
ಬೆಂಗಳೂರು, ಮೇ 12: ಎರಡು ದಿನಗಳ ಹಿಂದೆ ಪ್ರಧಾನಿ ಮೋದಿಯವರು (Narendra Modi) ಚಿನ್ನ, ಇಂಧನ ಖರೀದಿ ಮಿತಗೊಳಿಸಿ ಎಂದು ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟಿಹಾಕಿದೆ. ಈ ಬೆನ್ನಲ್ಲೇ ದೇಶದಲ್ಲಿ ಡೀಸೆಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಚಿಲ್ಲರೆ ಪೆಟ್ರೋಲ್ ಬಂಕ್‌ಗಳಲ್ಲಿ ಹೈ ಸ್ಪೀಡ್ ಡೀಸೆಲ್ (HSD) ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ‘ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್’ ಪ್ರಧಾನ ಮಂತ್ರಿಗಳ ಕಚೇರಿಗೆ (PMO) ದೂರು ಸಲ್ಲಿಸಿದೆ.
ಬಲ್ಕ್ (ಸಗಟು) ಸರಬರಾಜು ದರ ಮತ್ತು ಚಿಲ್ಲರೆ ಮಾರಾಟ ದರದ ನಡುವೆ ಭಾರಿ ವ್ಯತ್ಯಾಸ ಉಂಟಾಗಿರುವುದು ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಕೈಗಾರಿಕೆಗಳು ಮತ್ತು ದೊಡ್ಡ ಸಂಸ್ಥೆಗಳು ಈ ಹಿಂದೆ ಬಲ್ಕ್ ಸರಬರಾಜು ಮೂಲಕ ಡೀಸೆಲ್ ಪಡೆಯುತ್ತಿದ್ದವು. ಆದರೆ ಈಗ ಅಲ್ಲಿ ದರ ಹೆಚ್ಚಾಗಿರುವುದರಿಂದ, ಕೈಗಾರಿಕಾ ಮಟ್ಟದ ಖರೀದಿಗಳು ಚಿಲ್ಲರೆ ಪೆಟ್ರೋಲ್ ಬಂಕ್‌ಗಳತ್ತ ತಿರುಗಿವೆ. ಇದರಿಂದಾಗಿ ಸಾಮಾನ್ಯ ಗ್ರಾಹಕರಿಗೆ ಮೀಸಲಿಟ್ಟ ಇಂಧನವು ಕೈಗಾರಿಕೆಗಳ ಪಾಲಾಗುತ್ತಿದೆ.
ಇದಕ್ಕೆ ಮುಖ್ಯ ಕಾರಣ ಸಂಸ್ಥಾತ್ಮಕ ಗ್ರಾಹಕರು ಚಿಲ್ಲರೆ ಬಂಕ್‌ಗಳಿಂದ ಖರೀದಿ ಮಾಡುತ್ತಿರುವುದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ OMCಗಳನ್ನು ಒಳಗೊಂಡ ಸಮಗ್ರ ಪರಿಶೀಲನೆ ಅಗತ್ಯವಾಗಿದೆ.
ಇದನ್ನೂ ಓದಿ ಅಗತ್ಯ ಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ, ದೇಶೀಯವಾಗಿಯೂ ಇಂಧನ ದರಗಳು ಏರುಗತಿಯಲ್ಲಿವೆ. ಇದರ ನಡುವೆ ಈಗ ಡೀಸೆಲ್ ಅಭಾವ ಸೃಷ್ಟಿಯಾಗಿರುವುದು ಆತಂಕ ಮೂಡಿಸಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸದಿದ್ದರೆ ಸಾರಿಗೆ ಮತ್ತು ಕೃಷಿ ವಲಯದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Tue, 12 May 26