಈ ನಿಯಮಗಳು ಅಕ್ಟೋಬರ್​ 4ರಿಂದ ಅನ್ವಯ ಎಂದು ಹೇಳಿತ್ತು.  ಈ ಬಗ್ಗೆ ಯುಕೆ ಮತ್ತು ಭಾರತ ಸರ್ಕಾರದ ನಡುವೆ ಮಾತುಕತೆ ನಡೆದಿದ್ದರೂ ಬ್ರಿಟನ್​ ತನ್ನ ನಿಲುವು ಬದಲಿಸಲಿಲ್ಲ. ಕೊವಿಡ್ 19 ಲಸಿಕೆ ಸರ್ಟಿಫಿಕೇಟ್​ನಲ್ಲಿ ಹುಟ್ಟಿದ ವರ್ಷದ ಇದ್ದರೆ ಸಾಲದು, ಸಂಪೂರ್ಣವಾಗಿ ಹುಟ್ಟಿದ ದಿನ, ತಿಂಗಳುಗಳ ಉಲ್ಲೇಖವೂ ಇರಬೇಕು ಎಂಬುದು ಆ ದೇಶದ ಬೇಡಿಕೆ.

ಕಳೆದ ವಾರ ಈ ಬಗ್ಗೆ ಮಾತನಾಡಿದ್ದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್​. ಆರ್.ಶರ್ಮಾ, ನಮ್ಮ ಕೊರೊನಾ ಲಸಿಕೆ ಸರ್ಟಿಫಿಕೇಟ್​​ನ್ನು ಎಷ್ಟು ಸಾಧ್ಯವೋ ಅಷ್ಟು ಪರಿಪೂರ್ಣಗೊಳಿಸಿದ್ದೇವೆ.  ಇದು ಕ್ಯೂಆರ್​ ಕೋಡ್​ ಆಧಾರಿತವಾಗಿದ್ದು, ಸಂಪೂರ್ಣವಾಗಿ ಪರಿಶೀಲಿತಗೊಂಡಿದ್ದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತಹ ಅಂಶಗಳನ್ನು ಅಳವಡಿಸಲಾಗಿದೆ. ಅದರ ಹೊರತಾಗಿ ಚಿಕ್ಕ ಸಮಸ್ಯೆಯೆಂದರೆ ಅದು ಜನ್ಮದಿನಾಂಕ ಇಲ್ಲದೆ ಇರುವುದು. ಅದು ಮುಖ್ಯ ಎಂದು ನಮಗೆ ಅನ್ನಿಸಿಲ್ಲ.  ಹಾಗಾಗಿ ನಾವು ಲಸಿಕೆ ಹಾಕುವ ಸಂದರ್ಭದಲ್ಲಿ ಹುಟ್ಟಿದ ವರ್ಷವನ್ನಷ್ಟೇ ಕೇಳಿದ್ದೆವು. ಇನ್ನು ಅಂತಾರಾಷ್ಟ್ರೀಯ ಪ್ರಯಾಣಿಕರ ವಿಚಾರಕ್ಕೆ ಬಂದರೆ ಅವರ ಪಾಸ್​ಪೋರ್ಟ್​​ನಲ್ಲಿ ಡೇಟ್​ ಆಫ್​ ಬರ್ತ್​ ಇದ್ದೇ ಇರುತ್ತದೆ ಎಂದೂ ಹೇಳಿದ್ದರು.

ಇದನ್ನೂ ಓದಿ: ಕೊವಿಡ್​ 19 ಲಸಿಕೆ ಸರ್ಟಿಫಿಕೆಟ್​​ನ್ನು ನವೀಕರಿಸಿದ ಭಾರತ; ಯುಕೆ ತಕರಾರಿನ ಬೆನ್ನಲ್ಲೇ ಹೊಸ ಆವೃತ್ತಿ ಬಿಡುಗಡೆ

ಸಿಂದಗಿಯಲ್ಲಿ ಭೂಕಂಪದ ಅನುಭವ: ತಡರಾತ್ರಿ 3-4 ಬಾರಿ ಭೂಮಿಯಿಂದ ಕೇಳಿ ಬಂತು ಭಾರಿ ಶಬ್ದ, ಆತಂಕ

Published On - 9:07 am, Fri, 1 October 21